ಬೀಡಾಡಿ ಹಂದಿಗಳ ಉಪಟಳ

7
ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು

ಬೀಡಾಡಿ ಹಂದಿಗಳ ಉಪಟಳ

Published:
Updated:
Deccan Herald

ಚಿಕ್ಕಮಗಳೂರು: ನಗರದಲ್ಲಿ ಬೀಡಾಡಿ ಹಂದಿಗಳ ಉಪಟಳ ಹೆಚ್ಚಾಗಿದ್ದು, ಕೆಲ ಬಡಾವಣೆಗಳ ನಿವಾಸಿಗಳು ರೋಸಿ ಹೋಗಿದ್ದಾರೆ.

ನಗರದ ಅರವಿಂದನಗರ, ಬಸವನಹಳ್ಳಿ, ಶಂಕರಪುರ, ರಾಮನಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ಅಯ್ಯಪ್ಪ ನಗರ, ಕೋಟೆ, ಗಾಂಧಿ, ಟಿಪ್ಪು ನಗರ, ಲಕ್ಷ್ಮಿಶ ನಗರಗಳಲ್ಲಿ ಬೀಡಾಡಿ ಹಂದಿಗಳ ಕಾಟ ಇದೆ. ಕೆಂಪನಹಳ್ಳಿ, ದಂಟರಮಕ್ಕಿ ಕೆರೆ ಸುತ್ತ, ಕುಂಬಾರ ಬೀದಿ, ಗೌರಿ ಕಾಲುವೆಯ ಕೊಳಚೆ ಪ್ರದೇಶಗಳಲ್ಲಿ ಈ ಹಂದಿಗಳು ಠಿಕಾಣಿ ಹೂಡಿರುತ್ತವೆ.

ಕೆಲ ಸಮುದಾಯಗಳು ಜೀವನೋಪಾಯಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಂದಿ ಸಾಕಾಣೆ ನಡೆಸುತ್ತಿದ್ದಾರೆ. ಅದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ನಿವಾಸಿಗಳಿಗೆ ಎದುರಾಗಿದೆ. ಕೆಲವೊಮ್ಮೆ ಹಂದಿಗಳು ದಿಢೀರನೆ ರಸ್ತೆಗೆ ನುಗ್ಗುತ್ತವೆ. ವಾಹನ ಸವಾರರು ಕಕ್ಕಾಬಿಕ್ಕಿಯಾಗಿ ಅಪಘಾತಕ್ಕೀಡಾಗಿರುವ ನಿದರ್ಶನಗಳು ಇವೆ.

ನಗರದ ಉಪ್ಪಳ್ಳಿ, ದೀಪಾ ನರ್ಸಿಂಗ್ ಹೋಂ ಎದುರಿನ ರಸ್ತೆ ಬದಿಯಲ್ಲಿನ ಜಮೀನಿಗೂ ಹಂದಿಗಳು ಲಗ್ಗೆ ಇಡುತ್ತವೆ. ಭತ್ತ, ಜೋಳ, ತರಕಾರಿ ಬೆಳೆಗಳನ್ನು ಹಾಳು ಮಾಡುತ್ತವೆ. ಹಂದಿಗಳ ಹಾವಳಿಗೆ ರೈತರೂ ಬೇಸತ್ತಿದ್ದಾರೆ.
‘ಹೊರಗಿನಿಂದ ಹಂದಿ ಮರಿಗಳನ್ನು ತಂದು ಇಲ್ಲಿ ಬಿಡುತ್ತಾರೆ. ಅದು ದಷ್ಟಪುಷ್ಟವಾದಾಗ ಹಿಡಿದುಕೊಂಡು ಹೋಗುತ್ತಾರೆ. ಹಂದಿಗಳು ಮರಿ ಹಾಕಿದಾಗ ಮಾಲೀಕರು ವ್ಯಾನ್ ಮತ್ತು ಆಟೋಗಳಲ್ಲಿ ಮುಸುರೆ ತಂದು ಅವುಗಳ ಬಳಿಗೆ ಸುರಿದು ಹೋಗುತ್ತಾರೆ. ಹಂದಿ ಸಾಕಾಣೆ ಮಾಡುವವರು ಜನಸಮಾನ್ಯರಿಗೆ ತೊಂದರೆಯಾಗದಂತೆ ಸಾಕಾಣಿಕೆ ಮಾಡಬೇಕು. ಈ ಬಗ್ಗೆ ನಗರಸಭೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು’ ಎಂದು ಕುಂಬಾರ ಬೀದಿ ನಿವಾಸಿ ಕುಮಾರ್ ಆಗ್ರಹಿಸಿದರು.
ಹಂದಿಗಳು ಹಿಂಡು ಹಿಂಡಾಗಿ ಕೊಚ್ಚೆಯಲ್ಲಿ ಬಿದ್ದು ಹೊರಳಾಡುತ್ತವೆ, ಕಿರುಚಾಡುತ್ತವೆ.

ನಂತರ ಮನೆ ಗೋಡೆಗಳಿಗೆ ಬಂದು ಮೈ ಉಜ್ಜಿಕೊಳ್ಳುತ್ತವೆ. ಮನೆಯ ಕೈ ತೋಟದಲ್ಲಿನ ಗಿಡಗಳ ಬುಡವನ್ನು ದೂಕಿ, ಹಾಳು ಮಾಡುತ್ತವೆ. ಮರಿಗಳಿಗೆ ತೊಂದರೆ ಕೊಡುತ್ತಾರೆ ಎಂದು ಬಾಣಂತಿ ಹಂದಿಗಳು ಜನರನ್ನು ಅಟ್ಟಾಡಿಸುತ್ತವೆ ಎಂದು ಗೌರಿ ಕಾಲುವೆ ನಿವಾಸಿ ಶಿವಮ್ಮ ದೂರಿದರು.

‘ದೀಪಾ ನರ್ಸಿಂಗ್ ಹೋಂ ರಸ್ತೆ ಬಳಿಯ ಜಮೀನಿನಲ್ಲಿ ಕಡ್ಲೆಗಿಡ ಬೆಳೆಯಲಾಗಿತ್ತು. ಅದರಲ್ಲಿ ಅರ್ಧ ಎಕರೆ ಕಡ್ಲೆ ಗಿಡವನ್ನು ಹಂದಿಗಳು ತಿಂದು ಪೂರೈಸಿದ್ದವು. ಹಿಂದಿನ ವರ್ಷ ಬೀಟ್‌ರೋಟ್ ಬೆಳೆದಿದ್ದೆ, ಆಗಲೂ ಹಂದಿಗಳು ನಷ್ಟ ಉಂಟು ಮಾಡಿದ್ದವು’ ಎಂದು ದಂಟರಮಕ್ಕಿ ನಿವಾಸಿ ಡಿ.ಎಚ್.ರಾಮು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !