ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಂಚಾರ ದಟ್ಟಣೆ; ತಪ್ಪದ ಬವಣೆ

ಕಾಫಿನಾಡು: ವಾರಾಂತ್ಯದಲ್ಲಿ ಪ್ರವಾಸಿ ವಾಹನಗಳು ದಾಂಗುಡಿ
Last Updated 25 ಸೆಪ್ಟೆಂಬರ್ 2022, 17:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರ ಮತ್ತು ತಾಲ್ಲೂಕು ಕೇಂದ್ರಗಳ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ, ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದಾಗಿ ಸಂಚಾರ ತಾಪತ್ರಯವಾಗಿದೆ. ವಾರಾಂತ್ಯದ ದಿನಗಳಲ್ಲಿ ಪ್ರವಾಸಿ ವಾಹನಗಳು ಗಿಜಿಗುಡುತ್ತವೆ, ರಸ್ತೆಗಳಲ್ಲಿ ಓಡಾಟ ಹರಸಾಹಸವಾಗಿ ಪರಿಣಮಿಸಿದೆ.

ನಗರದ ಹನುಮಂತಪ್ಪ ವೃತ್ತ ಮತ್ತು ಎನ್‌ಎಂಸಿ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್‌ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಐ.ಜಿ ರಸ್ತೆ, ಎಂ.ಜಿ ರಸ್ತೆ, ಆರ್‌.ಜಿ ರಸ್ತೆ, ಮಾರುಕಟ್ಟೆ ರಸ್ತೆ, ಕೆ.ಎಂ.ರಸ್ತೆ, ಮಲ್ಲಂದೂರು ರಸ್ತೆಗಳಲ್ಲಿ ದಿನೇ ದಿನೇ ಸಮಸ್ಯೆ ಬಿಗಡಾಯಿಸುತ್ತಿದೆ. ಡಬಲ್‌ ಪಾರ್ಕಿಂಗ್‌, ಅಡ್ಡಾದಿಡ್ಡಿ ನಿಲುಗಡೆ ಮೊದಲಾದವು ಬಿಕ್ಕಟ್ಟಿಗೆ ಎಡೆಮಾಡಿವೆ.

ನಗರದ ತೊಗರಿಹಂಕಲ್‌ ವೃತ್ತ ನಾಲ್ಕು ರಸ್ತೆಗಳ ಸಂಗಮ ಬಿಂದುವಾಗಿದೆ. ಈ ವೃತ್ತದಲ್ಲಿ ಸಿಗ್ನಲ್‌ ದೀಪ್‌ ಅಳವಡಿಸಬೇಕು ಎಂಬ ಬೇಡಿಕೆ ಇದೆ. ಸುಗಮ ಸಂಚಾರ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಹಲವರು ಮನವಿ ಸಲ್ಲಿಸಿದ್ದಾರೆ.

ಪಾರ್ಕಿಂಗ್ ಸಮಸ್ಯೆ

ಕಡೂರು: ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ತಾಲ್ಲೂಕು ಕಚೇರಿಯಿಂದ ಪುರಸಭೆವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ತಾಲ್ಲೂಕು ಕಚೇರಿಯಲ್ಲಿನ ಸಬ್ ರಿಜಿಸ್ಟರ್ ಕಚೇರಿಗೆ ಬರುವವರು ತಮ್ಮ ವಾಹನಗಳನ್ನು ಕಚೇರಿ ಆವರಣದ ಹೊರಗೆ ಅಡ್ಡಾದಿಡ್ಡಿ ನಿಲ್ಲಿಸುವುದು ಸಂಚಾರಕ್ಕೆ ತೊಡಕಾಗಿದೆ. ಗಣಪತಿ ಆಂಜನೇಯ ಸ್ವಾಮಿ ಸರ್ಕಲ್, ಡಾ.ಬಿ ಆರ್.ಅಂಬೇಡ್ಕರ್ ವೃತ್ತದಲ್ಲಿಯೂ ಇದೆ. ಮೆಸ್ಕಾಂ ಕಚೇರಿ ಮುಂದೆ ಮತ್ತು ಶಾಸಕರ ಕಚೇರಿ ಮುಂದೆ ಯಾವಾಗಲೂ ಹತ್ತಕ್ಕೂ ಹೆಚ್ಚು ಜೆಸಿಬಿ, ಕ್ರೇನ್‌ಗಳು ಸದಾ ನಿಂತಿರುತ್ತವೆ. ಈ ಭಾಗಗಳಲ್ಲಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತದೆ.

‘ಪಟ್ಟಣದ ಪ್ರಮುಖ ರಸ್ತೆಯಾದ ದೇವರಾಜ ಅರಸು ರಸ್ತೆ ಭಾಗದಲ್ಲಿ ಈಚೆಗೆ ಪಾರ್ಕಿಂಗ್ ಲಾಟ್ ಆಗಿದೆ. ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ವಾಹನ ನಿಲ್ಲಿಸದಂತೆ ತಾಕೀತು ಮಾಡಿ, ಹಲವರಿಗೆ ದಂಡ ವಿಧಿಸಿದರೂ, ನೋ ಪಾರ್ಕಿಂಗ್ ಫಲಕ ಅಳವಡಿಸಿದರೂ ರಸ್ತೆ ಮೇಲೆ ವಾಹನ ನಿಲ್ಲಿಸುವ ಪರಿಪಾಟ ನಿಂತಿಲ್ಲ. ಪೊಲೀಸರ ಜೊತೆ ಸಾರ್ವಜನಿಕರ ಸಹಕಾರವೂ ಅಗತ್ಯ’ ಎಂದು ಪಿಎಸ್‌ಐ ರಮ್ಯಾ ಹೇಳುತ್ತಾರೆ.

ವಾಹನ ದಟ್ಟಣೆ ವಿಪರೀತ

ಬೀರೂರು: ಪಟ್ಟಣದ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿಯೇ ಆಗಿದ್ದರೂ ತಕ್ಕ ವಿಸ್ತಾರ ಇಲ್ಲದ ಕಾರಣ ದಟ್ಟಣೆ ವಿಪರೀತವಾಗಿದೆ.

ಬೆಳಿಗ್ಗೆ 8ರ ಬಳಿಕ ಇಲ್ಲಿ ರಸ್ತೆ ದಾಟುವುದೇ ಒಂದು ಸಾಹಸ. ಮುಖ್ಯರಸ್ತೆಯಲ್ಲಿಯೇ ಸಾರ್ವಜನಿಕ ಆಸ್ಪತ್ರೆ, ಪುರಸಭೆ ಕಚೇರಿ, ನಾಡ ಕಚೇರಿ, ಪೊಲೀಸ್‌ಠಾಣೆ, ಸಂತೆ ತಿರುವು, ಹಲವು ವಾಣಿಜ್ಯ ಮಳಿಗೆಗಳು, ಕಲ್ಯಾಣಮಂದಿರ ಈ ಎಲ್ಲವೂ ಸಮೀಪದಲ್ಲಿಯೇ ಇವೆ. ನಿತ್ಯವೂ ದ್ವಿಚಕ್ರ ವಾಹನಗಳ ‘ಜಾತ್ರೆ’ ನೆರೆದಿರುತ್ತದೆ.

ಡಿಸಿಸಿ ಬ್ಯಾಂಕ್‌ ಕಚೇರಿಗೆ ಹೊಂದಿಕೊಂಡಂತೆ ಮೂರು ಶಾಲೆಗಳಿವೆ. ವಿದ್ಯಾರ್ಥಿಗಳು ಮುಖ್ಯರಸ್ತೆ ದಾಟುವಾಗ ಜೀವ ಕೈಲಿ ಹಿಡಿದುಕೊಂಡೇ ಓಡಾಡುವ ಸ್ಥಿತಿ ಇದೆ. ಶನಿವಾರ ವಾರದಸಂತೆಯ ದಿನವಾಗಿದ್ದು ಎಂದಿಗಿಂದ ಹೆಚ್ಚು ಜನ ಮತ್ತು ವಾಹನಗಳ ಓಡಾಟ ಇರುತ್ತದೆ. ಸಂಚಾರ ದಟ್ಟಣೆ ನಿಯಂತ್ರಿಸುವುದೇ ಕಷ್ಟ.

ಬೀರೂರು ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯ ಸುಮಾರು ನಾಲ್ಕುಸಾವಿರ ವಾಹನಗಳು ಸಂಚರಿಸುತ್ತವೆ, ಪೊಲೀಸ್‌ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾರ್ಷಿಕ 100ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಬೀರೂರು ಅಥವಾ ಕಡೂರಿನಲ್ಲಿ ಸಂಚಾರ ಠಾಣೆ ಸ್ಥಾಪಿಸಬೇಕು ಎಂದು ಕೂಗು ಇದೆ.

ರಸ್ತೆ ಕಿರಿದು, ಸಂಚಾರ ದಟ್ಟಣೆ

ಅಜ್ಜಂಪುರ: ಪಟ್ಟಣದ ಟಿ.ಎಚ್. ರಸ್ತೆ ಕಿರಿದಾಗಿದೆ. ಇದು, ಟ್ರಾಫಿಕ್ ಸಮಸ್ಯೆಗೆ ಎಡೆಮಾಡಿದೆ. ಶಾಲೆ, ಕಚೇರಿ ಆರಂಭ, ಮುಕ್ತಾಯದ ವೇಳೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ.

ಟಿ.ಎಚ್ ರಸ್ತೆಯ ಕನ್ನಡ ನೂತನ ಶಾಲೆಯಿಂದ ರೈಲ್ವೆ ಗೇಟ್ ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಶುರುವಾಗಿತ್ತು. ಕೆಲ ವಾಣಿಜ್ಯ ಮಳಿಗೆ ಮಾಲೀಕರು, ಕೋರ್ಟ್ ಮೆಟ್ಟಿಲೇರಿದ್ದು, ವಿಸ್ತರಣೆ ಕಾಮಗಾರಿ ಸ್ಥಗಿತವಾಗಿದೆ.

ಪ್ರಮುಖ ವಾಣಿಜ್ಯ ಮಳಿಗೆಗಳು, ಬಸ್ ನಿಲ್ದಾಣವೂ ಟಿ.ಎಚ್.ರಸ್ತೆಯಲ್ಲಿವೆ. ವ್ಯವಹಾರಕ್ಕೆ ಬರುವ ಗ್ರಾಹಕರು, ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ರಸ್ತೆ ಬದಿ ನಿಲುಗಡೆ ಮಾಡುತ್ತಾರೆ. ಇದು, ವಾಹನ ಸಂಚಾರಕ್ಕೆ ತೊಡಕಾಗಿದೆ ಅಲ್ಲದೇ, ಪಾದಾಚಾರಿಗಳ ಒಡಾಟಕ್ಕೂ ಅಡ್ಡಿಯಾಗಿದೆ.

ರಸ್ತೆ ವಿಸ್ತರಣೆ ಮಾಡಬೇಕು. ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ರಸ್ತೆ ದಾಟಲು ಪಡಿಪಾಟಲು

ತರೀಕೆರೆ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದೂಹೋಗಿದೆ. ಹೊಸೂರು ಕ್ರಾಸ್‌ನಿಂದ ಲಕ್ಕವಳ್ಳಿ ಕ್ರಾಸ್ ವರೆಗೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚು ಇದೆ.

ಓಂ ವೃತ್ತ, ಎಂ.ಜಿ ರಸ್ತೆ, ಗಣಪತಿ ಪೆಂಡಾಲ್, ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲವೊಮ್ಮೆ ಟ್ರಾಫಿಕ್‌ ಜಾಮ್‌ ಆಗುತ್ತದೆ.

ಈ ಭಾಗದಲ್ಲಿ ಮಕ್ಕಳು, ವೃದ್ಧರುರು, ಮಹಿಳೆಯರು ರಸ್ತೆ ದಾಟಲು ಪಡಿಪಾಟಲು ಪಡಬೇಕು. ಪಾದಚಾರಿ ಮಾರ್ಗ ಇಲ್ಲ.

ಕಳೆದ ಮೂರು ವರ್ಷದಲ್ಲಿ 245 ಅಪಘಾತ ಪ್ರಕರಣ ದಾಖಲಾಗಿವೆ. 58 ಸಾವು ಸಂಭವಿಸಿವೆ ಎನ್ನುತ್ತವೆ ಪೋಲಿಸ್ ದಾಖಲೆಗಳು.

ರಸ್ತೆ ವಿಸ್ತರಣೆಗೆ ಕಟ್ಟಡ ತೆರವುಗೂಳಿಸಿ ದಶಕ ಕಳೆದರೂ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿಲ್ಲ. ವಿಭಜಕ ಅಳವಡಿಸಿಲ್ಲ ಎಂದು ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಹೇಳುತ್ತಾರೆ.

ರಸ್ತೆಯ ಇಕ್ಕೆಲದಲ್ಲಿ ವಾಹನ ನಿಲುಗಡೆ; ಸಂಚಾರ ಬಿಕ್ಕಟ್ಟು
ಶೃಂಗೇರಿ:
ಪಟ್ಟಣದ ಭಾರತೀ ಬೀದಿಯ ಕುರುಬಕೇರಿ ರಸ್ತೆಯಿಂದ ವೆಲ್‍ಕಮ್ ಗೇಟ್‍ವರೆಗೆ, ಹರಿಹರ ಬೀದಿ, ಮಲ್ಲಿಕಾರ್ಜುನ ಬೀದಿಯಲ್ಲಿ ವಾಹನಗಳನ್ನು ಇಕ್ಕೆಲಗಳಲ್ಲಿ ನಿಲುಗಡೆ ಮಾಡುವುದು ಸಂಚಾರಕ್ಕೆ ತೊಂದರೆಯಾಗಿದೆ.

ಪ್ರವಾಸಿ ವಾಹನಗಳಿಗೆ ಗಾಂಧಿ ಮೈದಾನದಲ್ಲಿ, ಸ್ಥಳೀಯರಿಗೆ ರಸ್ತೆಯ ಒಂದು ಕಡೆ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೂ ಸಾರ್ವಜನಿಕರು ಕಾರು, ಬೈಕ್‍ ಮೊದಲಾದವನ್ನು ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸುತ್ತಾರೆ.

ಮುಖ್ಯ ರಸ್ತೆಯಲ್ಲಿ ಶಾರದಾ ಮಠದಿಂದ ಕುರುಬಕೇರಿ ವೃತ್ತದವರೆಗೆ ರಸ್ತೆಯ ಎರಡು ಕಡೆ ವಾಹನ ನಿಲ್ಲಿಸಲು ಅವಕಾಶ ಇಲ್ಲ. ಆದರೆ ಮುಂದುವರೆದ ಭಾರತೀ ಬೀದಿ, ಹರಿಹರ ಬೀದಿ ಮತ್ತು ಮಲ್ಲಿಕಾರ್ಜುನ ಬೀದಿಯಲ್ಲಿ ಈ ಕಟ್ಟುನಿಟ್ಟಿನ ನೀತಿ ಜಾರಿ ಮಾಡಲು ಪಟ್ಟಣ ಪಂಚಾಯಿತಿಯಿಂದ ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಕಳುಹಿಸಿದ್ದೇವೆ. ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ತಿಳಿಸಿದರು.


ವಾರಾಂತ್ಯದಲ್ಲಿ ಸಂಚಾರ ದಟ್ಟಣೆ

ಕಳಸ: ಪಟ್ಟಣದ ಮುಖ್ಯ ರಸ್ತೆ, ಮಹಾವೀರ ರಸ್ತೆ ಮತ್ತು ಕೆ.ಎಂ.ರಸ್ತೆಯಲ್ಲಿ ವಾರಾಂತ್ಯದಲ್ಲಿ ಪ್ರವಾಸಿ ವಾಹನಗಳ ದಟ್ಟಣೆಯಿಂದಾಗಿ ಸಂಚಾರ ದುಸ್ತರವಾಗುತ್ತದೆ.

ವಾರವಿಡೀ ಮುಖ್ಯ ರಸ್ತೆಯ ಅರ್ಧ ಭಾಗವನ್ನು ವಾಹನ ನಿಲುಗಡೆಯೇ ಆಕ್ರಮಿಸುವುದರಿಂದ ವಾಹನ ಸಂಚಾರಕ್ಕೆ ತೊಡಕು ಆಗುತ್ತಿದೆ. ಸ್ಥಳೀಯರು, ಪ್ರವಾಸಿಗರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದೆ.

ಈ ಸಮಸ್ಯೆ ನಿವಾರಿಸಲು ಈವರೆಗೆ ಪ್ರಯತ್ನವೇ ಆಗಿಲ್ಲ ಎಂಬ ಬೇಸರ ಜನರಲ್ಲಿದೆ. ಪ್ರತಿದಿನ ಬೆಳಿಗ್ಗೆ, ಸಂಜೆ ವೇಳೆಗೆ ಮಹಾವೀರ ರಸ್ತೆಯ ಜೆಇಎಂ ಶಾಲೆ ಬಳಿ ಇಕ್ಕಟ್ಟು ಸ್ಥಿತಿ ನಿರ್ಮಾಣ ಆಗುತ್ತಿದೆ. ಪುಟ್ಟ ಮಕ್ಕಳು ವಾಹನಗಳಿಂದ ತಪ್ಪಿಸಿಕೊಂಡು ರಸ್ತೆ ದಾಟುವ ಸನ್ನಿವೇಶ ಗಾಬರಿ ಹುಟ್ಟಿಸುತ್ತದೆ.

ಪಾರ್ಕಿಂಗ್‌ ಸಮಸ್ಯೆ
ಕೊಪ್ಪ:
ಪಟ್ಟಣದಲ್ಲಿ ದಿನ ಕಳೆದಂತೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸುತ್ತಿದೆ.

ಪಾರ್ಕಿಂಗ್ ಸಮಸ್ಯೆಯಿಂದಾಗಿ ಮುಖ್ಯರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆ ಪಕ್ಕದಲ್ಲಿ ವಾಹನ ನಿಲುಗಡೆ ಮಾಡಲು ವಾರಕ್ಕೆ ಎರಡು ದಿನ ಒಂದು ಬದಿಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ. ಆದರೆ, ಪಾರ್ಕಿಂಗ್ ಸಮಸ್ಯೆ ಜನರಿಗೆ ನಿತ್ಯ ಕಿರಿಕಿರಿಯಾಗಿ ಪರಿಣಮಿಸಿದೆ.

ಸುಭಾಷ್ ರಸ್ತೆ, ಬಸ್ ನಿಲ್ದಾಣದ ಸಮೀಪ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಬಸ್ ನಿಲ್ದಾಣದ ಚಿಕ್ಕ ಜಾಗದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ, ಇಲ್ಲಿ ಬೆರಳೆಣಿಕೆ ವಾಹನಗಳಷ್ಟೇ ನಿಲ್ಲಿಸಲು ಸಾಧ್ಯವಿದೆ. ಹೀಗಿದ್ದರೂ ನಿಲ್ದಾಣದೊಳಗೆ ಬಸ್ ಹೋಗಿ ಬರಲು ಅಡ್ಡಿಯಾಗುತ್ತಿದೆ. ಕೆಲವೊಮ್ಮೆ ಬ್ಯಾರಿಕೇಡ್ ಹಾಕಿದ್ದರೂ, ಅನಿವಾರ್ಯವಾಗಿ ಅದನ್ನು ಮೀರಿ ವಾಹನ ಪಾರ್ಕಿಂಗ್ ಮಾಡಿರುತ್ತಾರೆ.

ಪಟ್ಟಣ ಪಂಚಾಯಿತಿ ಹಳೆಯ ಕಟ್ಟಡ ಜಾಗ ಖಾಲಿ ಇದೆ. ವಾಹನ ಪಾರ್ಕಿಂಗ್ ಆ ಸ್ಥಳವನ್ನು ಬಳಸಿಕೊಳ್ಳಲು ಪಟ್ಟಣ ಪಂಚಾಯಿತಿ ಕ್ರಮ ವಹಿಸಿದರೆ ಸ್ವಲ್ಪಮಟ್ಟಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸಾರ್ವಜನಿಕರ ಒತ್ತಾಯ.

(ಪ್ರಜಾವಾಣಿ ತಂಡ: ಬಿ.ಜೆ.ಧನ್ಯಪ್ರಸಾದ್‌, ಬಾಲು ಮಚ್ಚೇರಿ, ಎನ್‌.ಸೋಮಶೇಖರ್‌, ಜೆ.ಒ.ಉಮೇಶಕುಮಾರ್‌, ಎಚ್‌.ಎಂ.ರಾಜಶೇಖರಯ್ಯ, ಕೆ.ಎನ್‌.ರಾಘವೇಂದ್ರ, ರವಿಕುಮಾರ್‌ ಶೆಟ್ಟಿಹಡ್ಲು, ರವಿ ಕೆಳಂಗಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT