ಚಿಕ್ಕಮಗಳೂರು ಜಿಲ್ಲೆಯಲ್ಲಿ 9.26 ಲಕ್ಷ ಮತದಾರರು, 1222 ಮತಗಟ್ಟೆ

7
ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆ ಪುನರ್‌ವಿಂಗಡಣೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ 9.26 ಲಕ್ಷ ಮತದಾರರು, 1222 ಮತಗಟ್ಟೆ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತಗಟ್ಟೆಗಳ ಪುನರ್‌ ವಿಂಗಡಣೆಯಂತೆ 9.26 ಲಕ್ಷ ಮತದಾರರು ಮತ್ತು 1,222 ಮತಗಟ್ಟೆಗಳು ಇವೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಬುಧವಾರ ತಿಳಿಸಿದರು.

ಪಟ್ಟಿಯನ್ನು ಇದೇ 16ರಂದು ಪ್ರಕಟಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಪಟ್ಟಿಯನ್ನು ಅಳವಡಿಸಿಕೊಳ್ಳಲಾಗುವುದು. 2018ರ ವಿಧಾನಸಭೆ ಚುನಾವಣೆ ಅಂಕಿಅಂಶಗಳಿಗೆ ಹೋಲಿಸಿದರೆ ಮತಗಟ್ಟೆಗಳು 52 ಹೆಚ್ಚಾಗಿವೆ. ಮತದಾರರ ಸಂಖ್ಯೆ 11,164 ಕಡಿಮೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಐದೂ ವಿಧಾನ ಸಭಾ ಕ್ಷೇತ್ರಗಳಿಂದ 1170 ಮತಗಟ್ಟೆಗಳು ಇದ್ದವು. ಈಗ ಹೊಸದಾಗಿ 52 ಮತಗಟ್ಟೆ ಸೃಜಿಸಲಾಗಿದ್ದು, ಒಟ್ಟು 1,222 ಮತಗಟ್ಟೆಗಳಾಗಿವೆ. ಚಿಕ್ಕಮಗಳೂರು ತಾಲ್ಲೂಕಿನ ಮುತ್ತೋಡಿ ಮತಗಟ್ಟೆಗೆ ಇಬ್ಬರು ಮತದಾರರ ಇದ್ದಿದ್ದರಿಂದ ಅದನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನಸಭೆ ಚುನಾವಣೆಗೆ 2018ರ ಏಪ್ರಿಲ್‌ 30ಕ್ಕೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿ ಪ್ರಕಾರ ಐದೂ ವಿಧಾನಸಭಾ ಕ್ಷೇತ್ರಗಳಿಂದ ಮತದಾರರು 9,37,199 ಇದ್ದರು. ‍ಪರಿಷ್ಕರಣೆ ಮಾಡಿ ಸಿದ್ಧಪಡಿಸಿದ ಪಟ್ಟಿಯಂತೆ 9,26035 ಮತದಾರರು ಇದ್ದಾರೆ. ಈ ಪೈಕಿ 4,62,020 ಪುರುಷ , 4,63,973 ಮಹಿಳೆ ಹಾಗೂ 42 ತೃತೀಯ ಲಿಂಗಿ ಮತದಾರರು ಇದ್ದಾರೆ. 18ರಿಂದ 19 ವರ್ಷ ವಯಸ್ಸಿನ ಮತದಾರರು 10,833 ಇದ್ದಾರೆ ಎಂದು ತಿಳಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿದ ನಂತರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯಿತು. 2,916 ಪುರುಷ, 3,699 ಮಹಿಳೆ ಒಟ್ಟು 6585 ಮತದಾರರು ಸೇರ್ಪಡೆಯಾಗಿದ್ದಾರೆ. 5,208 ಪುರುಷ ಹಾಗೂ 5,617 ಮಹಿಳಾ ಮತದಾರರನ್ನು ಕೈಬಿಡಲಾಗಿದೆ ಎಂದು ವಿವರ ನೀಡಿದರು.

ಕ್ಷೇತ್ರವಾರು ಚಿಕ್ಕಮಗಳೂರು–19, ಕಡೂರು–14, ಮೂಡಿಗೆರೆ– 05 ಶೃಂಗೇರಿ ಮತ್ತು ತರೀಕೆರೆ ತಲಾ 7 ಮತಗಟ್ಟೆಗಳನ್ನು ಹೊಸದಾಗಿ ಸೃಜಿಸಲಾಗಿದೆ. 18ರಿಂದ 19 ವರ್ಷ ವಯಸ್ಸಿನ ಮತದಾರರು ಕ್ಷೇತ್ರವಾರು ಶೃಂಗೇರಿ 2300, ಮೂಡಿಗೆರೆ– 1640, ಚಿಕ್ಕಮಗಳೂರು– 2474, ತರೀಕೆರೆ– 1921 ಹಾಗೂ 2498 ಇದ್ದಾರೆ ಎಂದರು.

ಮತದಾರರ ಪಟ್ಟಿಗೆ ಸೇರಿಸಲು, ಕೈಬಿಡಲು ಅರ್ಜಿ ಸಲ್ಲಿಸುವುದು ನಿರಂತರ ಪ್ರಕ್ರಿಯೆ. ಕೆಲ ವಾರ್ಡ್‌ಗಳ ಮತದಾರರ ಪಟ್ಟಿಯಲ್ಲಿ ಗೊಂದಲಗಳಿವೆ ಎಂದು ಕೆಲವರು ಆಕ್ಷೇಪ ಸಲ್ಲಿಸಿದ್ದರು. ಗೊಂದಲಗಳನ್ನು ಪರಿಹರಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಮಳಲೂರು ಏತ ನೀರಾವರಿ ಯೋಜನೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ದರ ನಿಗದಿಪಡಿಸಲಾಗಿದೆ. ಅದಕ್ಕೆ ಐದಾರು ರೈತರು ಒಪ್ಪಿಲ್ಲ. ಮಾತುಕತೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದು ಶ್ರೀರಂಗಯ್ಯ ಉತ್ತರಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಹಣ ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆಯಿಂದ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಲಾಗಿದೆ. ಹಣ ಬಿಡುಗಡೆಯಾಗಿಲ್ಲ ಎಂದರು. ಕಳೆದ ವರ್ಷ ಗ್ರಾಮಗಳಿಗೆ ನೀರು ಪೂರೈಸಿರುವ ಟ್ಯಾಂಕರ್‌ ಬಾಡಿಗೆ ಬಾಕಿ ಪಾವತಿಗೆ ಕೆಲವಾರು ತೊಡಕುಗಳು ಇವೆ. ಯಾವ ಅನುದಾನದಲ್ಲಿ ಪಾವತಿಸಬೇಕು ಎಂಬ ಬಗ್ಗೆ ಸರ್ಕಾರದಿಂದ ಸಲಹೆ ಪಡೆಯಲಾಗುವುದು. ನಂತರ ಪಾವತಿ ಪಾವತಿ ಮಾಡಲಾಗುವುದು ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !