ಸಾರ್ವಜನಿಕರಿಂದ ಭಿನ್ನ ಅಭಿಪ್ರಾಯ ವ್ಯಕ್ತ

7
ನೆಲ್ಯಾಡಿ- ಚಿತ್ರದುರ್ಗ ಚತುಷ್ಪಥ ನಿರ್ಮಾಣ; ಸಮಾಲೋಚನಾ ಸಭೆ

ಸಾರ್ವಜನಿಕರಿಂದ ಭಿನ್ನ ಅಭಿಪ್ರಾಯ ವ್ಯಕ್ತ

Published:
Updated:
Deccan Herald

ಚಿಕ್ಕಮಗಳೂರು: ‘ಭಾರತ್‌ ಮಾಲಾ’ ಯೋಜನೆಯಡಿ ನೆಲ್ಯಾಡಿಯಿಂದ ಚಿತ್ರದುರ್ಗಕ್ಕೆ ಚತುಷ್ಪಥ ನಿರ್ಮಾಣದ ಪ್ರಸ್ತಾಪಕ್ಕೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಕೆಲವರು ಸಮ್ಮತಿ, ಮತ್ತೆ ಕೆಲವರು ಅಸಮ್ಮತಿ ವ್ಯಕ್ತಪಡಿಸಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಪ್ಯಾಕೇಜ್‌–2 (ಮೂಡಿಗೆರೆ ಹ್ಯಾಂಡ್‌ ಪೋಸ್ಟ್‌ನಿಂದ ಚಿಕ್ಕಮಗಳೂರು ಬೈಪಾಸ್‌) ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಿದ್ದರು.

‘ ಶಿಶಿಲಾ–ಭೈರಾಪುರ ಭಾಗದಲ್ಲಿ ಅರಣ್ಯ ಕಡಿದು ಹೊಸ ಮಾರ್ಗ ನಿರ್ಮಾಣ ಮಾಡುವ ಅಗತ್ಯ ಇಲ್ಲ. ಶಿಶಿಲಾ–ಭೈರಾಪುರ ಭಾಗದಲ್ಲಿ ಮಳೆ ಕಾಡು ಇದೆ. ಪ್ಯಾಕೇಜ್‌–1ಗೆ (ನೆಲ್ಯಾಡಿ–ಮೂಡಿಗೆರೆ ಹ್ಯಾಂಡ್‌ಪೋಸ್ಟ್‌) ಸಹಮತ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಆರು ರಸ್ತೆಗಳು ಇವೆ. ತಂತ್ರಜ್ಞಾನ ಬಳಸಿಕೊಂಡು ಈ ರಸ್ತೆಗಳನ್ನೇ ಸುಧಾರಣೆ ಮಾಡುವತ್ತ ಚಿತ್ತ ಹರಿಸಬಹುದು’ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಟ್ರಸ್ಟಿ ಡಿ.ವಿ.ಗಿರೀಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಲ ನಿರ್ವಹಣೆಗೆ ಸಂಬಂಧಿಸಿದಂತೆ ಇದರಲ್ಲಿ ಮಾಹಿತಿ ಇಲ್ಲ. ಪ್ರಸ್ತಾಪಿತ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಯಬೇಕಾದ ಅಗತ್ಯ ಇದೆ. ಜಿಲ್ಲಾಧಿಕಾರಿಯವರ ಮಾತಿನ ದಾಟಿ ಯೋಜನೆಗೆ ಪೂರಕವಾಗಿರುವಂತೆ ಕಾಣಿಸುತ್ತಿದೆ’ ಎಂದು ಆಕ್ಷೇಪಿಸಿದರು.

‘ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಯೋಜನೆ ಉದ್ದೇಶವನ್ನು ತಿಳಿಸಿದ್ದೇನೆ. ಯೋಜನೆ ಪರವಾಗಿ ಅಥವಾ ವಿರೋಧವಾಗಿ ನಾನು ಇಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸ್ಪಷ್ಟಪಡಿಸಿದರು.

‘ಯೋಜನೆಗೆ ಜಮೀನು ಸ್ವಾಧೀನ, ಸರ್ಕಾರಿ ಮತ್ತು ಖಾಸಗಿ ಜಾಗ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ. ಕಾಡಿನಲ್ಲಿ ಹೆದ್ದಾರಿ ನಿರ್ಮಿಸಿದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಮುಂದಾಲೋಚನೆ ಇರಬೇಕು. ಶಿಶಿಲಾ–ಭೈರಾಪುರ ಭಾಗದಲ್ಲಿ ವಾರ್ಷಿಕ 300 ಇಂಚು ಮಳೆಯಾಗುತ್ತದೆ. ಇಲ್ಲಿ ಹೆದ್ದಾರಿ ನಿರ್ಮಿಸಬಾರದು’ ಪರಿಸರಾಸಕ್ತ ಎಸ್.ಗಿರಿಜಾಶಂಕರ ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಿಶಿಲಾ–ಭೈರಾಪುರ ಭಾಗದಲ್ಲಿ ಹೆದ್ದಾರಿ ನಿರ್ಮಾಣದಿಂದ ಪಶ್ಚಿಮ ಘಟ್ಟದ ನದಿಗಳು, ಕಾಡು, ವನ್ಯಜೀವಿ ಸಂಕುಲಕ್ಕೆ ಧಕ್ಕೆ ಉಂಟಾಗುತ್ತದೆ. ಚಾರ್ಮಾಡಿ ಮಾರ್ಗವನ್ನೇ ಅಭಿವೃದ್ಧಿ ಪಡಿಸುವುದು ಒಳ್ಳೆಯದು’ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಹೇಳಿದರು.

‘ಕಾಯಸಾಧು ಅಧ್ಯಯನದ ಮಾಹಿತಿ ಇಲ್ಲ. ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇತರ ಸಾಧ್ಯತೆಗಳನ್ನು ಪರಿಶೀಲಿಸಬೇಕು’ ಎಂದು ಸಿವಿಲ್‌ ಎಂಜಿನಿಯರ್‌ ಸ್ಟ್ಯಾನಿ ನಾಥನ್‌ ಹೇಳಿದರು.

‘ಈ ಹೆದ್ದಾರಿ ಅಗತ್ಯ ಇದೆ. ಚತುಷ್ಪಥ ನಿರ್ಮಿಸುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಅರಣ್ಯ, ಕಂದಾಯ ಇಲಾಖೆ ಎಲ್ಲರೂ ಒಗ್ಗೂಡಿ ಯೋಜನೆ ಜಾರಿಗೆ ಕ್ರಮ ವಹಿಸಬೇಕು’ ಎಂದು ದಮ್ಮದಹಳ್ಳಿಯ ಪಂಚಾಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಈ ರಸ್ತೆ ನಿರ್ಮಿಸುವುದು ಒಳ್ಳೆಯದು. ಸಂಪರ್ಕ, ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ಮಳಲೂರಿನ ಸೋಮೇಗೌಡ ಅಭಿಪ್ರಾಯಪಟ್ಟರು.

‘ಹೆದ್ದಾರಿ ನಿರ್ಮಾಣಕ್ಕೆ ಯಾವುದೇ ಅರಣ್ಯ ಸಂರಕ್ಷಣೆ ಕಾಯ್ದೆಗಳು ಅಡ್ಡಿಯಾಗುವುದಿಲ್ಲವೇ ಎಂಬುದನ್ನ ಪರಿಶೀಲಿಸಬೇಕು. ತೊಡಕು ಇಲ್ಲದಿದ್ದರೆ ಅನುಷ್ಟಾನಗೊಳಿಸುವುದು ಒಳಿತು’ ಎಂದು ಚಿಕ್ಕಮಗಳುರಿನ ಸತ್ಯಪಾಲ ಹೇಳಿದರು.

‘ವೈಜ್ಞಾನಿಕ ಅಧ್ಯಯನ ನಡೆಯಬೇಕು. ಶಿಶಿಲಾ–ಭೈರಾಪುರ ಭಾಗಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಈ ಕುಗ್ರಾಮಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಿ, ಅಭಿವೃದ್ಧಿಗೆ ಗಮನ ನೀಡಬೇಕು’ ಎಂದು ಅಮಿತ್‌ರಾಜ್‌ ಕೋರಿದರು.

‘ಇದೊಂದು ಒಳಿತಿನ ಯೋಜನೆ. ದೇಶದ ಅಭಿವೃದ್ಧಿಗೆ ಒಳ್ಳೆಯದಾಗಬೇಕಾದರೆ ಈ ಅವಕಾಶವನ್ನು ಬಳಸಿಕೊಳ್ಳಬೇಕಾದ ಅಗತ್ಯ ಇದೆ. ಮುಕ್ತ ಮನಸ್ಸಿನಿಂದ ಭೂಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟು, ಪರಿಹಾರ ಕೇಳಲು ಮನವಿ ಮಾಡಬೇಕು. ತಕರಾರು ಮಾಡಬಾರದು’ ಎಂದು ಕೆಳಗೂರಿನ ವಕೀಲ ಯತಿರಾಜ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿರಿಷ್‌ ಗಂಗಾಧರಪ್ಪ, ಉಪವಿಭಾಗಾಧಿಕಾರಿ ಅಮರೇಶ್‌, ಉಪಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌, ಪ್ರಭಾರ ತಹಶೀಲ್ದಾರ್‌ ನಂದಕುಮಾರ್‌ ಇದ್ದರು.

ಪ್ರಸ್ತಾಪಿತ ಯೋಜನೆ ವಿವರ
ಭಾರತ್‌ ಮಾಲಾ ಯೋಜನೆಯಡಿ ನೆಲ್ಯಾಡಿ – ಚಿತ್ರದುರ್ಗ ಚತುಷ್ಪಥ ನಿರ್ಮಾಣ
ನೆಲ್ಯಾಡಿ – ಚಿತ್ರದುರ್ಗ – 232 ಕಿ.ಮೀ ರಾಷ್ಟ್ರೀಯ ಹೆದ್ದಾರಿ
ಜಿಲ್ಲಾವಾರು – ದಕ್ಷಿಣಕನ್ನಡ 28.9, ಚಿಕ್ಕಮಗಳೂರು–141, ಚಿತ್ರದುರ್ಗ – 61 ಕಿ.ಮೀ ಮಾರ್ಗ ₹ 7,000 ಕೋಟಿ ಅಂದಾಜು ವೆಚ್ಚದ ಯೋಜನೆ
ಬಾಳೂರು ರಕ್ಷಿತ ಅರಣ್ಯದಲ್ಲಿ 2.4 ಕಿ.ಮೀ ಹಾದು ಹೋಗುವ ಮಾರ್ಗ

ಪ್ಯಾಕೇಜ್‌–1:ನೆಲ್ಯಾಡಿ–ಮೂಡಿಗೆರೆ ಹ್ಯಾಂಡ್‌ಪೋಸ್ಟ್‌
ಪ್ಯಾಕೇಜ್‌–2:ಮೂಡಿಗೆರೆ ಹ್ಯಾಂಡ್‌ಪೋಸ್ಟ್‌– ಚಿಕ್ಕಮಗಳೂರು ಬೈಪಾಸ್‌
ಪ್ಯಾಕೇಜ್‌–3: ಚಿಕ್ಕಮಗಳೂರು ಬೈಪಾಸ್‌–ತಮ್ಮಟದಹಳ್ಳಿ
ಪ್ಯಾಕೇಜ್‌–4: ತಮ್ಮಟದಹಳ್ಳಿ–ಚಿತ್ರದುರ್ಗ

ಪ್ಯಾಕೇಜ್‌–2 ಹಾದುಹೋಗುವ ವ್ಯಾಪ್ತಿ (ಚಿಕ್ಕಮಗಳೂರು ತಾಲ್ಲೂಕಿನ 20 ಗ್ರಾಮಗಳು) 
ಮಾಚಗೊಂಡನಹಳ್ಳಿ, ಕೆಳಗೂರು, ಚಿತ್ತವಳ್ಳಿ, ಕುಡವಳ್ಳಿ, ವಸ್ತಾರೆ, ಆಲದಗುಡ್ಡೆ, ಮಹಜಿದ್ದು, ದಂಬದಹಳ್ಳಿ, ಶಿರಗುಂದ, ಕದ್ರಿಮಿದ್ರಿ, ಮಳಲೂರು, ಅಂಬಳೆ, ಮುಗಳವಳ್ಳಿ, ಕರ್ತಿಕೆರೆ, ಆರದವಳ್ಳಿ, ರಾಮನಹಳ್ಳಿ, ಹೊಸಕೋಟೆ, ಕ್ಯಾತನಬೀಡು, ಲಕ್ಯಾ, ಚಿಕ್ಕಗೌಜ, ಹಿರೇಗೌಜ

ಪ್ಯಾಕೇಜ್‌–3 ಹಾದುಹೋಗುವ ಚಿಕ್ಕಮಗಳೂರು ತಾಲ್ಲೂಕಿನ 7 ಗ್ರಾಮಗಳು
ಕುರಿಚಿಕ್ಕನಹಳ್ಳಿ, ಕೆಂಗೇನಹಳ್ಳಿ, ತಡಬೇನಹಳ್ಳಿ, ಉದ್ದೇಬೋರನಹಳ್ಳಿ, ಕೆಂಕೇರಿ, ಶ್ರೀನಿವಾಸಪುರ, ಜಕ್ಕೇರಿ ಕಾವಲು

‘ಕರಾವಳಿ–ಉತ್ತರ ಕರ್ನಾಟಕ ನೇರ ಸಂಪರ್ಕ’
ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ನಿರ್ಮಾಣವಾದರೆ ಕರಾವಳಿ–ಉತ್ತರ ಕರ್ನಾಟಕ ನೇರ ಸಂಪರ್ಕ ಸಾಧ್ಯವಾಗುತ್ತದೆ. ಬಳಸಿಕೊಂಡು ತಲುಪುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಈಗ ವಾಹನಗಳು ಸಂಖ್ಯೆ ಹೆಚ್ಚಾಗಿದೆ. ವಾಹನ ಸಾಂದ್ರತೆಗೆ ತಕ್ಕಂತೆ ರಸ್ತೆಗಳನ್ನು ನಿರ್ಮಿಸಬೇಕಾದ ಅಗತ್ಯ ಇದೆ. ರೈಲು ಮಾರ್ಗ, ರಸ್ತೆಗಳು ನಗರಗಳ ಅಭಿವೃದ್ಧಿಗೆ ಪೂರಕ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಕೈಗಾರಿಕೆ ಸ್ಥಾಪನೆ, ಉದ್ಯೋಗವಕಾಶ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

2013ರ ಭೂಸ್ವಾಧೀನ ಕಾಯ್ದೆ ಮಾರ್ಗದರ್ಶಿ ಸೂತ್ರಗಳಂತೆ ಪರಿಹಾರ ನೀಡಲಾಗುವುದು. ಅದರಂತೆ, ಗ್ರಾಮೀಣ ಪ್ರದೇಶದಲ್ಲಿ ಸಬ್‌ ರಿಜಿಸ್ಟ್ರಾರ್‌ ನಿಗದಿ ಮೌಲ್ಯದ 1: 4 ಮತ್ತು ನಗರಸಭೆ–ಪಟ್ಟಣಪಂಚಾಯಿತಿ–ಪುರಸಭೆ ವ್ಯಾಪ್ತಿಯಲ್ಲಿ (2 ಕಿ.ಮೀ) 1:2 ಅನುಪಾತದಲ್ಲಿ ಬೆಲೆ ನೀಡಲಾಗುತ್ತದೆ. ಪುನರ್ವಸತಿ ವ್ಯವಸ್ಥೆ ಮಾಡಲು ಅವಕಾಶ ಇದೆ. ಜಮೀನುಗಳಲ್ಲಿನ ಗಿಡ, ಮರಗಳಿಗೆ ಅರಣ್ಯ ಇಲಾಖೆ ನಿಗದಿಪಡಿಸುವ ಬೆಲೆ ಆಧರಿಸಿ ಪರಿಹಾರ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಾಧಕ–ಬಾಧಕಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

***
ರಸ್ತೆ ನಿರ್ಮಿಸುವುದು ಒಳ್ಳೆಯದು. ಪರಿಸರಕ್ಕೆ ಹಾನಿಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಂಡು ಯೋಜನೆ ಕಾರ್ಯಗತಗೊಳಿಸಬೇಕು.
- ಬಿ.ಜಿ.ಸೋಮಶೇಖರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ

ಯೋಜನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಚರ್ಚೆ ನಡೆಯಬೇಕು. ಪರ ಮತ್ತು ವಿರೋಧ ಬದಿಗಿಟ್ಟು ಚರ್ಚಿಸಬೇಕು. ಈ ಯೋಜನೆಯನ್ನು ಕೈಬಿಡುವುದು ಸರಿಯಲ್ಲ.
- ಎಚ್‌.ಎಚ್‌.ದೇವರಾಜ್‌, ಕಾಫಿ ಬೆಳೆಗಾರ

ಪರಿಸರ ಹಾಳುಗೆಡವಿ ಬದುಕಲು ಸಾಧ್ಯ ಇಲ್ಲ. ಕಾಡು ನಾಶ ಮಾಡಿದರೆ ಸಮಸ್ಯೆಯಾಗುತ್ತದೆ. ಜನಾಭಿಪ್ರಾಯ ಆಧರಿಸಿ ಯೋಜನೆ ಕಾರ್ಯಗತಕ್ಕೆ ಕ್ರಮ ವಹಿಸಬೇಕು.
- ಎಸ್‌.ಎಲ್‌.ಧರ್ಮೇಗೌಡ, ವಿಧಾನ ಪರಿಷತ್‌ ಸದಸ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !