ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಶಾಂತಿಯುತ, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ

ಹಾಸನ ಮತ್ತು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಚುನಾವಣೆ
Last Updated 18 ಏಪ್ರಿಲ್ 2019, 15:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮತಯಂತ್ರ ಸಮಸ್ಯೆಯಿಂದಾಗಿ ಅಡಚಣೆ, ವಿಳಂಬದಂಥ ಸಣ್ಣಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ 75.8 , ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 77.28 ಮತದಾನ ಆಗಿದೆ. ಜಿಲ್ಲೆಯ ಕಾರ್ಯಕರ್ತರು, ನಾಗರಿಕರು, ಗ್ರಾಮಸ್ಥರಲ್ಲಿ ರಂಗು, ಅಬ್ಬರ ಇರಲಿಲ್ಲ.

ಮಹಿಳಾ ಮತದಾರರು, ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಅಂಗವಿಕಲರು, ನವಮತದಾರರು ಮತ ಚಲಾಯಿಸಿದರು. ಅಂಗವಿಕಲರಿಗಾಗಿ ಗಾಲಿ ಕುರ್ಚಿ, ಆಟೊ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಗಟ್ಟೆಗಳ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.
ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಮಲ್ಲಿಗೇನಹಳ್ಳಿಯ ಮತಗಟ್ಟೆ ಸಂಖ್ಯೆ 186ರ ಮತದಾರರು ಮತದಾನ ಬಹಿಷ್ಕರಿಸಿದ್ದಾರೆ. ಜಮೀನು ಖಾತೆಹಕ್ಕು ಪತ್ರ, ನಿವೇಶನ ಪತ್ರ ಸಮಸ್ಯೆ ಮುಂದಿಟ್ಟುಕೊಂಡು ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.

‌ನಗರದ ಸುರ್ಕಾನಿಯಾ ಮಸೀದಿಯ ಬಳಿ ಉರ್ದು ಪ್ರಾಥಮಿಕ ಶಾಲೆಯ ಮತಗಟ್ಟೆ 164ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಯಂತ್ರ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಲಾಯಿತು.

ಹೌಸಿಂಗ್‌ ಬೋರ್ಡ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 127ರಲ್ಲಿ ಮತಯಂತ್ರದ ಪರದೆಯಲ್ಲಿ ದೋಷ ಕಾಣಿಸಿಕೊಂಡಿತ್ತು. ಮಧ್ಯಾಹ್ನ 1 ರಿಂದ 1.30ರವರೆಗೆ ಮತದಾನ ಸ್ಥಗಿತವಾಗಿತ್ತು. ನಂತರ ಯಂತ್ರ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಲಾಯಿತು.

ಜಿಲ್ಲೆಯಲ್ಲಿ 1,222 ಮತಗಟ್ಟೆಗಳು ಇದ್ದವು. ಈ ಪೈಕಿ 20 ಸಖಿ ಮತಗಟ್ಟೆಗಳು ಇದ್ದವು. ಸಖಿ ಮತಗಟ್ಟೆಗಳಲ್ಲಿ ತಿಳಿ ನೆರಳೆ ಬಣ್ಣದ ಬಲೂನಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಈ ಮತಗಟ್ಟೆಗಳಿಗೆ ಎಲ್ಲ ಮಹಿಳಾ ಸಿಬ್ಬಂದಿ ನೇಮಿಸಲಾಗಿತ್ತು. ಅವರೂ ತಿಳಿ ನೆರಳೆ ಬಣ್ಣದ ಉಡುಪು ಧರಿಸಿದ್ದರು.

ಮತಗಟ್ಟೆಗಳಲ್ಲಿ ಮತದಾರರ ಸಾಲು ಬೆಳಿಗ್ಗೆ ಸಾಧಾರಣ ಇತ್ತು. ತೋಟ, ಕೃಷಿ, ಕೈಗಾರಿಕೆ ಮೊದಲಾದ ಕಡೆಗಳಿಗೆ ಕೆಲಸಕ್ಕೆ ಹೋಗುವ ಬಹುತೇಕ ಕಾರ್ಮಿಕರು, ನೌಕರರು ಬೆಳಿಗ್ಗೆಯೇ ಹಕ್ಕು ಚಲಾಯಿಸಿ ಕಾಯಕಗಳಿಗೆ ತೆರಳಿದರು. ಸೂರ್ಯನ ತಾಪ ಏರಿದಂತೆ ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗಳಲ್ಲಿ ದಟ್ಟಣೆ ಮಂದಗತಿಗೆ ತಿರುಗಿತು. ಕೆಲ ಮತಗಟ್ಟೆಗಳು ಮತದಾರರು ಇಲ್ಲದೆ ಬಣಗುಡುತ್ತಿದ್ದವು. ಸಂಜೆ ಹೊತ್ತಿಗೆ ಮತಗಟ್ಟೆಗಳಲ್ಲಿ ಮತದಾನ ಚುರುಕಾಯಿತು. ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು.

ಪ್ರತಿ ಮತಗಟ್ಟೆಯಿಂದ ಸ್ವಲ್ಪ ದೂರದಲ್ಲಿ ಮತದಾನ ಸಹಾಯ ಕೇಂದ್ರ ಇತ್ತು. ಮತ ಕೇಂದ್ರಗಳಿಂದ ಅನತಿ ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರು ಕುರ್ಚಿ, ಮೇಜುಗಳನ್ನು ಹಾಕಿಕೊಂಡು ಮತದಾರರಿಗೆ ಮಾಹಿತಿ ನೀಡಿದರು. ಆದರೆ, ಎಲ್ಲಿಯೂ ದಟ್ಟಣೆ ಇರಲಿಲ್ಲ.

‘ಇದು ಲೋಕಸಭೆ ಚುನಾವಣೆ ಅಲ್ವಾ, ಇದು ನಡೆಯದೆ ಹಿಂಗೆ. ವಿಧಾನಸಭೆ ಚುನಾವಣೆಯಂಗೆ ಗುಂಪುಗುಂಪು ಜನ, ಕಾರ್ಯಕರ್ತರು ಇರಲ್ಲ. ಖದರ್‌ ಕಡಿಮೆ. ಪ್ರಚಾರ ನಡೆಸಿದ್ದಾರೆ, ಮತಯಾಚನೆ ಮಾಡಿದ್ದಾರೆ. ಯಾವುದೇ ಪಕ್ಷದವರು ಹಣ, ಹೆಂಡ ಏನನ್ನೂ ಹಂಚಿಲ್ಲ’ ಎಂದು ಕಳಸಾಪುರದ ಕೆ.ಡಿ.ಮಂಜುನಾಥ್‌ ತಿಳಿಸಿದರು.

‘ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಕೈಗೆತ್ತಿಕೊಂಡಿರುವ ಕರಗಡ ಯೋಜನೆ ಕಾಮಗಾರಿ 15 ವರ್ಷದಿಂದ ಆಮೆಗತಿಯಲ್ಲಿ ಸಾಗಿದೆ. ನೀರಿಲ್ಲದೆ ಅಡಿಕೆ ತೋಟಗಳು ಒಣಗಿವೆ. ಓಟು ಮಾತ್ರ ಕೇಳಲು ಗ್ರಾಮಕ್ಕೆ ಬರುತ್ತಾರೆ, ಆದರೆ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ತುಂಬಿಸುವ ಇಚ್ಛಾಶಕ್ತಿ ಯಾವ ಪಕ್ಷದವರಿಗೂ ಇಲ್ಲ. ಎಲ್ಲರೂ ಮೋಸಗಾರರೇ’ ಎಂದು ಕಳಸಾಪುರದ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತೋಟಗಳು ಹಾಳಾಗಿವೆ. ಕೆರೆಗಳು ಬತ್ತಿವೆ. ಜಾನುವಾರುಗಳಿಗೂ ನೀರು ಇಲ್ಲ. ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು ಗಮನಹರಿಸಲ್ಲ, ಓಟು ಮಾತ್ರ ಕೇಳ್ತಾರೆ...‘ ಎಂದು ಬೆಳವಾಡಿ ಗ್ರಾಮದ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ದಿನ ಬೆಳಗಾದರೆ ಮನೆಗಳಲ್ಲಿ ನೀರಿನದ್ದೆ ಚಿಂತೆ. ಕೊಳವೆಬಾವಿಗಳಲ್ಲಿ ನೀರಿಲ್ಲ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿ ಎಂದರೆ ಗಮನಹರಿಸುತ್ತಿಲ್ಲ’ ಎಂದು ಹುಲಿಕೆರೆ ರವಿ ಬೇಸರ ವ್ಯಕ್ತಪಡಿಸಿದರು.
ಗ್ರಾಮಗಳ ಅಂಗಡಿಗಳು, ಅರಳಿ ಕಟ್ಟೆ, ಸೋಮಾರಿ ಕಟ್ಟೆಗಳ ಬಳಿ ಐದತ್ತು ಮಂದಿ ಮಾತುಕತೆಯಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು. ಪಕ್ಷಗಳ ಮುಖಂಡರು, ಕಾರ್ಯಕರ್ತರು ಬೂತ್‌ನಲ್ಲಿ ಇಂಥ ಅಭ್ಯರ್ಥಿ ಇಂತಿಷ್ಟು ಮತ ಪಡೆಯಬಹುದು ಎಂದು ಅಂದಾಜು ಲೆಕ್ಕಾಚಾರ ಹಾಕುತ್ತಿದ್ದುದು ನಾಲ್ಕೈದು ಕಡೆ ಕಂಡುಬಂತು.

ಚಿಕ್ಕಮಗಳೂರು–ಉಡುಪಿ ಲೋಕಸಭಾ ಕ್ಷೇತ್ರ; ಶೇ 75.8 ಮತದಾನ

ಚಿಕ್ಕಮಗಳೂರು–ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಶೇ 75.8 ಮತದಾನವಾಗಿದೆ. ಕಡೂರು ವಿಧಾನಸಭಾ ಕ್ಷೇತ್ರ ಬಿಟ್ಟು (ಜಿಲ್ಲೆಯ ಈ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 73 ಮತದಾನವಾಗಿದೆ. ಕ್ಷೇತ್ರವಾರು ಶೃಂಗೇರಿ– ಶೇ 78, ಮೂಡಿಗೆರೆ– ಶೇ 73, ಚಿಕ್ಕಮಗಳೂರು– ಶೇ 69 ಹಾಗೂ ತರೀಕೆರೆ ಶೇ 72,ಕಡೂರು ಕ್ಷೇತ್ರದಲ್ಲಿ ಶೇ 71.99 ಮತದಾನ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT