ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ

Last Updated 31 ಜನವರಿ 2018, 10:02 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಂಗಳವಾರ ದಿಢೀರ್ ದಾಳಿ ನಡೆಸಿದರು.

ಪರವಾನಗಿ ಪಡೆಯದೇ ಅಕ್ರಮವಾಗಿ ಜೆಲ್ಲಿ ಕ್ರಷರ್ ಸ್ಥಾಪಿಸಿ ಜೆಲ್ಲಿ ಪುಡಿ ಉತ್ಪಾದಿಸುತ್ತಿರುವುದು ದಾಳಿ ವೇಳೆ ಕಂಡುಬಂದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಯಿತು.

ಚಿಗಳ್ಳಿ ಗ್ರಾಮದ ಸರ್ವೇ ನಂ. 58ರಲ್ಲಿ ಬೃಹತ್ ಯಂತ್ರ ಅಳವಡಿಸಿಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಹಾಗಾಗಿ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಜಿಲ್ಲಾಧಿಕಾರಿಯೇ ದಿಢೀರ್ ದಾಳಿ ನಡೆಸಿದರು.

ಸಿ.ಕೆ. ಅರುಣಾಕ್ಷಿ ಕೋಂ ಮೋಹನ್ ಕುಮಾರ್ ಎಂಬುವವರು ಅಲಂಕಾರಿಕ ಶಿಲೆ ಕಲ್ಲು ಗಣಿಗಾರಿಕೆಯಿಂದ ಉತ್ಪತ್ತಿಯಾದ ತ್ಯಾಜ್ಯದಿಂದ ಜೆಲ್ಲಿ ಪುಡಿ ತಯಾರಿಸಲು ಕ್ಲೆರೆನ್ಸ್ ಫಾರ್ ಆಪರೇಷನ್ (ಸಿ.ಎಫ್.ಓ) ಹಾಗೂ ಫಾರಂ-ಸಿ ಪರವಾನಗಿ ಪಡೆಯದೇ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು, ದಾಳಿ ವೇಳೆ ಕಂಡುಬಂದಿದೆ.

ಅಲಂಕಾರಿಕ ಶಿಲೆ ಕಲ್ಲು ಗಣಿಗಾರಿಕೆಯಿಂದ ಉತ್ಪತ್ತಿಯಾದ ತ್ಯಾಜ್ಯ ಬಳಸಿಕೊಂಡು ಬೃಹತ್ ಯಂತ್ರಗಳನ್ನು ಉಪಯೋಗಿಸಿ ಅಂದಾಜು 315 ಮೆಟ್ರಿಕ್ ಟನ್‌ನಷ್ಟು ಜೆಲ್ಲಿ ಪುಡಿ ತಯಾರಿಸಲಾಗಿದೆ. ಅಲ್ಲದೆ, ಸುಮಾರು 5.10 ಎಕೆರೆ ಸರ್ಕಾರಿ ಭೂಮಿ ಅತಿಕ್ರಮಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಅಲಂಕಾರಿಕಾ ಶಿಲೆ ಕಲ್ಲು ಗಣಿಗಾರಿಕೆಯ ತ್ಯಾಜ್ಯ ದಾಸ್ತಾನು ಮಾಡಲು ಬಳಸಿಕೊಳ್ಳಲಾಗಿದೆ.

ಪರವಾನಗಿ ಪಡೆಯದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಲು ಕ್ರಮವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸರ್ಕಾರಿ ಜಮೀನನ್ನು ವಶಕ್ಕೆ ಪಡೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ವರದಿಯನ್ನು ಸ್ಥಳ ಪರಿಶೀಲಿಸಿ ಜಂಟಿಯಾಗಿ ನೀಡುವಂತೆ ಹಾಸನ ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಹಾಸನ ತಹಶೀಲ್ದಾರ್ ಅವರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT