ಮಕ್ಕಳು, ಮಹಿಳೆಯರಿಗುಂಟು ಇಂತಹ ರಕ್ಷಣೆ!

7
ಕೆಎಸ್‌ಪಿ ಆ್ಯಪ್‌ಗೆ ಸಾರ್ವಜನಿಕರ ಶ್ಲಾಘನೆ

ಮಕ್ಕಳು, ಮಹಿಳೆಯರಿಗುಂಟು ಇಂತಹ ರಕ್ಷಣೆ!

Published:
Updated:
Deccan Herald

ಮೂಡಿಗೆರೆ: ಪಟ್ಟಣದಲ್ಲಿ ಬುಧವಾರ ಇಡೀ ದಿನ ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಕೆಎಸ್‌ಪಿ ಆ್ಯಪ್‌ನದ್ದೇ ಸುದ್ದಿ. ಮಂಗಳವಾರ ಆ್ಯಪ್‌ ಬಳಕೆಯಿಂದ ತ್ವರಿತ ಗತಿಯಲ್ಲಿ ಮಹಿಳೆ ಹಾಗೂ ಮಕ್ಕಳನ್ನು ರಕ್ಷಣೆ ಮಾಡಿದ ಘಟನೆಯೇ ಈ ಸುದ್ದಿ ಹರಿದಾಡಲು ಕಾರಣವಾಗಿದ್ದು, ರಾಜ್ಯದಲ್ಲೊಂದು ಇಂತಹ ಆ್ಯಪ್‌ ಮಹಿಳೆಯರು, ಮಕ್ಕಳ ರಕ್ಷಣೆಗೆ ಕಂಕಣಬದ್ಧವಾಗಿ ನಿಂತಿದೆ ಎಂಬುದು ಹೆಮ್ಮೆಯ ಸಂಗತಿ ಎಂಬ ಶ್ಲಾಘನೆ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಸುಮಾರು 50ರ ಆಸುಪಾಸಿನ ಇಬ್ಬರು ಮಹಿಳೆಯರು ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಮುಂಜಾನೆಯಿಂದಲೂ ಭಿಕ್ಷೆ ಬೇಡುತ್ತಿದ್ದರು. ಮಧ್ಯಾಹ್ನದ ಸುಮಾರಿಗೆ ಇಬ್ಬರು ಮಹಿಳೆಯರೂ ಮದ್ಯ ಸೇವಿಸಿ ಪಟ್ಟಣದ ಅಂಗಡಿ ಮಳೆಗೆಯೊಂದರ ಬಳಿ ಅಪ್ರಜ್ಞಾವಸ್ಥೆಯಲ್ಲಿ ಮಲಗಿದ್ದು, ಅವರೊಂದಿಗಿದ್ದ ಕಂದಮ್ಮಗಳಿಬ್ಬರು ಊಟಕ್ಕಾಗಿ ಗೋಳಿಡುತ್ತಿದ್ದವು. ಇದನ್ನು ಕಂಡು ದಾರಿಹೋಕರು ಮಕ್ಕಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ವಿವಿಧ ಇಲಾಖೆಗಳಿಗೆ ದೂರವಾಣಿ ಮೂಲಕ ಮಕ್ಕಳ ಅಸಹಾಯಕತೆಯ ಬಗ್ಗೆ ಮಾಹಿತಿ ನೀಡಿದರಾದರೂ ಯಾರೂ ನೆರವಿಗೆ ಬರಲಿಲ್ಲ.

ಇದನ್ನು ಕಂಡ ಸ್ಥಳದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್‌ ಅವರು ಈ ಹಿಂದೆ ಜೇಸಿಐ ಸಭೆಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅಶೋಕ್ ಎಂಬುವರು ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಕೆಎಸ್‌ಪಿ ಆ್ಯಪ್‌ ಬಗ್ಗೆ ಮಾಹಿತಿ ನೀಡಿದ್ದನ್ನು ನೆನಪಿಸಿಕೊಂಡರು. ಮಕ್ಕಳ ಹೀನಾಯ ಸ್ಥಿತಿಯ ಛಾಯಾಚಿತ್ರ ತೆಗೆದು ಅದನ್ನು ಅಪ್‌ಲೋಡ್‌ ಮಾಡಿ ಮಾಹಿತಿ ನೀಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂಬ ಮಾಹಿತಿ ನೀಡಿದರು.

ನೋಡು ನೋಡುತ್ತಿದ್ದಂತೆಯೇ ಪೊಲೀಸ್‌ ವಾಹನ ಸ್ಥಳಕ್ಕೆ ಬಂತು. ಅವರು ಮಕ್ಕಳ ಬಗ್ಗೆ ವಿಚಾರಿಸಿದರು. ಅವರು ಮತ್ಯಾರಿಗೋ ಕರೆ ಮಾಡಿದರು. ನಂತರ, ‘ಇನ್ನು 10 ನಿಮಿಷಗಳಲ್ಲಿ ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿ ಹಾಗೂ 40 ನಿಮಿಷಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಸ್ಥಳಕ್ಕೆ ಬರಲಿದ್ದಾರೆ’ ಎಂಬ ಮಾಹಿತಿ ನೀಡಿದರು.

ಸಿಬ್ಬಂದಿ ಹೇಳಿದ ಅವಧಿಗೂ ಮುಂಚೆಯೇ ಜಿಲ್ಲಾ ಕೇಂದ್ರದಿಂದ ಬಂದ ಸಿಬ್ಬಂದಿ ಮಕ್ಕಳ ರಕ್ಷಣೆಗೆ ಮುಂದಾದರು. ಶಿಶು ಅಭಿವೃದ್ಧಿ ಅಧಿಕಾರಿಯ ನೇತೃತ್ವದಲ್ಲಿ ಮಕ್ಕಳು ಹಾಗೂ ಮಹಿಳೆಯರಿಬ್ಬರನ್ನು ಸ್ಥಳೀಯ ಠಾಣೆಗೆ ಕರೆದೊಯ್ದು ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಮಕ್ಕಳ ಅಸಹಾಯಕತೆ ಕುರಿತು ಕರೆ ಮಾಡಿದ ಕ್ಷಣದಿಂದ ಮಕ್ಕಳು ರಕ್ಷಣಾ ಸಮಿತಿಗೆ ತಲುಪುವವರೆಗೂ ಕೆಎಸ್‌ಪಿ ಆ್ಯಪ್‌ ಕಡೆಯಿಂದ ಕರೆ ಮಾಡಿ ಪ್ರತಿಕ್ಷಣದ ಮಾಹಿತಿ ಪಡೆದದ್ದು ಸಾರ್ವಜನಿಕರಲ್ಲಿ ಮೆಚ್ಚುಗೆ ಪಡೆಯಿತು.

 ರಕ್ಷಣೆಗೆ ಆ್ಯಪ್‌ನ ಬಲ

ಸುಲಭವಾಗಿ ಈ ಆ್ಯಪನ್ನು ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು ಒಂಟಿ ಮಹಿಳೆಯರು, ಕಾಲೇಜು ಯುವತಿಯರು, ಹೆಣ್ಣುಮಕ್ಕಳು ಈ ಆ್ಯಪ್‌ ಬಳಕೆಯಿಂದ ಸರಕ್ಷವಾಗಿ ಪಯಣಿಸಬಹುದು ಎಂಬ ಸಂದೇಶ ಇಡೀ ಘಟನೆಯಿಂದ ಅರಿವಾಯಿತು.

ಮಕ್ಕಳನ್ನು ರಕ್ಷಣೆ ಮಾಡಿದ ಬಗ್ಗೆ ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದ್ದು, ಕೆಎಸ್‌ಪಿ ಆ್ಯಪ್‌ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !