ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ 11 ಮಂದಿಗೆ ಎಚ್‌1ಎನ್‌1ದೃಢ

ರೋಗ ಹರಡದಂತೆ ಮುನ್ನೆಚ್ಚರಿಕೆಗೆ ಸೂಚನೆ
Last Updated 15 ಅಕ್ಟೋಬರ್ 2018, 15:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಚ್‌1ಎನ್‌1, ಡೆಂಗಿ ಮೊದಲಾದ ಸಾಂಕ್ರಾಮಿಕ ರೋಗಗಳ ಹರಡದಂತೆ ಎಚ್ಚರವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಸೂಚಿಸಿದರು.

ನಗರದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರ. ಕೆಲವರು ಎಚ್‌1ಎನ್‌1ನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಇದೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ 11 ಮಂದಿಗೆ, ಜಿಲ್ಲೆಯಲ್ಲಿ 23 ಮಂದಿಗೆ ಎಚ್‌1ಎನ್‌1 ಇರುವುದು ದೃಢಪಟ್ಟಿದೆ. ಕೆಂಪನಹಳ್ಳಿಯಲ್ಲಿ ಈಚೆಗೆ ಒಬ್ಬರು ಮೃತಪಟ್ಟಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ತಿಳಿಸಿದರು.

‘ರೋಗ ನಿಯಂತ್ರಣ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಚ್‌1ಎನ್‌1 ಚಿಕಿತ್ಸೆ ನಿಟ್ಟಿನಲ್ಲಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಟ್ಯಾಮಿಫ್ಲೂ ಮಾತ್ರೆಗಳು ದಾಸ್ತಾನು ಇಡಲಾಗಿದೆ’ ಎಂದರು.

2016–17ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಫಸಲ್‌ ಬಿಮಾ ಯೋಜನೆಯಡಿ 290 ರೈತರಿಗೆ ₹ 28.31 ಲಕ್ಷ ವಿಮಾ ಮೊತ್ತ ಪಾವತಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 2302 ರೈತರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,670 ಮಂದಿಗೆ ವಿಮೆಗೆ ಅರ್ಹರಾಗಿದ್ದಾರೆ, ವಿಮೆ ಮೊತ್ತವನ್ನು ವಿಮಾ ಸಂಸ್ಥೆಯುವರು ಈವರೆಗೂ ಪಾವತಿಸಿಲ್ಲ’ ಎಂದು ಕೃಷಿ ಅಧಿಕಾರಿ ವೆಂಕಟೇಶ್‌ ಚ್ವಹಾಣ್‌ ತಿಳಿಸಿದರು.

‘2017–18ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 951 ರೈತರು ನೋಂದಾಯಿಸಿಕೊಂಡಿದ್ದು, ಈ ಪೈಕಿ 160 ರೈತರಿಗೆ ₹ 6.21 ಲಕ್ಷ ವಿಮೆ ಮೊತ್ತ ಪಾವತಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 10 ರೈತರು ನೋಂದಾಯಿಸಿಕೊಂಡಿದ್ದಾರೆ’ ಎಂದರು.

‘ಲಕ್ಯಾ ಹೋಬಳಿಯಲ್ಲಿ ಮುಸುಕಿನ ಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಡುತ್ತಿದೆ. ಕೀಟ ಬಾಧೆ ನಿವಾರಣೆ ನಿಟ್ಟಿನಲ್ಲಿ ಕೃಷಿ ಸಿಬ್ಬಂದಿ ರೈತರಿಗೆ ಸ್ಪಂದಿಸುತ್ತಿ‌ಲ್ಲ’ ಎಂದು ಸದಸ್ಯರೊಬ್ಬರು ದೂಷಿಸಿದರು.

‘ಕೀಟಬಾಧೆ ನಿವಾರಣೆ ನಿಟ್ಟಿನಲ್ಲಿ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು. ಗ್ರಾಮಗಳಲ್ಲಿ ಕೃಷಿ ಅರಿವು ಕಾರ್ಯಕ್ರಮಆಯೋಜಿಸಬೇಕು’ ಎಂದು ಅಧ್ಯಕ್ಷ ಜಯಣ್ಣ ತಿಳಿಸಿದರು.

‘ತೆಂಗು ಪುನಶ್ಚೇತನ ಕ್ರಿಯಾಯೋಜನೆಗೆ ₹ 9.04 ಕೋಟಿ ಅನುದಾನ ಮಂಜೂರಾಗಿದೆ. ಆಲೂಗಡ್ಡೆ ವಿಶೇಷ ಪ್ಯಾಕೇಜ್‌ ಯೋಜನೆಯಡಿ 2,800 ಅರ್ಜಿಗಳು ಸಲ್ಲಿಕೆಯಾಗಿವೆ. ಜೇಷ್ಠತೆ ಆಧಾರದಲ್ಲಿ ಈವರೆಗೆ 1,375 ಫಲಾನುಭವಿಗಳಿಗೆ ಹೆಕ್ಟೇರ್‌ಗೆ ₹ 1,200ರಂತೆ 16.50 ಲಕ್ಷ ನೀಡಲಾಗಿದೆ’ ಎಂದು ತೋಟಗಾರಿಕೆ ಅಧಿಕಾರಿ ಪೂಜಿತಾ ತಿಳಿಸಿದರು.

‘ಕಾಳುಮೆಣಸು ಪುನಶ್ಚೇತನ ಕಾರ್ಯಕ್ರಮದಡಿ ಜೇಷ್ಠತೆ ಅನುಸಾರ ಮೂರು ವರ್ಷಗಳಲ್ಲಿ ಪ್ರತಯೋಜನ ಪಡೆದ ಫಲಾನುಭವಿಗಳನ್ನು ಬಿಟ್ಟು ಸಾಮಾನ್ಯ ವರ್ಗದ 100, ಪರಿಶಿಷ್ಟ ಜಾತಿಯ 50 ಹಾಗೂ ಪರಿಶಿಷ್ಟ ಪಂಗಡದ 100 ಮಂದಿಗೆ ಕಾಳು ಮೆಣಸು ಬುಟ್ಟಿ, ಜೈವಿಕ ಗೊಬ್ಬರ ವಿತರಿಸಲಾಗುತ್ತಿದೆ’ ಎಂದರು.

‘ಕಾಳುಮೆಣಸು ಪುನಶ್ಚೇತನ ಕಾರ್ಯಕ್ರಮದಡಿ ಕಳೆದ ಬಾರಿಯ ಫಲಾನುಭವಿಗಳಲ್ಲಿ ಕೆಲವರು ಈ ಬಾರಿಯೂ ಸವಲತ್ತು ಪಡೆದುಕೊಂಡಿದ್ದಾರೆ ಎಂಬ ಆರೋಪಗಳಿವೆ. ಫಲಾನುಭವಿಗಳ ಪಟ್ಟಿಯನ್ನು ಪುನರ್‌ ಪರಿಶೀಲಿಸಬೇಕು’ ಎಂದು ಜಯಣ್ಣ ಸೂಚಿಸಿದರು.

ಫಾರಂ ನಂ ‘53’ ಅರ್ಜಿ ಕಳೆದುಹೋಗಿದ್ದರೆ ಹೊಸದಾಗಿ ಫಾರಂ ನಂ ‘57’ ಸಲ್ಲಿಸಲು ಅವಕಾಶ ಇದೆ ಎಂದು ತಹಶೀಲ್ದಾರ್‌ ನಂದಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT