ಶನಿವಾರ, ನವೆಂಬರ್ 16, 2019
21 °C
ಚಿಕ್ಕಮಗಳೂರಿನ ಎಂ.ಜಿ.ರಸ್ತೆಯ ಹೂ, ಹಣ್ಣು–ತರಕಾರಿ ಮಾರುಕಟ್ಟೆ

ಮೂಲಸೌಕರ್ಯಗಳಿಲ್ಲ; ನಿತ್ಯ ನರಕಯಾತನೆ

Published:
Updated:
Prajavani

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯ ಹೂ, ಹಣ್ಣು–ತರಕಾರಿ ಮಾರುಕಟ್ಟೆಯಲ್ಲಿ (ಹಿಂದೂ ಮುಸಾಫಿರ್‌ ಛತ್ರ) ಮೂಲಸೌಕರ್ಯಗಳೇ ಇಲ್ಲ, ‘ಆಕಾಶವೇ ಚಪ್ಪರ, ಭೂಮಿಯೇ ಕಟ್ಟೆ’ ಎಂಬ ಸ್ಥಿತಿ ಇದೆ. ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡದೆ ವಿಧಿ ಇಲ್ಲ, ವ್ಯಾಪಾರಿಗಳ ಗೋಳು ಕೇಳುವವರಿಲ್ಲ.

ಮಳಿಗೆ, ಚಾವಣಿ, ಕಟ್ಟೆ, ಕುಡಿಯುವ ನೀರಿನ ಘಟಕ, ಕಸತೊಟ್ಟಿ ಇದಾವ ವ್ಯವಸ್ಥೆಯೂ ಇಲ್ಲಿ ಇಲ್ಲ. ಮಳೆಯಾದಾಗ ಅಂಗಳ ಕೆಸರುಮಯವಾಗುತ್ತದೆ, ಓಡಾಡುವುದೇ ಸವಾಲು. ವ್ಯಾಪಾರಿಗಳು–ಗ್ರಾಹಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ನಗರಸಭೆಯು ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುತ್ತದೆ. ಆದರೆ, ಸವಲತ್ತು ಕಲ್ಪಿಸುವ ಗೋಜಿಗೆ ಹೋಗಿಲ್ಲ. ಕೆಲ ವ್ಯಾಪಾರಿಗಳೇ ಅಡಿಕೆ ದೆಬ್ಬೆಗಳಲ್ಲಿ ಮಂಚಿಕೆ ನಿರ್ಮಿಸಿಕೊಂಡಿದ್ದಾರೆ. ಮತ್ತೆ ಕೆಲವರು ನೆಲದಲ್ಲಿ ಟಾರ್ಪಾಲು ಹಾಸಿಕೊಂಡು ಮಾರಾಟ ಮಾಡುತ್ತಾರೆ. ಹುಳಹುಪ್ಪಟೆ, ಬಿಡಾಡಿ ಜಾನುವಾರುಗಳ ಕಾಟ, ದುರ್ನಾತದ ಸಮಸ್ಯೆಯೂ ಇದೆ.

ಈ ಮಾರುಕಟ್ಟೆಯು ನಗರದ ಹೃದಯ ಭಾಗದಲ್ಲಿದೆ. ಇದಕ್ಕೊಂದು ಫಲಕವೂ ಇಲ್ಲ. ಮೂರು ದಿಕ್ಕಿನಲ್ಲಿ ಕಟ್ಟಡಗಳು ಸುತ್ತುವರಿದಿವೆ. ಕೆಲ ಕಟ್ಟಡಗಳ ಗೋಡೆಗಳು ಶಿಥಿಲಾವಸ್ಥೆಯಲ್ಲಿವೆ. ಚಾವಣಿಗಳು ಹಾಳಾಗಿವೆ. ಇಲಿ, ಹೆಗ್ಗಣಗಳು ಉಪಟಳವೂ ಇದೆ.

ಎಂ.ಜಿ ರಸ್ತೆಯ ಬಸವನ ಗುಡಿ, ಕನ್ನಿಕಾಪರಮೇಶ್ವರಿ ದೇಗುಲಗಳ ಬಳಿ ಹಾದಿ ಬದಿಗಳಲ್ಲಿ ಹೂ, ಹಣ್ಣು–ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ವಾಹನಗಳ ಸಂಚಾರ, ಪಾದಚಾರಿ ಮಾರ್ಗದಲ್ಲಿ ಸರಾಗ ಓಡಾಟಕ್ಕೆ ಅನುವು ಕಾರಣ ನೀಡಿ ನಗರಸಭೆ, ಜಿಲ್ಲಾಡಳಿತ ಈ ಕ್ರಮ ಕೈಗೊಂಡಿತ್ತು. ಸ್ಥಳಾಂತರ ಮಾಡಿಸಿ ಎರಡೂವರೆ ಕಳೆದರೂ ಮಾರುಕಟ್ಟೆ ಜಾಗದಲ್ಲಿ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಿಲ್ಲ. ದೇಗುಲಗಳ ಬಳಿ ಹಾದಿಬದಿ ವ್ಯಾಪಾರವನ್ನು ಪೂರ್ಣ ಬಂದ್‌ ಮಾಡಿಸಿಲ್ಲ ಎಂಬುದು ವ್ಯಾಪಾರಿಗಳ ಅಳಲು.

ಕಸ ರಾಶಿ ದರ್ಬಾರು: ಮಾರುಕಟ್ಟೆಯಲ್ಲಿ ಕಸದ ರಾಶಿಗಳದ್ದೇ ದರ್ಬಾರು. ನಾಲ್ಕೈದು ಕಸ ಕಡೆ ಸುರಿಯಲಾಗಿದೆ. ತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸದಿರುವುದು ಹಲವಾರು ಸಮಸ್ಯೆಗಳಿಗೆ ಎಡೆಮಾಡಿದೆ. ಸಿರಿಂಜ್‌ಗಳು, ಅವಧಿ ಮುಗಿದ ಮಾತ್ರೆ, ಸಿರಪ್‌ ಬಾಟಲಿ ಮೊದಲಾದವನ್ನು ಇಲ್ಲಿ ಎಸೆಯಲಾಗಿದೆ. ಮಾರುಕಟ್ಟೆ ಆಸುಪಾಸಿನಲ್ಲಿ ಆಸ್ಪತ್ರೆ, ಪ್ರಯೋಗಾಲಯಗಳವರು ಈ ತ್ಯಾಜ್ಯ ಸುರಿದಿದ್ದಾರೆ ಎಂದು ವರ್ತಕರು ದೂಷಿಸುತ್ತಾರೆ. ಸೊಳ್ಳೆ, ಕ್ರಿಮಿಕೀಟಗಳು ಹಾವಳಿ ವಿಪರೀತವಾಗಿದೆ. ವ್ಯಾಪಾರಿಗಳು ರೋಗರುಜಿನ ಭೀತಿಯಲ್ಲಿ ವಹಿವಾಟು ನಡೆಸುವಂತಾಗಿದೆ. ಕಸವನ್ನು ನಿಯಮಿತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಅಡಿಕೆ ದೆಬ್ಬೆ ಮಂಚಿಕೆಯೇ ಕಟ್ಟೆ: ಅಂಗಳದಲ್ಲಿ ವಹಿವಾಟಿಗೆ ಕಟ್ಟೆ ವ್ಯವಸ್ಥೆಯೇ ಇಲ್ಲ. ವ್ಯಾಪಾರಿಗಳೇ ಅಡಿಕೆ ದೆಬ್ಬೆಯ ಮಂಚಿಕೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಪೈಕಿ ಕೆಲವು ಹಾಳಾಗಿ ನೆಲಕಚ್ಚಿವೆ. ಅಂಗಳದಲ್ಲಿ ಬಿಸಿಲು, ಮಳೆಯಿಂದ ರಕ್ಷಣೆಗೆ ಚಾವಣಿ ಇಲ್ಲ. ಟಾರ್ಪಾಲು, ತಗಡೇ ಗತಿ. ಮಳೆಯಾದರೆ ಅವು ಸೂರುತ್ತವೆ. ತಾತ್ಕಾಲಿಕ ವ್ಯವಸ್ಥೆ ಸ್ಥಿತಿ ಶೋಚನೀಯವಾಗಿದೆ. ನೆಲಕ್ಕೆ ಟಾರ್ಪಾಲು ಹರಡಿ ವಹಿವಾಟು ಮಾಡುತ್ತಾರೆ. ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸಿ ಹೂವು, ತರಕಾರಿ, ಹಣ್ಣುಗಳನ್ನು ತಾಜಾತನ ಕಾಪಾಡುವುದರಲ್ಲೇ ವ್ಯಾಪಾರಿಗಳು ಹೈರಾಣಾಗುತ್ತಾರೆ. 

ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ: ಈ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ದ್ವಿಚಕ್ರವಾಹನ, ಲಗೇಜ್‌ ಆಟೋ ಮೊದಲಾದವನ್ನು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ.

ಬೆಳೆಗಾರರು, ವ್ಯಾಪಾರಿಗಳು ವಾಹನಗಳಲ್ಲಿ ಮಾರುಕಟ್ಟೆಗೆ ಮಾಲು ತರುತ್ತಾರೆ. ಮಾಲು ಇಳಿಸುವುದಕ್ಕೆ, ತುಂಬಿಸುವುದಕ್ಕೆ ಹರಸಾಹಸ ಪಡಬೇಕು. ವಾಹನಗಳನ್ನು ಎಂ.ಜಿ.ರಸ್ತೆಯಲ್ಲಿ ನಿಲ್ಲಿಸಿ, ಅಲ್ಲಿಂದ ಹೂವು, ಹಣ್ಣು, ತರಕಾರಿಯನ್ನು ಮಾರುಕಟ್ಟೆಯೊಳಕ್ಕೆ ಹೊತ್ತುಕೊಂಡು ಹೋಗಬೇಕು.

ಸಂದಿಗೊಂದಿಯಲ್ಲಿ ವಾಹನಗಳ ಓಡಾಟ ಕಿರಿಕಿರಿ ಹೇಳತೀರದು. ಹಬ್ಬ ಹರಿದಿನಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಸಂದಣಿ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಇಲ್ಲಿ ವಾಹನ ನಿಲುಗಡೆ ತಾಪತ್ರಯ ಹೇಳತೀರದು.

ಗಿಡಗಂಟಿಗಳ ಸಾಮ್ರಾಜ್ಯ: ಮಾರುಕಟ್ಟೆ ಹಲವು ಕಡೆ ಗಿಡಗಂಟಿಗಳು ಬೆಳೆದಿವೆ. ಪಾರ್ಥೆನಿಯಂ, ಮುಳ್ಳಿನ ಗಿಡಗಳು ಬೆಳೆದು ಹಾವು, ಹುಳ ಹಪ್ಪಟೆಗಳಿಗೆ ಆಶ್ರಯ ತಾಣವಾಗಿವೆ. ಹುಲ್ಲು, ಗಿಡಗಂಟಿ ಬೆಳೆದಿರುವುದು ಬಿಡಾಡಿ ಜಾನುವಾರುಗಳ ಹಾವಳಿಗೆ ಎಡೆಮಾಡಿದೆ.

ಮಂಚಿಕೆಗಳ ಸಂದಿಗೊಂದಿಗಳಲ್ಲಿ ನಾಯಿಗಳು, ಹಂದಿಗಳು ಪವಡಿಸಿರುತ್ತವೆ. ಪೊದೆಗಳ ನಡುವಿನ ತ್ಯಾಜ್ಯ ಗುಡ್ಡೆಗಳನ್ನು ಜಾನುವಾರುಗಳು ಎಳೆದಾಡಿ ರಾಡಿ ಎಬ್ಬಿಸುತ್ತವೆ. ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಹುಲ್ಲಿನೊಳಕ್ಕೆ ಬಿಸಾಕಿರುತ್ತಾರೆ.

ದಾರಿ ಸಮಸ್ಯೆ: ಮಳೆಯಾದಾಗ ಅಂಗಳದಲ್ಲಿ ನೀರು ಆವರಿಸುತ್ತದೆ. ಮಣ್ಣಿನ ಹಾದಿಯಲ್ಲಿ ಕೊಚ್ಚೆ ದಾಟಿಕೊಂಡು ಓಡಾಡಲು ಪಡಿ ಪಾಟಲುಪಡಬೇಕು. ಇಬ್ಬರುಮೂವರು ಒಮ್ಮೆಲೆ ಸಾಗಲು ಸಾಧ್ಯವಾಗದಷ್ಟು ದಾರಿಗಳು ಕಿರಿದಾಗಿವೆ.

ಗುಂಡಿಗಳು, ತಗ್ಗುದಿಬ್ಬಗಳ ಹಾದಿಯಲ್ಲಿ ಸಾಗಲು ಸಾಹಸ ಪಡಬೇಕು. ಚಾವಣಿ, ಮಂಚಿಕೆಗೆ ಗೂಟಗಳನ್ನು ಅಳವಡಿಸಲಾಗಿದೆ. ದಾರಿಯ ಬದಿಗಳಲ್ಲಿ ಗೂಟಗಳಿವೆ.

ಹೀಗಾಗಿ, ‘ಬಿದ್ದೀರಾ ಜೋಕೆ’ ಎಚ್ಚರಿಕೆಯಲ್ಲಿ ಮುಂದಡಿ ಇಡಬೇಕಾದ ಸ್ಥಿತಿ ಇದೆ. ಅಂಗಳದಲ್ಲಿ ಕಾಂಕ್ರಿಟ್‌ ರಸ್ತೆ ಮಾಡಬೇಕು ಎಂಬುದು ವರ್ತಕರ ಮನವಿಯಾಗಿದೆ.

ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ವಿದ್ಯುತ್‌ ದೀಪ ಇಲ್ಲ, ಶೌಚಾಲಯ ಇಲ್ಲ... ಹೀಗೆ ಇಲ್ಲಿನ ಕೊರತೆಗಳ ಪಟ್ಟಿ ಉದ್ದ ಇದೆ. ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಜನರ ಆಗ್ರಹ.

 

‘ನಿಯಮಿತವಾಗಿ ಕಸ ವಿಲೇವಾರಿ’

ಮಾರುಕಟ್ಟೆಯಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಆಸ್ಪತ್ರೆ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಲಾಗುವುದು ಎಂದು ನಗರಸಭೆ ಆಯುಕ್ತ ಕೆ.ಪರಮೇಶಿ ತಿಳಿಸಿದರು.

‘ಮಾರುಕಟ್ಟೆ ಜಾಗದಲ್ಲಿ ಕಟ್ಟಡ ನಿರ್ಮಿಸಿ ವಾಣಿಜ್ಯ ಸಂಕೀರ್ಣ ಮಾಡುವ ಚಿಂತನೆ ಇದೆ. ಚುನಾವಣೆ ನಡೆದು ಪ್ರತಿನಿಧಿಗಳು ಆಯ್ಕೆಯಾದ ನಂತರ ಚಿಂತನೆಗೆ ಜೀವ ಪಡೆದುಕೊಳ್ಳಲಿದೆ. ಮೂಲಸೌಕರ್ಯಗಳನ್ನು ಕಲ್ಪಿಸಲು ಗಮನಹರಿಸಲಾಗುವುದು’ ಎಂದರು.

ನಾಗರಿಕರು ಏನಂತಾರೆ?

ವ್ಯವಸ್ಥಿತವಾಗಿ ದಾರಿ ನಿರ್ಮಿಸಿ

'ನೈರ್ಮಲ್ಯ ನಿರ್ವಹಣೆಗೆ ಗಮನ ಹರಿಸಬೇಕು. ಅಂಗಳದಲ್ಲಿ ವ್ಯವಸ್ಥಿತವಾಗಿ ದಾರಿ ನಿರ್ಮಿಸಬೇಕು. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವ್ಯಾಪಾರಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು'

-ಆರ್‌.ಟಿ.ಲೋಕೇಶ್‌, ಹೂವಿನ ವ್ಯಾಪಾರಿ .

****

ಮಳಿಗೆಗಳನ್ನು ನಿರ್ಮಿಸಬೇಕು

"ಇಲ್ಲಿಗೆ ಸ್ಥಳಾಂತರಿಸಿ ಮೂರು ವರ್ಷಗಳಾಗಿವೆ. ಇಲ್ಲಿ ಸೌಕರ್ಯಗಳೇ ಇಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ. ಮಳಿಗೆಗಳನ್ನು ನಿರ್ಮಿಸಬೇಕು. ನಗರದಲ್ಲಿ ಇಲ್ಲೊಂದೇ ಕಡೆ ಹೂವಿನ ವ್ಯಾಪಾರ ವಹಿವಾಟಿಗೆ ವ್ಯವಸ್ಥೆ ಮಾಡಬೇಕು"

-ಮಂಜಮ್ಮ, ಹೂವಿನ ವ್ಯಾಪಾರಿ 

****

ಕಸ ವಿಲೇವಾರಿ ಮಾಡಲ್ಲ

‌'ದಿನಕ್ಕೆ ₹ 20 ಸುಂಕ ವಸೂಲಿ ಮಾಡುತ್ತಾರೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡಲ್ಲ. ವಾಹನ ನಿಲ್ಲಿಸಲು ಸ್ಥಳ ಇಲ್ಲ. ತರಕಾರಿ, ಹೂವು, ಹಣ್ಣು ಸಂಗ್ರಹಿಸಿಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು.'

ದಿನೇಶ್‌, ತರಕಾರಿ ವರ್ತಕ .

****

ಕುಡುಕರ ಹಾವಳಿ

ವಾಹನಗಳನ್ನು ಯರ್ರಾಬಿರ್ರಿಯಾಗಿ ನಿಲ್ಲಿಸುತ್ತಾರೆ. ಇಲ್ಲಿ ರಾತ್ರಿ ಹೊತ್ತಿನಲ್ಲಿ ಪುಂಡಪೋಕರಿಗಳು, ಕುಡುಕರ ಹಾವಳಿ ಇದೆ. ಇಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು.

ನಾಗೇಶ್‌, ನಿವಾಸಿ, ಚೊಕ್ಕಣ್ಣ ಬೀದಿ

****

ಯಾರೂ ಕಿವಿಗೆ ಹಾಕಿಕೊಳ್ಳಲ್ಲ

ವ್ಯಾಪಾರಿಗಳೇ ಸ್ವಂತಕ್ಕೆ ಮಂಚಿಕೆ ನಿರ್ಮಿಸಿಕೊಂಡಿದ್ದೇವೆ. ವ್ಯಾಪಾರ ಮಾಡದಿದ್ದರೆ ತುತ್ತಿನಚೀಲ ಹೊರೆಯವುದು ಹೇಗೆ? ಸಮಸ್ಯೆಗಳನ್ನು ಸಂಬಂಧಪಟ್ಟವರಿಗೆ ಗಮನಕ್ಕೆ ತಂದಿದ್ದೇವೆ. ಯಾರೂ ಕಿವಿಗೆ ಹಾಕಿಕೊಳ್ಳಲ್ಲ.

ಪರಮೇಶ್‌, ವ್ಯಾಪಾರಿ 

****

ಇಲಿ, ಹೆಗ್ಗಣಗಳ ಕಾಟ

ಮಾರುಕಟ್ಟೆ ಸುತ್ತವರಿದಿರುವ ಕಟ್ಟಡಗಳು ನಗರಸಭೆಯವು. 10ಕ್ಕೂ ಹೆಚ್ಚು ಮಳಿಗೆಗಳು ಇವೆ. ಎಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಇಲಿ, ಹೆಗ್ಗಣಗಳ ಕಾಟ ಇದೆ. ಅವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವುದು ಒಳಿತು.

-ವಿಶ್ವನಾಥ್‌, ವ್ಯಾಪಾರಸ್ಥ, ರಿಯಲ್‌ ಎಸ್ಟೇಟ್‌

 

ಪ್ರತಿಕ್ರಿಯಿಸಿ (+)