ಚಿಕ್ಕಮಗಳೂರು: ಹಿಂದಿನ ಜನ್ಮದಲ್ಲಿ ಸಂಬಂಧ ಇತ್ತು ಎಂದು ವಿದೇಶಿ ಮಹಿಳೆಯನ್ನು ನಂಬಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ‘ಕೇವಲ ಫೌಂಡೇಷನ್’ನ ಯೋಗ ಗುರು ಪ್ರದೀಪ್ ಉಲ್ಲಾಳ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಆನ್‌ಲೈನ್‌ನಲ್ಲಿ ಯೋಗ ತರಬೇತಿ ಪಡೆಯುತ್ತಿದ್ದ ನನ್ನನ್ನು ಮಲ್ಲೇನಹಳ್ಳಿ ಬಳಿ ಇರುವ ಯೋಗ ಕೇಂದ್ರಕ್ಕೆ 2021 ಮತ್ತು 2022ರಲ್ಲಿ ಮೂರು ಬಾರಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ’ ಎಂದು ಯುವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
‘ಪಂಜಾಬ್‌ನ ನನ್ನ ಕುಟುಂಬ 2010ರಿಂದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆ. 2020ರಲ್ಲಿ ಸ್ನೇಹಿತನೊಬ್ಬನ ಮೂಲಕ ಪರಿಚಯವಾದ ಪ್ರದೀಪ್ ಉಲ್ಲಾಳ್, ಆನ್‌ಲೈನ್‌ನಲ್ಲಿ ಯೋಗಭ್ಯಾಸ ಮಾಡಿಸುತ್ತಿದ್ದ. 2021ರ ನವೆಂಬರ್ 1ರಂದು ಮಲ್ಲೇನಹಳ್ಳಿಗೆ ಕರೆಸಿಕೊಂಡಿದ್ದ. 21 ದಿನ ಇಲ್ಲೇ ಉಳಿದಿದ್ದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಹಿಂದಿನ ಜನ್ಮದಲ್ಲಿ ನಮ್ಮಿಬ್ಬರ ನಡುವೆ ಸಂಬಂಧ ಇತ್ತು ಎಂದು ಹೇಳಿ ಮೈ ಮುಟ್ಟುತ್ತಿದ್ದ. ಎನರ್ಜಿ ವರ್ಕ್, ಕುಂಡಲಿ ಬ್ಲಾಕ್, ಡಿವೈನ್ ಲವ್ ಮಾಡುತ್ತಿದ್ದೇನೆ ಎಂದು ಆಧ್ಯಾತ್ಮಿಕವಾಗಿ ಮಾತನಾಡಿ ಅತ್ಯಾಚಾರ ಮಾಡಿದ್ದ. ಕ್ಯಾಲಿಫೋರ್ನಿಯಾಕ್ಕೆ ವಾಪಸ್ ಹೋಗಿ 2022ರ ಫೆ.2ರಂದು ಮತ್ತೆ ವಾಪಸ್ ಬಂದು 10 ದಿನ ಉಳಿದಿದ್ದೆ. ಆ ಸಮಯದಲ್ಲಿ ಐದಾರು ಬಾರಿ ಅತ್ಯಾಚಾರ ಮಾಡಿದ್ದ. ಅದೇ ವರ್ಷ ಜುಲೈನಲ್ಲಿ ಮತ್ತೆ ಬಂದು 21 ದಿನ ತಂಗಿದ್ದೆ. ಅಗಲೂ ಎರಡು–ಮೂರು ಬಾರಿ ಅತ್ಯಾಚಾರ ಎಸಗಿದ್ದ. ಇದರಿಂದ ಗರ್ಭಿಣಿ ಸಹ ಆದೆ. ಇದೆಲ್ಲವೂ ಕೃಷ್ಣಲೀಲೆ ಹೀಗಾಗಲು ಸಾಧ್ಯವಿಲ್ಲ ಎಂದ ಹೇಳಿದ್ದ. ಕೊನೆಗೆ ಗರ್ಭಪಾತವಾಯಿತು’ ಎಂದು ವಿವರಿಸಿದ್ದಾರೆ.
‘ಪ್ರದೀಪ್‌ಗೆ ಈವರೆಗೆ ₹20 ಲಕ್ಷ ಮೌಲ್ಯದ ಉಡುಗೊರೆ ಕೊಟ್ಟಿದ್ದೇನೆ. ಮ್ಯೂಸಿಕ್ ಸಿಸ್ಟಮ್, ಕಾಶ್ಮೀರಿ ಕಾರ್ಪೆಟ್, 2 ಲ್ಯಾಪ್‌ಟಾಪ್, ಇನ್ನಿತರ ವಸ್ತುಗಳನ್ನು ಕೊಟ್ಟಿದ್ದೇನೆ. ಯೋಗ ಗುರೂಜಿ ಎಂದು ಹೇಳಿ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾನೆ’ ಎಂದು ದೂರಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.