ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಕೆರೆ: ಮಲಿನಮಯ, ದುರ್ನಾತ

ಪ್ರವಾಸಿ ತಾಣವಾಗಬೇಕಿದ್ದ ಕೆರೆ– ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ
Last Updated 9 ಡಿಸೆಂಬರ್ 2018, 17:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರವಾಸಿ ತಾಣವಾ ಗಬೇಕಿದ್ದ ನಗರದ ಕೋಟೆ ಕೆರೆಯು ಚರಂಡಿ ಕೊಳಚೆ, ಪ್ಲಾಸ್ಟಿಕ್, ರಾಸಾಯನಿಕ, ಮಲಮೂತ್ರ, ಗಿಡಗಂಟಿಗಳಿಂದ ಮಲಿನಗೊಂಡಿದೆ.

ಸುತ್ತಲಿನ ಬಡಾವಣೆಗಳ ಕೊಳಕು ನೀರು ಕೋಟೆ ಕೆರೆಗೆ ಸೇರುತ್ತಿದೆ. ಸೊಳ್ಳೆ, ಕ್ರಿಮಿ, ಕೀಟಗಳ ಸಂತಾನಾಭಿವೃದ್ಧಿ ಕೇಂದ್ರವಾಗಿದೆ. ಕೆರೆ ಸುತ್ತಲಿನ ಮಣ್ಣಿನ ರಸ್ತೆ ಮಲ ಮೂತ್ರ ವಿಸರ್ಜಿಸುವ ತಾಣವಾಗಿ ಮಾರ್ಪಟ್ಟಿದೆ. ನಗರಕ್ಕೆ ಪ್ರವೇಶಿಸುವ ಪ್ರವಾಸಿಗರನ್ನು ಈ ಕೆರೆ ದುರ್ನಾತದಿಂದ ಸ್ವಾಗತಿಸುತ್ತಿದೆ.

ಕೆರೆಯಲ್ಲಿ ಆಳೆತ್ತರಕ್ಕೆ ಹರಳು ಗಿಡಗಳು ಬೆಳೆದಿವೆ. ಕೆರೆಯ ಬಹುಪಾಲನ್ನು ಜಂಡು ಆವರಿಸಿದ್ದು, ಅಲ್ಲಲ್ಲಿ ಕೆರೆ ನೀರು ಕಾಣುತ್ತದೆ. ಅದರ ನಡುವೆ ಬೆಳ್ಳಕ್ಕಿಗಳು ಮೀನು ಹಿಡಿಯುತ್ತಿರುತ್ತವೆ. ಕೆರೆಯ ಸುತ್ತ ಚೈನ್‌ಲಿಂಕ್ ಬೇಲಿ ಅಳವಡಿಸಲಾಗಿದೆ. ಆದರೆ, ಅದು ಹಲವಾರು ಕಡೆ ಕಿತ್ತುಹೋಗಿದೆ. ಹಂದಿ, ಎಮ್ಮೆಗಳು ಕೆರೆಯ ಕೆಸರಲ್ಲಿ ಹೊರಳಾಡುತ್ತಿರುತ್ತವೆ. ರೋಗ, ರುಜಿನ ಹರಡುವ ಭೀತಿ ಸ್ಥಳೀಯರಿಗೆ ಕಾಡುತ್ತಿದೆ.

‘ಇಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದೆ, ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು’ ಎನ್ನುವ ನಾಮಫಲಕವನ್ನು ಕೆರೆಯ ಪಕ್ಕದಲ್ಲಿ ನಗರಸಭೆ ವತಿಯಿಂದ ಹಾಕಲಾಗಿದೆ. ಆ ನಾಮಫಲಕದ ಕೆಳಗಡೆಯೇ ಕಸವನ್ನು ಬಿಸಾಕಲಾಗಿದೆ. ಕಸ ಹಾಕುವುದನ್ನು ನಿಯಂತ್ರಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

‘ಕೆರೆಯ ನೀರಿನ ಗುಣಮಟ್ಟವನ್ನು ತಿಂಗಳಿಗೊಮ್ಮೆ ಪರೀಕ್ಷಿಸುತ್ತೇವೆ. ಕೆರೆಗೆ ಕೊಳಚೆ ನೀರು ಸೇರುತ್ತಿದೆ. ದಿನದಿಂದ ದಿನಕ್ಕೆ ಕೆರೆ ನೀರಿನ ಗುಣಮಟ್ಟ ಕಳಪೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ 10 ತಿಂಗಳಲ್ಲಿ ನಾಲ್ಕು ಬಾರಿ ನೋಟಿಸ್ ನೀಡಲಾಗಿದೆ. ಕೆರೆ ಕಲುಷಿತಗೊಳ್ಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಇ.ಪ್ರಕಾಶ್‌ ತಿಳಿಸಿದರು.

‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಕೋಟೆ ಕೆರೆ ಕೋಡಿ ಬೀಳಲಿಲ್ಲ. ಕೆರೆಯ ನೀರಿನ ಮೂಲಗಳು ಬ್ಲಾಕ್ ಆಗಿವೆ. ಕೆರೆಗೆ ಕೊಳಕು ನೀರು ಮಾತ್ರ ಸೇರುತ್ತಿದ್ದು, ಕೊಚ್ಚೆ ಗುಂಡಿಯಂತಾಗಿದೆ. ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಅವರು ಈ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಒಂದುವರೆ ವರ್ಷವಾಗಿದೆ. ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ’ ಎಂದು ಡಾ.ಗೀತಾ ವೆಂಕಟೇಶ್
ದೂರಿದರು.

ಕೆರೆಯಲ್ಲಿನ ಜಂಡನ್ನು ಬೇರು ಸಮೇತ ಪೂರ್ಣವಾಗಿ ತೆಗೆಯಬೇಕು. ಬ್ಲಾಕ್ ಆಗಿರುವ ಜಲ ಮೂಲಗಳನ್ನು ದುರಸ್ತಿ ಪಡಿಸಬೇಕು. ಕೆರೆ ಸುತ್ತ ವಾಕಿಂಗ್ ಪಾತ್ ನಿರ್ಮಿಸಬೇಕು. ವಿದ್ಯುತ್ ದೀಪ ಅಳವಡಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

‘ಪ್ರವಾಸಿ ತಾಣವಾಗಿಸಲು ಸಹಕಾರ ಅಗತ್ಯ’
ಕೋಟೆ ಕೆರೆ ಅಭಿವೃದ್ಧಿ ಪಡಿಸಲು ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಅನುದಾನ ನೀಡಿದ್ದಾರೆ. ಜಿಲ್ಲಾಧಿಕಾರಿ ಅದರ ಉಸ್ತುವಾರಿ ವಹಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಕೆರೆಯಲ್ಲಿನ ಜಂಡನ್ನು ಯಂತ್ರದ ಮೂಲಕ ತೆಗೆಸಲಾಗಿತ್ತು. ಜಂಡು ಮತ್ತೆ ಬೆಳೆದಿದೆ. ಅದನ್ನು ನಿಯಮಿತವಾಗಿ ತೆಗೆಯಬೇಕು. ಕೆರೆಯನ್ನು ಪ್ರವಾಸಿ ತಾಣವಾಗಿಸಲು ಜಿಲ್ಲಾಡಳಿತದೊಂದಿಗೆ ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT