ಚಿಕ್ಕಮಗಳೂರು: ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದು ರಾಜೀನಾಮೆ ವಾಪಸ್ ಪಡೆದಿರುವ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡನೆ ಅಸ್ತ್ರವನ್ನು ಬಿಜೆಪಿ ಕೊನೆಗೂ ಪ್ರಯೋಗ ಮಾಡಿದೆ. ಬಿಜೆಪಿಯ 17 ಸದಸ್ಯರು ಸೇರಿ 21 ಸದಸ್ಯರು ಸಹಿ ಹಾಕಿರುವ ಪತ್ರವನ್ನು ಆಯುಕ್ತರಿಗೆ ಸಲ್ಲಿಸಿದ್ದಾರೆ.
ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯಿಂದ 18 ಸದಸ್ಯರು ಚುನಾಯಿತರಾಗಿದ್ದರು. ಕಾಂಗ್ರೆಸ್‌ನ 12, ಜೆಡಿಎಸ್‌ನ ಇಬ್ಬರು, ಪಕ್ಷೇತರ ಮೂವರು ಸದಸ್ಯರಿದ್ದಾರೆ.
ನಗರಸಭೆ ಉಪಾಧ್ಯಕ್ಷ ಚನ್ನಕೇಶವ ಅಧ್ಯಕ್ಷತೆಯಲ್ಲಿ 17 ಸದಸ್ಯರು ಸಭೆ ನಡೆಸಿ ಅವಿಶ್ವಾಸ ಮಂಡನೆಯ ನಿರ್ಧಾರ ಕೈಗೊಂಡರು. ಜೆಡಿಎಸ್‌ನ ಇಬ್ಬರು, ಪಕ್ಷೇತರ ಇಬ್ಬರು ಸದಸ್ಯರು ಸಹಿ ಹಾಕಿದ್ದಾರೆ ಎಂದು ಬಿಜೆಪಿ ಸದಸ್ಯರು ತಿಳಿಸಿದರು. ಚನ್ನಕೇಶವ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಆಯುಕ್ತರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರು.
‘8 ದಿನಗಳಿಂದ ನಗರಸಭೆಗೆ ಅಧ್ಯಕ್ಷರು ಬಂದಿಲ್ಲ. ಅಭಿವೃದ್ಧಿ ಕಾರ್ಯಗಳು ನಿಂತಿವೆ. ಜನರಿಗೂ ಇದರಿಂದ ತೊಂದರೆ ಆಗಿದೆ. ಆದ್ದರಿಂದ ತುರ್ತು ಸಭೆ ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ್ದೇವೆ’ ಎಂದರು.
‘ಅಧ್ಯಕ್ಷರ ದುರಾಸೆಯಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಪಕ್ಷದ ಗೌರವವನ್ನು ವರಸಿದ್ಧಿ ವೇಣುಗೋಪಾಲ್ ಹಾಳು ಮಾಡಿದ್ದಾರೆ. ಕೂಡಲೇ ಅವಿಶ್ವಾಸ ಸಾಬೀತುಪಡಿಸಲು ಸಭೆ ಕರೆಯಬೇಕು ಎಂದು ಆಯುಕ್ತರನ್ನು ಕೋರಲಾಗಿದೆ’ ಎಂದು ಹೇಳಿದರು.
ಬಿಜೆಪಿ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ‘ಕಳೆದ ಗುರುವಾರ ನಾಪತ್ತೆಯಾಗಿರುವ ಅಧ್ಯಕ್ಷರು ಇಂದಿಗೂ ಪತ್ತೆಯಾಗಿಲ್ಲ. ಆದ್ದರಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.