ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ದಹನಕ್ಕೆ ಕಟ್ಟಿಗೆಗೂ ಬರ!

ಅಜ್ಜಂಪುರ ಮೋಕ್ಷಧಾಮಛ ನಿರ್ವಹಣೆ ಕೊರತೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯ
Last Updated 8 ಡಿಸೆಂಬರ್ 2018, 16:23 IST
ಅಕ್ಷರ ಗಾತ್ರ

ಅಜ್ಜಂಪುರ ಪಟ್ಟಣದ ಮೋಕ್ಷಧಾಮವು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಮುಖ್ಯವಾಗಿ ಶವ ದಹನಕ್ಕೆ ಬೇಕಾದ ಕಟ್ಟಿಗೆಯ ಬರವೂ ಕಾಡುತ್ತಿದೆ. ಜತೆಗೆ ಶವಸಂಸ್ಕಾರಕ್ಕೆ ಬಂದವರಿಗೆ ನೀರು- ನೆರಳಿನಂತಹ ಮೂಲಸೌಲಭ್ಯವೂ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ.

ಬೀರೂರು ರಸ್ತೆಯಲ್ಲಿರುವ ಮೋಕ್ಷಧಾಮ ಅವ್ಯವಸ್ಥೆಯ ಆಗರವಾಗಿದೆ. ಅಂತಿಮ ವಿಧಿ-ವಿಧಾನ ನಡೆಸಲು ಶವ ಇಡುವ ಕಟ್ಟೆಯ ಕಲ್ಲುಗಳು ಕಿತ್ತು ಬಂದಿದ್ದು, ಸಿಮೆಂಟ್ ಕಳಚಿದೆ. ಶವಸಂಸ್ಕಾರಕ್ಕೆಂದು ಬಂದವರು ಮಳೆ ಹಾಗೂ ಬಿಸಿಲಿನಿಂದ ಆಶ್ರಯ ಪಡೆಯಲು ನಿರ್ಮಿಸಲಾಗಿದ್ದ ಕೊಠಡಿಗೆ ಒಳ ಪ್ರವೇಶಿಸಲಾಗದಷ್ಟು ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಶವ ಸುಡುವ ಚೇಂಬರ್ ಇರಿಸಿರುವ ಕಟ್ಟಡದ ಸುತ್ತಲೂ ಮುಳ್ಳಿನ ಪೊದೆಗಳು ಆವರಿಸಿವೆ.

ನೀರು ಪೂರೈಸುವ ತೊಟ್ಟಿಗೆ ಅಳವಡಿಸಿರುವ ನಳದ ಪೈಪ್‌ಗಳು ಮುರಿದು ಬಿದ್ದಿವೆ. ನಾಲ್ಕೈದು ಶೌಚಾಲಯವಿದ್ದರೂ ನಿರ್ವಹಣೆ ಕೊರತೆಯಿಂದ ಬಳಕೆಗೆ ಬಾರದಷ್ಟರ ಮಟ್ಟಿಗೆ ಅಶುಚಿತ್ವಗೊಂಡಿವೆ. ಶವಸಂಸ್ಕಾರದ ಬಳಿಕ ದೇವರ ದರ್ಶನಕ್ಕಾಗಿ ನಿರ್ಮಿಸಲಾಗಿರುವ ಈಶ್ವರ ದೇವಾಲಯ ಸುತ್ತಲೂ ನಿರುಪಯುಕ್ತ ಗಿಡಗಳು ಸುತ್ತುವರಿದಿವೆ.

ಮೋಕ್ಷಧಾಮ ಒಳಪ್ರವೇಶಿಸುವ ದ್ವಾರದಲ್ಲಿಯೇ ಪ್ಲಾಸ್ಟಿಕ್- ಕಸಕಟ್ಟಿ ಸಂಗ್ರಹವಾಗಿದೆ. ಅದರ ಸುತ್ತಲೂ ನಾಯಿ-ಹಂದಿಗಳ ಕಾದಾಟ ಸದಾ ಕಾಣಸಿಗುತ್ತದೆ. ಶವ ಸುಡುವ ಕಟ್ಟಡದ ಪಕ್ಕದಲ್ಲಿಯೇ ಶವದ ಜತೆಗೆ ತಂದಿದ್ದ ಹಾಸಿಗೆ- ಮೇಲೊದಿಕೆ-ಚಟ್ಟಕ್ಕೆ ಬಳಸಿದ ಬಿದಿರು ಎಸೆಯಲಾಗಿದೆ. ಮೋಕ್ಷಧಾಮದೊಳಗೆ ಮದ್ಯದ ಬಾಟಲಿಗಳು- ಪ್ಲಾಸ್ಟಿಕ್ ಪೌಟ್‌ಗಳು ಕಾಣ ಸಿಗುತ್ತವೆ. ಹೊರ ಅಂಚಿನ ತಂತಿಬೇಲಿಗೆ ತಾಗುವಂತೆ ಮದ್ಯ ವ್ಯಸನಿಗಳು ಎಸೆದಿರುವ ಹತ್ತಾರು ಒಡೆದ ಗಾಜಿನ ಬಾಟಲಿಗಳ ರಾಶಿ ಬಿದ್ದಿವೆ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ ಎಂದು ಗ್ರಾಮಸ್ಥ ಹರೀಶ್ ದೂರಿದ್ದಾರೆ.

1999ರ ನವಂಬರ್ 19ರಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ಮೋಕ್ಷಧಾಮ ಉದ್ಘಾಟನೆಗೊಂಡಿತ್ತು. ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆ ಅವರು ಉಚಿತವಾಗಿ ಶವ ಸುಡುವ ಸಿಲಿಕಾನ್ ಚೇಂಬರ್ ನೀಡಿದ್ದರು. ಅದನ್ನೂ ಕಳ್ಳರು ಕದ್ದೊದ್ದರು. ಹೆಗ್ಗಡೆ ಅವರು ಬಳಿಕ ಇನ್ನೊಂದು ಚೇಂಬರ್ ನೀಡಿ, ಶವ ಸಂಸ್ಕಾರಕ್ಕೆ ಸಹಕರಿಸಿದ್ದರು. ಈವರೆಗೆ ಇಲ್ಲಿ 354 ಶವಗಳು ದಹನಗೊಂಡಿವೆ.

‘ಮೋಕ್ಷಧಾಮ ನಿರ್ವಹಣೆಗೆ ಮೋಕ್ಷಧಾಮ ಸಮಿತಿ ಇದೆ. ಶವಸಂಸ್ಕಾರಕ್ಕೆ ಪಡೆಯೋ ಹಣ, ಮೋಕ್ಷಧಾಮಕ್ಕೆ ಸೌಲಭ್ಯ ಒದಗಿಸಲು, ಹಾಳಾದ ವಿದ್ಯುತ್ ಹಾಗೂ ನೀರಿನ ಮೋಟಾರ್ ದುರಸ್ತಿಗೊಳಿಸಲೂ ಸಾಕಾಗಲ್ಲ. ಇನ್ನು ಮೋಕ್ಷಧಾಮ ಸ್ವಚ್ಛಗೊಳಿಸಲು, ಶೌಚಾಲಯ ಶುಚಿಗೊಳಿಸಲು ಹಣ ಕೊಡುತ್ತೇವೆ ಎಂದರೂ ಕೆಲಸಗಾರರು ಬರೋದಿಲ್ಲ. ಮೋಕ್ಷಧಾಮ ಸ್ವಚ್ಛತೆ ಮತ್ತು ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದೇವೆ. ಆದರೆ, ಸುಧಾರಣೆ ಆಗುವಷ್ಟರ ಮಟ್ಟಿನ ಸಹಕಾರ ಅವರಿಂದ ದೊರೆತಿಲ್ಲ’ ಎಂದು ಸಮಿತಿಯ ಪ್ರಹ್ಲಾದ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಇನ್ನು ರೈಲ್ವೇ ಗೇಟ್ ಆಚೆಗಿರುವ ಸ್ಮಶಾನದಲ್ಲಿ ಮುಳ್ಳಿನ ಪೊದೆಗಳು ಮರಗಳಾಗಿವೆ. ಶವ ಹೂಳಲೂ ಸ್ಥಳ ಇಲ್ಲದಂತೆ ಮುಳ್ಳಿನ ಗಿಡಗಳು ಹರಡಿವೆ. ಶವ ಸಂಸ್ಕಾರಕ್ಕೆ ಬರುವವರ ಹಾದಿಗೆ ಹಾಗೂ ಕೂರಲು ಮುಳ್ಳುಗಳು ಅಡ್ಡಿಯಾಗಿವೆ. ಹೆಚ್ಚಿದ ಮುಳ್ಳಿನ ಗಿಡಗಳಿಂದಾಗಿ ಸ್ವಚ್ಛವಿರುವ ಸ್ಥಳದಲ್ಲಿಯೇ ಒಂದಕ್ಕಿಂತ ಹೆಚ್ಚು ಶವ ಹೂಳಲಾಗಿದೆ. ಕೂಡಲೇ ಜಾಲಿ ಮುಳ್ಳಿನ ಮರ ತೆರವುಗೊಳಿಸಿ, ಶವ ಹೂಳಲು ಅನುಕೂಲ ಮಾಡಿಕೊಡಬೇಕು’ ಎಂದು ಮಹೇಶ್ ಆಗ್ರಹಿಸಿದ್ದಾರೆ.

‘ಮೋಕ್ಷಧಾಮದ ಹೆಸರೆತ್ತಿದರೆ ಮೂಗು ಮುರಿಯುವರೇ ಹೆಚ್ಚು. ಇದಕ್ಕೆ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಹೊರತಾಗಿಲ್ಲ. ಸತ್ತವರಿಗೆ ಸದ್ಗತಿ ತೋರುವ ಮೋಕ್ಷಧಾಮಕ್ಕೆ ಸೌಕರ್ಯ ಕಲ್ಪಿಸಲು ಸ್ಥಳೀಯ ಮತ್ತು ಜಿಲ್ಲಾಡಳಿತಗಳೂ ಗಮನ ಹರಿಸಿಲ್ಲ. ಪಟ್ಟಣದ ಮೋಕ್ಷಧಾಮದ ಅವ್ಯವಸ್ಥೆ ಗಮನಿಸಿದರೆ ಸ್ಮಶಾನ ಮತ್ತು ಮೋಕ್ಷಧಾಮ ಅಭಿವೃದ್ಧಿಗೆ ನೀಡಲಾದ ಅನುದಾನ ದುರ್ಬಳಕೆ ಆಗಿರುವ ಶಂಕೆ ಇದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೋಕ್ಷಧಾಮಕ್ಕಿರುವ ಸ್ಥಳ ಚಿಕ್ಕದಾಗಿದೆ. ಶವ ಹೂಳಲು ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪಕ್ಕದಲ್ಲಿಯೇ ಇರುವ ಒಂದು ಎಕರೆ ಸರ್ಕಾರಿ ಭೂಮಿಯನ್ನು ಮೋಕ್ಷಧಾಮಕ್ಕೆ ನೀಡಬೇಕು. ಇಲ್ಲಿ ಗಿಡ-ಮರ ಸಂರಕ್ಷಿಸಬೇಕು. ಸ್ವಚ್ಛತೆ ಕಾಪಾಡಿ, ಮೂಲಸೌಲಭ್ಯ ಒದಗಿಸುವ ಮೂಲಕ ಹೊಸ ಕಾಯಕಲ್ಪ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT