ಶುಕ್ರವಾರ, ಡಿಸೆಂಬರ್ 6, 2019
20 °C
ಕಳಸ- ಕಳಕೋಡು ರಸ್ತೆ ದುರಸ್ತಿಗೆ ಆಗ್ರಹ

ರಸ್ತೆ ತಡೆದು ನಾಗರಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಳಸ: ಇಲ್ಲಿನ ಕಳಸ_ಕಳಕೋಡು ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಭಾನುವಾರ ರಸ್ತೆತಡೆ ನಡೆಸಿದರು.

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪ್ರತಿಭಟನಕಾರರು ಮಹಾವೀರ ರಸ್ತೆ ಬಳಿ ಸೇರಿ ಹದಗೆಟ್ಟ ರಸ್ತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆಗೆ ಜೈನ ಬಸದಿ ಬಳಿ ಮತ್ತು ರುದ್ರಪಾದ ರಸ್ತೆ ಬಳಿಯೂ ರಸ್ತೆಗೆ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ, ಈ ಪ್ರದೇಶಕ್ಕೆ ಇದ್ದ ಎಲ್ಲ ರಸ್ತೆ ಸಂಪರ್ಕ ಕಡಿದುಹಾಕಲಾಗಿತ್ತು.

ಒಂದು ಗಂಟೆಯ ಕಾಲ ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ಕಳಸ-ಕಳಕೋಡು ರಸ್ತೆಯಲ್ಲಿ ಅನೇಕ ವರ್ಷಗಳಿಂದ ಗುಂಡಿಗಳದ್ದೇ ಸಾಮ್ರಾಜ್ಯವಾ
ಗಿದೆ. ಈ ರಸ್ತೆ ಬಳಸುವ ಶಾಲಾ ಮಕ್ಕಳು, ರೋಗಿಗಳ ಸ್ಥಿತಿ ಶೋಚನೀಯವಾಗಿದೆ. ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದರೂ ಕಳೆದ ವರ್ಷದಿಂದಲೂ ಮೀನಮೇಷ ಎಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಶಾಸಕ ಅಥವಾ ಅಧಿಕಾರಿಗಳು ಬರದೆ ರಸ್ತೆ ತಡೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆ ವೇಳೆಗೆ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್ ಮತ್ತು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಜ್ವಾಲನಯ್ಯ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕರೆ ಮಾಡಿ, ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.

'ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ನಿಗದಿಪಡಿಸಲಾಗಿದ್ದು, ಟೆಂಡರ್ ಕೂಡ ನಡೆದಿದೆ. ಸದ್ಯದಲ್ಲೇ ಕಾಮಗಾರಿ ನಡೆಸಲಾಗುತ್ತದೆ' ಎಂದು ರಫೀಕ್ ಸಮಜಾಯಿಷಿ ನೀಡಿದರು.ಇದರಿಂದ ತೃಪ್ತರಾಗದ ಜನರು ಇದೇ ಬಗೆಯ ಭರವಸೆಯನ್ನು ಅನೇಕ ಬಾರಿ ಕೇಳಿ ಬೇಸತ್ತಿದ್ದೇವೆ. ನಿರ್ದಿಷ್ಟ ದಿನಾಂಕ ಹೇಳಿ ಎಂದು ಪಟ್ಟು ಹಿಡಿದರು.

'ಡಿ. 17ರಂದು ರಸ್ತೆಯ ಕೆಲಸ ಆರಂಭವಾಗುವಂತೆ ಅಧಿಕಾರಿಗಳಿಗೆ ಒತ್ತಡ ಹೇರುತ್ತೇನೆ. ಸದ್ಯಕ್ಕೆ ಪ್ರತಿಭಟನೆ ಕೈಬಿಡಿ' ಎಂದು ರಫೀಕ್ ಮನವಿ ಮಾಡಿದ ನಂತರ ರಸ್ತೆ ತಡೆ ಕೈಬಿಡಲಾಯಿತು. ಆ ವೇಳೆಗೆ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್. ಪ್ರಭಾಕರ್, ಈ ರಸ್ತೆ ಕಾಮಗಾರಿ ಶೀಘ್ರವೇ ನಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸ್ಥಳೀಯರಾದ ಗಣೇಶ್, ನಾಗರಾಜ್, ಗಂಗಣ್ಣ, ಮಲ್ಲಿಕಾರ್ಜುನ, ಮಹೇಶ್, ರಂಜಿತ, ಗೋಪಾಲ, ಅಭಿಮಾನಿ ರಾಜು, ಮಧು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ, ರಾಮಮೂರ್ತಿ, ಸೋಮಯ್ಯ ಇದ್ದರು.

ಪ್ರತಿಕ್ರಿಯಿಸಿ (+)