ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಉಳಿವು, ದೇಶದ ಉಳಿವು: ಜ್ಞಾನಪ್ರಕಾಶ ಸ್ವಾಮೀಜಿ

Last Updated 19 ಜೂನ್ 2019, 13:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಭಾರತದ ಅಖಂಡತೆಯನ್ನು ಗಟ್ಟಿಯಾಗಿ ಹಿಡಿದಿರುವ ಏಕೈಕ ಧರ್ಮಗ್ರಂಥ ಸಂವಿಧಾನ, ನಾವೆಲ್ಲರೂ ಅದರ ಅಡಿಯಾಳುಗಳು. ಸಂವಿಧಾನದ ಉಳಿವು ಎಂದರೆ ಭಾರತದ ಉಳಿವು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅರ್ಥೈಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವದ ಅಂಗವಾಗಿ ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿ, ವಿವಿಧ ಸಂಘಟನೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್‌ ಚಿಂತನೆ ಸಭೆಯಲ್ಲಿ ಮಾತನಾಡಿದರು. ‘ ಸಂವಿಧಾನದ ಕಾನೂನುಗಳು ನಮ್ಮನ್ನು ಆಳುತ್ತೇವೆ, ಪಕ್ಷಗಳಲ್ಲ. ಪಕ್ಷಗಳು ಬರುತ್ತವೆ, ಹೋಗುತ್ತವೆ. ಮೋದಿ ಅವರು ಪ್ರಧಾನಿ ಆಗಿರುವುದೂ ಸಂವಿಧಾನದಿಂದಾಗಿಯೇ’ ಎಂದು ವಿಶ್ಲೇಷಿಸಿದರು.

‘ಇಂಥ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಕೆಲವರು ಆಡಿದ್ದಾರೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಅಂಬೇಡ್ಕರ್‌ ಅವರು ಭಾರತ ಆಮ್ಲಜನಕ. ಅವರು ಪೆನ್ನಿನಿಂದ ದೇಶ ಕಟ್ಟಿದರು, ಗನ್ನಿನಿಂದಲ್ಲ. ದೇಶದ ಎಲ್ಲರೂ ತಲೆಎತ್ತಿ ಬಾಳುವಂಥ ಅವಕಾಶವನ್ನು ಅಂಬೇಡ್ಕರ್‌ ನೀಡಿದ್ದಾರೆ. ಅವರನ್ನು ಕೊಳಕು ಮನಸ್ಸುಗಳವರು ಜಾತಿ ಚೌಕಟ್ಟಿನಲ್ಲಿ ಸಿಲುಕಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರಿಗೆ ಸುಮಾರು 14 ಸಾವಿರ ಎಕರೆ ಜಮೀನನ್ನು ಟಿಪ್ಪು ನೀಡಿದ್ದರು. ಟಿಪ್ಪು ಎಂದಿಗೂ ಬ್ರಿಟಿಷರ ಮುಂದೆ ಮಂಡಿಯೂರಲಿಲ್ಲ. ಅವರೊಬ್ಬ ಅಪ್ಪಟ ವೀರ ಎಂದು ಬಣ್ಣಿಸಿದರು.

ಹೈಕೋರ್ಟ್‌ ವಕೀಲ ಅನಂತನಾಯ್ಕ್‌ ಮಾತನಾಡಿ, ಕೆಲ ಕಿಡಿಗೇಡಿಗಳು ಸಂವಿಧಾನವನ್ನು ಸುಡುವುದಾಗಿ ಹೇಳಿದ್ದಾರೆ. ಅಪಾಯಕಾರಿ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ಬಗ್ಗೆ ಚರ್ಚೆ ನಾವು ಸಿದ್ಧ ಎಂದು ನಾವು ಸವಾಲು ಹಾಕಬೇಕಿದೆ ಎಂದರು.

ಸಂಸದರ ಪೈಕಿ ಶೇ 72 ರಷ್ಟು ಮಂದಿ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾರೆ. ಶೇ 93 ರಷ್ಟು ಮಂದಿ ಕೋಟ್ಯಧೀಶರು. ರಾಜಕಾರಣ ಮತ್ತು ಧರ್ಮ ಒಟ್ಟಾದರೆ ಸಂವಿಧಾನಕ್ಕೆ ಗಂಡಾಂತರ ಸಾಧ್ಯತೆ ಇದೆ. ವೈದಿಕತೆ ಮುನ್ನೆಲೆಗೆ ಬರುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಸಂವಿಧಾನವನ್ನು ಅಪ್ಪಿಕೊಂಡು ಅದರಂತೆ ಜೀವಿಸಬೇಕು. ಸಂವಿಧಾನದ ಆಶಯ ಜಾರಿಗೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಒತ್ತಾಯಿಸಬೇಕು. ವೈಯುಕ್ತಿಕ ನಂಬಿಕೆ ಹೇರುವುದರ ವಿರುದ್ಧ ಪ್ರತಿಭಟಿಬೇಕು ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರು ‘ಟೆಂಪಲ್‌ ರನ್‌’ನಲ್ಲಿ ತೊಡಗಿದ್ದಾರೆ. ನಮ್ಮ ತೆರಿಗೆ ಹಣ ಅದಕ್ಕೆ ವೆಚ್ಚ ಮಾಡುವುದನ್ನು ಪ್ರಶ್ನಿಸಬೇಕು ಎಂದರು.

ಚಿಂತಕ ಷಾರಿಯರ್‌ ಖಾನ್‌ ಮಾತನಾಡಿ, ‘ಧರ್ಮ ಆಚರಣೆ ವೈಯುಕ್ತಿಕವಾದುದು. ಭಾರತದಲ್ಲಿ ಹಿಂದೂಗಳು ಮುಸ್ಲಿಮರನ್ನು ಕಾಪಾಡಿದ್ದಾರೆ. ಎಲ್ಲರೂ ಸೌಹಾರ್ದದಿಂದ ಬಾಳಬೇಕು’ ಎಂದರು.

‘ಬಾಬಾಬುಡನ್‌ಗಿರಿ ದರ್ಗಾ ವಿಚಾರವನ್ನು ಸಂವಿಧಾನ, ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ತ್ವರಿತವಾಗಿ ಪರಿಹರಿಸಿಕೊಳ್ಳಲು ಗಮನಹರಿಸಬೇಕು’ ಎಂದರು.

ಮುಸ್ಲಿಮರಲ್ಲಿ ನಾಯಕತ್ವ ಸಮಸ್ಯೆ ಇದೆ. ಯುವಪೀಳಿಗೆಯವರು ಮುಂದಾಳತ್ವ ವಹಿಸಿ ಪ್ರತಿನಿಧಿಸಬೇಕು. ಅಭ್ಯುದಯಕ್ಕೆ ಶ್ರಮಿಸಬೇಕು ಎಂದರು.

ರೈತ ಮುಖಂಡ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಿದ್ಧರಾಮಶಿವಯೋಗಿ ಸ್ವಾಮೀಜಿ, ಮುಖಂಡರಾದ ಗೌಸ್‌ ಮೊಹಿಯುದ್ದೀನ್‌, ಕೃಷ್ಣಮೂರ್ತಿ, ವಸಂತಕುಮಾರ್‌, ಟಿ.ಎಲ್‌.ಗಣೇಶ್‌, ಕೆ.ಪಿ.ರಾಜರತ್ನಂ, ಪುಟ್ಟಸ್ವಾಮಿ, ಉಮೇಶ್‌ಕುಮಾರ್‌, ಗೌಸ್‌ಮುನೀರ್‌, ಯಲಗುಡಿಗೆ ಹೊನ್ನಪ್ಪ, ಸುರೇಶ್‌, ರಾಜಶಂಕರ್‌, ರಮೇಶ್‌, ಇದ್ದರು.

‘ಗಡಿಯಲ್ಲಿನ ಸೈನಿಕರನ್ನು ಗೌರವಿಸಿ’

‘ಗುಡಿಯಲ್ಲಿನ ದೇವರಿಗಿಂತ ಗಡಿಯಲ್ಲಿನ ದೇವರನ್ನು (ಸೈನಿಕರನ್ನು) ಗೌರವಿಸುವುದು’ ಮುಖ್ಯ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಮ್ಮನ್ನು ಕಾಯುವವರು ಗಡಿಯಲ್ಲಿನ ಸೈನಿಕರು. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

‘ಮಳೆಗಾಗಿ ಜಪ; ಸರ್ಕಾರದ ಅಜ್ಞಾನ’

ಮಳೆಗಾಗಿ ಪ್ರಾರ್ಥಿಸಿ ದೇಗುಲ ಹೋಮ, ಪರ್ಜನ್ಯ ಜಪ, ವಿಶೇಷ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈಚೆಗೆ ಆದೇಶ ಮಾಡಿದ್ದರು. ಪೂಜೆ ಮಾಡುವುದರಿಂದ ಮಳೆ ಬರುತ್ತದೆಯೇ ಎಂದು ಸ್ವಾಮೀಜಿ ಪ್ರಶ್ನಿಸಿದರು.

‘ಆದೇಶವು ಸರ್ಕಾರದ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಹೋಮ, ಹವನ ಮಾಡಿ, ಮಂತ್ರ ಮಾಡುವುದರಿಂದ ಮಳೆ ಸುರಿಸಲು, ಬೆಂಕಿ ಆರಿಸಲು ಆಗಲ್ಲ’ ಎಂದರು.

‘ಸಂಸತ್ತಿನಲ್ಲಿ ಭಾರತ್‌ ಮಾತಾ ಕೀ ಜೈ ಹೇಳುತ್ತಾರೆ. ಗುಂಡ್ಲುಪೇಟೆಯಲ್ಲಿ ದಲಿತ ವ್ಯಕ್ತಿಯ ಬಟ್ಟೆ ಬಿಚ್ಚಿ ಥಳಿಸುತ್ತಾರೆ. ಭಾರತ ಎಂದರೆ ಬಟ್ಟೆಬಿಚ್ಚಿಸುವ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.

‘ಕೇಂದ್ರದಲ್ಲಿ ಒಂದೇ ಸಮುದಾಯದ 21 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಸಾಮಾಜಿಕ ನ್ಯಾಯವೇ. ಪ್ರತಿಯೊಬ್ಬ ವಿರೋಧ ಪಕ್ಷದ ಪ್ರತಿಯೊಬ್ಬ ಸದಸ್ಯರ ಮಾತನ್ನು ಪರಿಗಣಿಸುವುದಾಗಿ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ಭಾರತೀಯನ ಮಾತನ್ನು ಪರಿಗಣಿಸಬೇಕು ಎಂಬುದು ಸಂವಿಧಾನ ಆಶಯ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT