ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಗೆ ಮಹಿಳೆ ಬಲಿ: ಪ್ರತಿಭಟನೆ

ಮೂಡಿಗೆರೆ: ಎಸ್ಟೇಟ್ ಕುಂದೂರು ಗ್ರಾಮದಲ್ಲಿ ಘಟನೆ, ಶಾಶ್ವತ ಪರಿಹಾರಕ್ಕೆ ಒತ್ತಾಯ
Last Updated 21 ನವೆಂಬರ್ 2022, 8:42 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಎಸ್ಟೇಟ್ ಕುಂದೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಕಾಡಾನೆ ದಾಳಿ ನಡೆಸಿ ಮಹಿಳೆಯನ್ನು ತುಳಿದು ಕೊಂದಿದ್ದು, ಕಾಡಾನೆ ದಾಳಿ ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರೂ ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಶೋಭಾ (45) ಕಾಡಾನೆ ದಾಳಿಗೆ ಮೃತಪಟ್ಟ ಮಹಿಳೆ.

ಸ್ಥಳಕ್ಕೆ ಬಂದ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ 'ಪ್ರತಿ ಕಾಡಾನೆ ದಾಳಿ ನಡೆದಾಗಲೂ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳು ಈ ಭಾಗದಲ್ಲಿ ದಾಳಿ ನಡೆಸುತ್ತಿರುವ ಮೂರು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು' ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಹುಲ್ಲೇಮನೆ ಚಂದ್ರೇಗೌಡ ಮಾತನಾಡಿ, ' ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಮೃತ ಮಹಿಳೆಯ ಪುತ್ರನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು, ಈ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸದಂತೆ ವೈಜ್ಞಾನಿಕ ಪರಿಹಾರ ರೂಪಿಸಬೇಕು' ಎಂದು ಒತ್ತಾಯಿಸಿದರು.

ಮಾಜಿ ಸಚಿವ ಬಿ.ಬಿ ನಿಂಗಯ್ಯ ಮಾತನಾಡಿ, ‘ಕಾಡಾನೆ ದಾಳಿಯನ್ನು ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಡಿಎಫ್ಓ ಕ್ರಾಂತಿ, ‘ತಕ್ಷಣ ₹2 ಲಕ್ಷ ಮೊತ್ತದ ಪರಿಹಾರ ನೀಡಲಾಗುವುದು, ಕಾಡಾನೆ ಹಿಡಿಯಲು ಇರುವ ಒತ್ತಾಯದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಮೃತರ ಕುಟುಂಬದವರಿಗೆ ಉದ್ಯೋಗ ನೀಡಲು ಇಟ್ಟಿರುವ ಬೇಡಿಯನ್ನು ಸಹ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದರು. ಇದಕ್ಕೆ ಒಪ್ಪದ ಪ್ರತಿಭಟನಕಾರರು ಪ್ರತಿಭಟನೆಯನ್ನು ರಾತ್ರಿಯವರೆಗೂ ಮುಂದುವರಿಸಿದರು.

ಬಿಜೆಪಿಯ ದೀಪಕ್ ದೊಡ್ಡಯ್ಯ ಮಾತನಾಡಿ, ‘ಕಾಡಾನೆಯಿಂದ ನಿರಂತರವಾಗಿ ಜೀವ ಹಾನಿಗಳು ಉಂಟಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು’ ಎಂದರು

ಬೇಡಿಕೆ ಈಡೇರುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ತಡರಾತ್ರಿಯವರೆಗೂ ಸ್ಥಳದಲ್ಲಿಯೇ ಶವವನ್ನು ಇಡಲಾಗಿತ್ತು. ಸ್ಥಳದಲ್ಲಿದ್ದ ವಿವಿಧ ರಾಜಕೀಯ ಮುಖಂಡರುಗಳು ಮಾತುಕತೆ ನಡೆಸಿ, ಅರಣ್ಯ ಇಲಾಖೆಯಿಂದ ₹2 ಲಕ್ಷದ ಪರಿಹಾರದ ಚೆಕ್‌ ಅನ್ನು ಮೃತರ ಕುಟುಂಬಕ್ಕೆ ನೀಡಿ, ಎಂಜಿಎಂ ಆಸ್ಪತ್ರೆಗೆ ಶವವನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಿದರು.

ಕಂದಾಯ ಇಲಾಖೆ ಉಪವಿಭಾಕಾಧಿಕಾರಿ ರಾಜೇಶ್, ಪೊಲೀಸ್ ಡಿವೈಎಸ್ ಪಿ ಪುರುಷೋತ್ತಮ, ಸರ್ಕಲ್ ಇನ್‌ಸ್ಪೆಕ್ಟರ್ ಸೋಮೇಗೌಡ, ಸತ್ಯನಾರಾಯಣ, ವಿವಿಧ ಠಾಣೆಗಳ ಸಬ್ ಇನ್‌ಸ್ಪೆಕ್ಟರ್‌ ಆದರ್ಶ, ಧನಂಜಯ, ಮಹಾಜನ್, ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ ವಿಜೇಂದ್ರ, ಪಿಡಿಒ ವಾಸುದೇವ್, ಎಚ್.ಜಿ ಸುರೇಂದ್ರ, ಕೆಂಜಿಗೆಕೇಶವ್, ದಯಾಕರ್, ಮೇಕನಗದ್ದೆ ಲಕ್ಷ್ಮಣಗೌಡ, ಬಿ.ಎಸ್ ಜಯರಾಂ ಇದ್ದರು.

ಭಯದ ವಾತಾವರಣ: ಕುಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಟಾವಿಗೆ ಬಂದಿರುವ
ಭತ್ತ, ಕಾಫಿ ಕೊಯ್ಲಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT