ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ | ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಯ ಚರ್ಚೆ

ಜಿಲ್ಲೆಯ ಜನಪ್ರತಿನಿಧಿಗಳು ಭಾಗಿ
Last Updated 31 ಆಗಸ್ಟ್ 2019, 11:14 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ವಸತಿ ಸೌಕರ್ಯ ಕಲ್ಪಿಸುವುದು. ಗೋಂದಿಯಿಂದ ಬಯಲುಸೀಮೆ ಭಾಗಕ್ಕೆ ನೀರು ಹರಿಸುವುದು, ಜಿಲ್ಲಾಸ್ಪತ್ರೆ ಉನ್ನತೀಕರಣ, ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ನಿಟ್ಟಿನಲ್ಲಿ ಗಮನಹರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ. ಮಹಾಮಳೆಗೆ ಜಿಲ್ಲೆಯ ಮಲೆನಾಡು ಭೂಕುಸಿತದಿಂದ ಉಂಟಾಗಿರುವ ನಷ್ಟ, ಬೆಳೆ ಹಾನಿ ವಿವರಗಳನ್ನು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌ ಸಭೆಗೆ ತಿಳಿಸಿದ್ದಾರೆ.

ಮಹಾಮಳೆಯಿಂದಾಗಿ ಮಲೆನಾಡು ಭಾಗದಲ್ಲಿ 9 ಗ್ರಾಮಗಳಲ್ಲಿ ಅತೀವ ಹಾನಿಯಾಗಿದೆ. ಈ ಗ್ರಾಮಗಳವರಿಗೆ ಪರ್ಯಾಯ ವ್ಯವಸ್ಥೆಯನ್ನೇ ಕಲ್ಪಿಸುವ ಅಗತ್ಯ ಇದೆ ಎಂದು ಸಚಿವ ಸಿ.ಟಿ.ರವಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸ್ಥಳ ಗುರುತಿಸಿ ನಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು. ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಉನ್ನತ್ತೀಕರಣ, ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಇದಕ್ಕೆ ₹ 50 ಕೋಟಿ ಘೋಷಿಸಿದ್ದ ಬಗ್ಗೆ ಚರ್ಚಿಸಲಾಗಿದೆ.

ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳ ಬಯಲುಸೀಮೆ ಭಾಗಕ್ಕೆ ಗೊಂದಿದಿಯಿಂದ ನೀರು ಹರಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಿ.ಟಿ.ರವಿ ಪ್ರಸ್ತಾಪಿಸಿದ್ದಾರೆ.

ಕರಗಡ ಹಾಗೂ ಮಳಲೂರು ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಮಗಿಸಬೇಕು ಎಂದು ಸಚಿವ ರವಿ, ಶಾಸಕ ಎಂ.ಪಿ.ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾರೆ.

ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ, ಮುಂದಿನ ಪ್ರಕ್ರಿಯೆಗಳೆಡೆಗೆ ಗಮನಹರಿಸಬೇಕು ಎಂದೂ ರವಿ ಕೋರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಏರ್‌ ಸ್ಟ್ರಿಪ್‌ ನಿರ್ಮಾಣ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

4(1)ಎ ಪರಿಭಾವಿತ ಅರಣ್ಯದ ವಿಚಾರ ಚರ್ಚೆಗೆ ಒಳಗಾಗಿದೆ. ಕೂಲಂಕಷ ಚರ್ಚೆ ನಡೆಸದೆ ಪರಿಭಾವಿತ ಅರಣ್ಯ ಎಂದು ಘೋಷಿಸಲಾಗಿದೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಸಮಸ್ಯೆಯನ್ನು ನಿವಾರಿಸಲು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಬೇಕು ಎಂಬ ಸಲಹೆಯೂ ವ್ಯಕ್ತವಾಯಿತು.

ಅತಿವೃಷ್ಟಿ ಹಾನಿ ಪರಿಹಾರ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಟಿ.ಡಿ.ರಾಜೇಗೌಡ, ಡಿ.ಎಸ್.ಸುರೇಶ್, ಬೆಳ್ಳಿಪ್ರಕಾಶ್, ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆ ಸುಜಾತಾ ಕೃಷ್ಣಪ್ಪ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT