ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಉಳಿಸಿಕೊಳ್ಳದಿದ್ದರೆ ಅಪಾಯ’

ಹೋರಾಟಗಾರ ‘ಹೂವಪ್ಪ ನೆನಪು’ ಮತ್ತು ವಿಚಾರ ಸಂಕಿರಣದಲ್ಲಿ ಕಲ್ಕುಳಿ ವಿಠಲ್‌ ಹೆಗ್ಡೆ ಅಭಿಮತ
Last Updated 13 ಜೂನ್ 2022, 3:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸಂವಿಧಾನಕ್ಕೆ ಗಂಡಾಂತರವೊಡ್ಡುವ ಹುನ್ನಾರ ನಡೆಯುತ್ತಿದೆ. ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಬದುಕು, ಹೋರಾಟ ಉಳಿಸಿಕೊಳ್ಳಲು ಸಾಧ್ಯ ಇಲ್ಲ’ ಎಂದು ಹೋರಾಟಗಾರ ಕಲ್ಕುಳಿ ವಿಠಲ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಹೂವಪ್ಪ ಅವರ ಒಡನಾಡಿ ಬಳಗದ ವತಿಯಿಂದ ಭಾನುವಾರ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಹೋರಾಟಗಾರ ಹೂವಪ್ಪ ನೆನಪು ಮತ್ತು ವಿಚಾರಸಂಕಿರಣದಲ್ಲಿ ‘ಪ್ರಚಲಿತ ವಿದ್ಯಮಾನಗಳು ಮತ್ತು ಸಂಘಟನಾ ಸವಾಲುಗಳು’ ಕುರಿತು ಅವರು ಮಾತನಾಡಿದರು. ‘ಸಂವಿಧಾನವನ್ನು ಬದಲಾಯಿಸುವುದಕ್ಕೇ ನಾವು ಬಂದಿರುವುದು ಎಂದು ಕೆಲವರು ಹೇಳಿದ್ದಾರೆ. ಅಂಥವರನ್ನು ದೂರ
ಇಡಬೇಕು. ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ, ಅದರ ಆಶಯದಂತೆ ಕಾರ್ಯನಿರ್ವಹಿಸುತ್ತೇವೆ ಎನ್ನುವವರನ್ನು ಮಾತ್ರ ಚುನಾವಣೆಯಲ್ಲಿ ಬೆಂಬಲಿಸಬೇಕು’ ಎಂದು ಸಲಹೆ ನೀಡಿದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವೇ ಎಲ್ಲರಿಗೂ ಆಸರೆ. ಅದನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲರೂ ಒಟ್ಟಾಗಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

‘ಸತ್ಯವು ಸುಳ್ಳಿನ ಮೋಡದಲ್ಲಿ ಮರೆಯಾಗಿದೆ. ಸುಳ್ಳು ಮೆರೆಯುತ್ತಿದೆ. ಸುಳ್ಳನ್ನೇ ಜನರು ನಂಬುತ್ತಿದ್ದಾರೆ. ನಾವೆಲ್ಲರೂ ಸಮಸ್ಯೆಗಳ ಮೂಲ ಮತ್ತು ಸತ್ಯವನ್ನು ತಿಳಿದುಕೊಳ್ಳಬೇಕು’ ಎಂದರು.

‘ಯೋಗ್ಯತೆ ಇಲ್ಲದವರು ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಧೈರ್ಯ ಮಾಡಿದ್ದಾರೆ. ಸಮಾಜ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರು (ಬಸವಣ್ಣ, ನಾರಾಯಣಗುರು...) ಮೊದಲಾದವರನ್ನ ಕೈಬಿಟ್ಟು ಮನುಸ್ಮೃತಿ ಹೇರಲು ಮುಂದಾಗಿದ್ದಾರೆ’ ಎಂದು ಆಪಾದಿಸಿದರು. ‘ಪ್ರಭುತ್ವದ ಮೇಲೆ ಶಕ್ತಿಯುತವಾಗಿ ಒತ್ತಡ ಉಂಟು ಮಾಡುವ ಶಕ್ತಿ ಹೋರಾಟಗಳಿಗೆ ಇಲ್ಲವಾಗಿದೆ. ಹೋರಾಟಗಾರರನ್ನು ಬಾಯಿಮುಚ್ಚಿಸುವ ತಂತ್ರವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್‌ ಕಾಲದಲ್ಲಿ ಜನರು ಬಹಳಷ್ಟು ಕುಟುಂಬಗಳು ದುರವಸ್ಥೆ ಅನುಭವಿಸಿವೆ. ಕೋವಿಡ್‌ ಸಾವಿನ ಲೆಕ್ಕ ಸುಳ್ಳು ಲೆಕ್ಕ ನೀಡಿದ್ದಾರೆ. ಜನರನ್ನು ದಾರಿ ತಪ್ಪಿಸಿದ್ದಾರೆ’ ಎಂದು ದೂರಿದರು. ‘ಕೋವಿಡ್‌ ವಿಪತ್ತಿನಿಂದ ಪ್ರಪಂಚವನ್ನು ಕಾಪಾಡಿದ್ದು ವಿಜ್ಞಾನಿಗಳು. ಲಸಿಕೆ ಕಂಡುಹಿಡಿದರು. ಜನರು ಮೂಢನಂಭಿಕೆಗಳನ್ನು ನಂಬಬಾರದು. ವಿಜ್ಞಾನವನ್ನು ನಂಬಬೇಕು. ನಾವು ಪರಿಸರವನ್ನು ಕಾಪಾಡದಿದ್ದರೆ ಮುಂದಿನ ಪೀಳಿಗೆ ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

ಮೂಡಿಗೆರೆ ವಕೀಲ ಎಚ್‌.ಕೆ.ರಘು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಟಿ.ರಾಧಾಕೃಷ್ಣ, ದಿನೇಶ್‌ ಪಟವರ್ಧನ್‌, ಕೆ.ಜೆ.ಮಂಜುನಾಥ್‌, ಹೂವಪ್ಪ ಅವರ ತಾಯಿ ಸಿದ್ಧಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT