ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಪರಿಚಯಿಸುವ ಬೇಸಿಗೆ ಶಿಬಿರ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾರ್ಷಿಕ ಪರೀಕ್ಷೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಬಹುತೇಕ ಮನೆಗಳಲ್ಲಿ ಬೇಸಿಗೆ ಶಿಬಿರದ್ದೇ ಚರ್ಚೆ. ಪೋಷಕರು ತಮ್ಮ ಮಕ್ಕಳನ್ನು ಯಾವ ಬೇಸಿಗೆಯ ಶಿಬಿರಗಳಿಗೆ ಸೇರಿಸಬೇಕು ಎಂದು ಅಂತರ್ಜಾಲ, ದಿನಪತ್ರಿಕೆಗಳ ಜಾಹೀರಾತು ಪುಟಗಳನ್ನು ಹುಡುಕುತ್ತಿದ್ದಾರೆ.

ಸಾಹಿತ್ಯ, ಸಂಗೀತ, ಕ್ರೀಡೆ, ತಂತ್ರಜ್ಞಾನ, ರಂಗಭೂಮಿ... ಹೀಗೆ ಎಲ್ಲ ಬಗೆಯ ಜ್ಞಾನದಾಹವನ್ನೂ ನೀಗುತ್ತಾ, ಮಕ್ಕಳಲ್ಲಿನ ಸೃಜನಶೀಲತೆಗೆ ವೇದಿಕೆಯಾಗಬಲ್ಲ ಶಿಬಿರಗಳು ನಗರದಲ್ಲಿವೆ.

ಮಕ್ಕಳಿಗೆ ಪ್ರಕೃತಿ ಪಾಠ ಬೋಧಿಸುತ್ತಾ, ಜೀವವೈವಿಧ್ಯವನ್ನು ಕಲಿಸುವ ಸಲುವಾಗಿ ‘ಚಿಗುರು ಎಕೋಸ್ಪೇಸ್‌’ ನಿಸರ್ಗದ ಮಡಿಲಲ್ಲಿ ಶಿಬಿರಗಳನ್ನು ಆಯೋಜಿಸಲಿದೆ. ಸಾಫ್ಟ್‌ವೇರ್ ಎಂಜಿನಿಯರ್‌ ಜಿ.ಶ್ರೀವತ್ಸ ಸಿಂಗದಾಸನಹಳ್ಳಿಯಲ್ಲಿನ ತಮ್ಮ 10 ಎಕರೆ ತೋಟವನ್ನು ಜೀವವೈವಿಧ್ಯತೆಯ ತಾಣವಾಗಿ ಪರಿವರ್ತಿಸಿದ್ದಾರೆ.

ಸಾವಯವ ಕೃಷಿ, ಜೇನು, ಕೋಳಿ, ಹಸು ಸಾಕಾಣಿಕೆ, ವಿವಿಧ ಬೆಳೆಗಳು..ಹೀಗೆ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿಯೇ ಶಿಬಿರ ನಡೆಯಲಿದೆ.

ಮಹಾನಗರಿಯ ಮಕ್ಕಳಿಗೆ ನಿಸರ್ಗದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಕೆಲ ವರ್ಷಗಳಿಂದ ಬೇಸಿಗೆ ಶಿಬಿರಗಳನ್ನು ನಡೆಸುತ್ತಿದ್ದಾರೆ. ವಿವಿಧ ವಯಸ್ಸಿನ ಮಕ್ಕಳನ್ನು ಬೇರೆ ಬೇರೆ ಸಮೂಹಗಳಾಗಿ ವಿಂಗಡಿಸಿ ಕಾರ್ಯಾಗಾರ ನಡೆಸಲಾಗುತ್ತಿದೆ.

ಹೆಜ್ಜೆಗುರುತು: 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ರೂಪಿಸಲಾದ ಕಾರ್ಯಕ್ರಮ ಇದು. ಮಕ್ಕಳು ತಮ್ಮ ತಂದೆ ತಾಯಿಗಳೊಂದಿಗೆ ಇಲ್ಲಿಗೆ ಬಂದು ಒಂದು ದಿನ ಇಲ್ಲಿಯೇ ಕಳೆಯಬಹುದು.

ಮಕ್ಕಳಿಗೆ ನಿಸರ್ಗದ ಕೌತುಕಗಳನ್ನು ತಿಳಿಸಿದರೆ, ಅವರ ತಂದೆ ತಾಯಿಗಳಿಗೆ ಸುಸ್ಥಿರ ಬದುಕಿನ ಅಗತ್ಯ ಮತ್ತು ಅನಿವಾರ್ಯತೆಯ ಅರಿವು ಮೂಡಿಸಲಾಗುತ್ತದೆ.

ಅನ್ವೇಷಣೆ: 9 ರಿಂದ 15 ವರ್ಷದ ಮಕ್ಕಳಿಗಾಗಿ ರೂಪಿಸಲಾದ 4 ದಿನಗಳ ಕಾರ್ಯಾಗಾರವಿದು. ಜೀವವೈವಿಧ್ಯದ ಪರಿಚಯ ಮಾಡಿಸುವುದೇ ಇದರ ಮುಖ್ಯ ಉದ್ದೇಶ ಎನ್ನುವುದು ಶ್ರೀವತ್ಸ ಅವರ ಅಭಿಪ್ರಾಯ. 250 ಜಾತಿಯ ಮರಗಳು ಇಲ್ಲಿವೆ. ಅದರಲ್ಲಿ ಅಪರೂಪದ ಹಾಗೂ ಚೆನ್ನಪಟ್ಟಣದ ಗೊಂಬೆಗಳ ತಯಾರಿಕೆಗೆ ಬಳಸಲಾಗುವ ಆಲಿ ಮರಗಳೂ ಸೇರಿವೆ. ಈ ಬಗೆಯ ಮರಗಳನ್ನು ಗುರುತಿಸಲು ಕಲಿಸುವುದು ಶಿಬಿರದ ಪ್ರಮುಖ ಆದ್ಯತೆ.

‘ವಿವಿಧ ಚಟುವಟಿಕೆಗಳ ಮೂಲಕ ಜೀವ ಪರಿಸರ ಹೇಗೆ ಒಂದನ್ನೊಂದು ಅವಲಂಬಿಸಿದೆ. ಆಲಿ ಮರಗಳ ಅವಸಾನದಿಂದ ಜೀವನಾಧಾರಕ್ಕೆ ಗೊಂಬೆ ತಯಾರಿಕೆಯನ್ನೇ ನೆಚ್ಚಿದ್ದ ಸಮುದಾಯ ಹೇಗೆ ಸಂಕಷ್ಟಕ್ಕೆ ಸಿಲುಕಿದೆ ಎಂಬ ಸಂಗತಿಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ಕಲಿಸಲಾಗುತ್ತದೆ. ಮರಗಳಿಗಿರುವ ವೈದ್ಯಕೀಯ ಗುಣಗಳನ್ನು ತಿಳಿಸುವುದು ಅವುಗಳನ್ನು ಅವರ ನಿತ್ಯದ ಜೀವನಕ್ಕೆ ಬಳಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತದೆ‘ ಎನ್ನುತ್ತಾರೆ ಶ್ರೀವತ್ಸ.

ಕನಸಿನಾಗರ: ಕೃಷಿಯೂ ಲಾಭದಾಯಕ ಉದ್ಯೋಗ ಎನ್ನುವುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕೃಷಿಯಲ್ಲಿಯೂ ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನು ಮನವರಿಕೆ ಮಾಡಲಾಗುತ್ತದೆ.

‘ಸುಸ್ಥಿರ ಕೃಷಿಕೆ’ ಕಾರ್ಯಕ್ರಮದ ಮೂಲಕ ರಾಸಾಯನಿಕ ಬಳಸದೆ ಮನೆಯ ಅಕ್ಕಪಕ್ಕದಲ್ಲಿ ಸರಳವಾಗಿ ಮಾಡಬಹುದಾದ ಕೃಷಿ ಕುರಿತು ತಿಳಿಸಲಾಗುತ್ತದೆ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಜೀವಾಮೃತ ತಯಾರಿಸುವ ವಿಧಾನ, ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಪರಿಚಯಿಸಲಾಗುತ್ತದೆ.

ರಾತ್ರಿ ಸಮಯ ತೋಟ ಹಾಗೂ ಕಾಡಿನಲ್ಲಿ ಚಾರಣ ಹೋಗುವುದು ಸೇರಿದಂತೆ ಮನೋರಂಜನಾ ಚಟುವಟಿಕೆಗಳೂ ನಡೆಯಲಿವೆ.

ನಾಗೇಶ್‌ ಹೆಗಡೆ, ಹಿತ್ಲಮನಿ, ವಿ.ವಿ. ಬೆಳವಾಡಿ, ಎಚ್‌.ಎಸ್‌. ಪ್ರೇಮಾ ಮೊದಲಾದವರು ಶಿಬಿರದಲ್ಲಿ ಭಾಗವಹಿಸಿ ಪರಿಸರದ ಮಹತ್ವ ವಿವರಿಸಲಿದ್ದಾರೆ. ಊಟ ಮತ್ತು ವಸತಿ ಸೇರಿ ಒಂದು ಮಗುವಿಗೆ ₹ 4,000 ಶುಲ್ಕವಿದೆ.

ಮೊ– 98457 07043.

***
ಒತ್ತಡ ನೀಗುವ ಚಟುವಟಿಕೆಗಳು

ರಂಗಚಟುವಟಿಕೆಗಳ ಮೂಲಕ ಒತ್ತಡದ ಬದುಕನ್ನು ನಿಭಾಯಿಸುವ ಕಲೆಯನ್ನು ಕಲಿಸಿಕೊಡುವ ‘ಡ್ರಾಮಾ ಮಕ್ಕಳ ಬೇಸಿಗೆ ಶಿಬಿರ’ ಏಪ್ರಿಲ್‌ 15ರಿಂದ 30ರವರೆಗೆ ನಗರದಲ್ಲಿ ನಡೆಯಲಿದೆ. ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹಾಗೂ ತನ್ನಿಷ್ಟದ ಕ್ಷೇತ್ರದಲ್ಲಿ ಮುಂದುವರಿಯಲು ಮಗುವಿಗೆ ಪ್ರಾಯೋಗಿಕ ದಾರಿದೀಪ ಈ ಶಿಬಿರ ಎನ್ನುತ್ತಾರೆ ಸಂಯೋಜಕ ಸಾಗರ್‌ ಪಂಡಿತ್‌.

ಇಲ್ಲಿ ನಾಟಕ, ಚಿತ್ರಕಲೆ, ಬೊಂಬೆಯಾಟಗಳನ್ನು ಮಕ್ಕಳು ಕಲಿಯಬಹುದು. ಇದಲ್ಲದೇ ಹಸಿರು ಪರಿಸರ, ಪಕ್ಷಿವೀಕ್ಷಣೆ, ಮಕ್ಕಳ ಸಾಹಿತ್ಯ, ಸಂಪ್ರದಾಯಗಳ ಪರಿಚಯ ಇಂತಹ ಅನೇಕ ಚಟುವಟಿಕೆಗಳು ಇಲ್ಲಿರಲಿವೆ.

ಶಿಬಿರದಲ್ಲಿ ಝಿ ಕನ್ನಡ ವಾಹಿನಿಯ ಜನಪ್ರಿಯ ಡ್ರಾಮಾ ಜೂನಿಯರ್ಸ್‌ ಮತ್ತು ಕಾಮಿಡಿ ಕಿಲಾಡಿಗಳು ತರಬೇತುದಾರರಾಗಿದ್ದ ಗಣಪತಿ ಗೌಡ, ವಿಜಯ್‌ಕುಮಾರ್‌ ಶೆಟ್ಟಿ, ಪ್ರಭುರಾಜ್‌ ತರಬೇತಿ ನೀಡಲಿದ್ದಾರೆ. ರಂಗಾಭಿನಯ, ಮೂಕಾಭಿನಯ, ರಂಗಸಜ್ಜಿಕೆ, ವ್ಯಕ್ತಿತ್ವ ವಿಕಸನ, ಕತೆ ಹೇಳುವುದು, ಮುಖವರ್ಣಿಕೆ, ವಸ್ತ್ರಾಭರಣ, ಚಿತ್ರಕಲೆ, ಪ್ರಸಾಧನ, ರಂಗ ಆಟಗಳು, ರಂಗಗೀತೆಗಳು, ನಾಟಕ ತಾಲೀಮು, ರಂಗ ಪರಿಕರಗಳಂತಹ ಚಟುವಟಿಕೆಗಳು ಇರುತ್ತವೆ.

ಇದಲ್ಲದೇ ಸಿನಿಮಾ ಹಾಗೂ ನಾಟಕ ವೀಕ್ಷಣೆ ಮಾಡುವುದು ಹೇಗೆ? ಚಿತ್ರೀಕರಣ ಹೇಗೆ ನಡೆಯುತ್ತದೆ ಬಗ್ಗೆಯೂ ಮಕ್ಕಳು ಪ್ರತ್ಯಕ್ಷ ಅನುಭವ ಪಡೆಯಲಿದ್ದಾರೆ.

ಶಿಬಿರದ ಅಂತ್ಯದಲ್ಲಿ ಮಕ್ಕಳೇ ನಿರ್ದೇಶಿಸಿ, ಅಭಿನಯಿಸಿದ ನಾಟಕ ಪ್ರದರ್ಶನವಾಗಲಿದೆ. ಈ ಶಿಬಿರದಲ್ಲಿ ಬೇರೆ ಬೇರೆ ರಂಗಭೂಮಿ ನಟರು, ಡ್ರಾಮಾ ಜೂನಿಯರ್ಸ್‌ ಸೆಲೆಬ್ರಿಟಿಗಳಾದ ನಿಹಾಲ್‌, ಪುಟ್ಟರಾಜು, ರೇವತಿ, ಅಚಿಂತ್ಯ, ಅಮೋಘ, ಚಿತ್ರಾಲಿ ಮೊದಲಾದವರು ಭೇಟಿ ನೀಡಲಿರುವುದು ವಿಶೇಷ.

ಸ್ಥಳ– ಸ್ಫೂರ್ತಿ ಧಾಮ, ಆಂಜನಾನಗರ, ಮಾಗಡಿ ಮುಖ್ಯರಸ್ತೆ. 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಪ್ರವೇಶ. ಮೊ– 87622 11916. ಒಂದು ಮಗುವಿಗೆ ಶುಲ್ಕ– ₹10,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT