ಬಾಳೆಹೊನ್ನೂರು: ಗದಗ ಜಿಲ್ಲೆ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಅ.3ರಿಂದ 12ರವರೆಗೆ ನಡೆಯುವ ಶರನ್ನವರಾತ್ರಿ ದಸರಾ ಮಹೋತ್ಸವವು ಐತಿಹಾಸಿಕವಾಗಿರಲಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಬ್ಬಿಗೇರಿಯಲ್ಲಿ ಗುರುವಾರದಿಂದ ನಡೆಯಲಿರುವ 33ನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ತೆರಳುವ ಮುನ್ನ ಮಂಗಳವಾರ ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಂಭಾಪುರಿ ಸ್ವಾಮೀಜಿಯ ದಸರಾ ಧರ್ಮ ಸಮ್ಮೇಳನವು ಅಬ್ಬಿಗೇರಿಯಲ್ಲಿ ಆಯೋಜನೆಗೊಂಡಿದೆ. ಹಲವು ವರ್ಷಗಳಿಂದ ಅಲ್ಲಿ ದಸರಾ ನಡೆಸಬೇಕು ಎಂಬ ಆಶಯವಿತ್ತು.
ರೋಣ ಶಾಸಕ ಜಿ.ಎಸ್.ಪಾಟೀಲ, ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿವೆ. ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು, ಧರ್ಮಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಗೊಳ್ಳಲು ಎಲ್ಲ ಧರ್ಮಗಳು ಶ್ರಮಿಸುತ್ತಾ ಬಂದಿದ್ದು, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯದೊಂದಿಗೆ ಸಾತ್ವಿಕ ಸಮಾಜ ನಿರ್ಮಿಸಲು ರಂಭಾಪುರಿ ಪೀಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಬ್ಬಿಗೇರಿಯಲ್ಲಿ ನಡೆಯಲಿರುವ ದಸರಾ ನಾಡಹಬ್ಬದಲ್ಲಿ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಜನ ಪಾಲ್ಗೊಳ್ಳುವರೆಂಬ ವಿಶ್ವಾಸ ಇದ್ದು, 32 ವರ್ಷಗಳ ದಸರಾ ಮಹೋತ್ಸವಕ್ಕಿಂತ ವಿಭಿನ್ನವಾಗಿ ಅಬ್ಬಿಗೇರಿಯಲ್ಲಿ ಯಶಸ್ವಿಯಾಗಲಿದೆ ಎಂದರು.
ಬೆಳಿಗ್ಗೆ ಶ್ರೀಪೀಠದ ಎಲ್ಲಾ ದೈವ ಮಂದಿರದಲ್ಲಿ ವಿಶೇಷ ಅಷ್ಟೋತ್ತರ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸ್ವಾಮೀಜಿಗೆ ಗೌರವಾರ್ಪಣೆ ಮಾಡಿದರು.
ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ, ಸದಸ್ಯ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಫಿಲೋಮಿನಾ ತಾವ್ರೊ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.