ಕಾಫಿ, ಅಡಿಕೆಗೆ ಹಾನಿ; ವಿವಿಧೆಡೆ ಸಂಪರ್ಕ ಕಡಿತ

7
ಮೂಡಿಗೆರೆ: ಮಳೆ ಹೋಯ್ತು; ಗಾಳಿ ಬಂತು

ಕಾಫಿ, ಅಡಿಕೆಗೆ ಹಾನಿ; ವಿವಿಧೆಡೆ ಸಂಪರ್ಕ ಕಡಿತ

Published:
Updated:
ಮೂಡಿಗೆರೆ ತಾಲ್ಲೂಕಿನ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಗುಂಡಿ ಬಳಿ ರಸ್ತೆ ಮೇಲೆ ಮರ ಬಿದ್ದು ಸಂಪರ್ಕ ಕಡಿತವಾಗಿದೆ.

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯೊಂದಿಗೆ ಬೀಸುತ್ತಿರುವ ಗಾಳಿಯಿಂದಾಗಿ ಹಲವೆಡೆ ಮರಗಳು ಧರೆಗೆ ಉರುಳಿ ರಸ್ತೆ ಸಂಪರ್ಕ ಕಡಿತವಾಗಿದೆ.

ಶನಿವಾರ ತಡರಾತ್ರಿಯಿಂದ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಗಾಳಿಯ ಪ್ರಮಾಣ ಹೆಚ್ಚಳವಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗುಂಡಿ ಗ್ರಾಮದ ಭೂತಪ್ಪನ ದೇವಾಲಯದ ಬಳಿ ರಸ್ತೆ ಮೇಲೆ ಮರಬಿದ್ದು ಆನೆಗಂಡಿ – ಕೂವೆ ಗ್ರಾಮದ ನಡುವೆ ಸಂಪರ್ಕ ಕಡಿತವಾಗಿತ್ತು. ಗ್ರಾಮಸ್ಥರೆಲ್ಲಾ ಸೇರಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.‌

ಗೆಂಡೆಹಳ್ಳಿ – ಮೂಡಿಗೆರೆ ರಸ್ತೆಯ ಬಸ್ಕಲ್‌ ಸಮೀಪ ರಸ್ತೆ ಬದಿಯ ಮರವೊಂದು ಧರೆಗುರುಳಿದ್ದರಿಂದ ಭಾನುವಾರ ಮುಂಜಾನೆ ಬೇಲೂರು – ಮೂಡಿಗೆರೆ ಸಂಪರ್ಕ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲ್ಲೂಕಿನ ಚಿಕ್ಕಳ್ಳ ರಸ್ತೆಯಲ್ಲಿ ಹಳ್ಳದಗಂಡಿ ಸಮೀಪ ಮರವೊಂದು ರಸ್ತೆಗೆ ಬಿದ್ದಿದ್ದರಿಂದ ಚಿಕ್ಕಳ್ಳ – ಮೂಡಿಗೆರೆ ರಸ್ತೆ ಸಂಪರ್ಕ ಕಡಿತವಾಗಿತ್ತು.

ರಾತ್ರಿಯಿಡೀ ರಭಸವಾಗಿ ಗಾಳಿ ಬೀಸಿದ್ದರಿಂದ, ಭೈರಾಪುರ, ಮೂಲರಹಳ್ಳಿ, ದೇವರುಂದ ಭಾಗಗಳಲ್ಲಿ ಅನೇಕ ಕಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ತಾಲ್ಲೂಕಿನ ಬಗ್ಗಸಗೋಡು ಗ್ರಾಮದ ಬಳಿ ಹೇಮಾವತಿ ನದಿಗೆ ನಿರ್ಮಿಸಿರುವ ಸೇತುವೆಗೆ ಹಾನಿಯಾಗಿದ್ದು, ಸೇತುವೆಯ ಒಂದು ಭಾಗ ಕಳಚಿ ಹೋಗುವ ಭೀತಿ ಉಂಟಾಗಿದೆ.

ಪಟ್ಟಣದ ಸುಂಡೇಕೆರೆ ನದಿಗೆ ನಿರ್ಮಿಸಿರುವ ಸೇತುವೆಯ ಬಳಿ ಭೂ ಕುಸಿತ ಮುಂದುವರಿದಿದ್ದು, ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ. ಗಾಳಿಯಿಂದಾಗಿ ತಾಲ್ಲೂಕಿನ ಅನೇಕ ಕಾಫಿ ತೋಟಗಳಲ್ಲಿ ಬೃಹತ್‌ ಮರಗಳು ಕಾಫಿ ಗಿಡಗಳ ಮೇಲೆ ಉರುಳಿದ್ದು, ಕಾಫಿ ಗಿಡಗಳಿಗೆ ಹಾನಿಯಾಗಿದೆ. ಫಲ್ಗುಣಿ, ಬಾಳೂರು, ಬಣಕಲ್‌, ಕುಂದೂರು, ಸಾರಗೋಡು ಭಾಗಗಳಲ್ಲಿ ಅಡಿಕೆ ತೋಟಗಳಲ್ಲಿ ಬೀಸಿದ ಗಾಳಿಗೆ ಅಡಿಕೆಗಿಡಗಳು ನೆಲಕಚ್ಚಿವೆ. ಬಗ್ಗಸಗೋಡು, ಬಣಕಲ್‌, ಕೊಟ್ಟಿಗೆಹಾರ ಭಾಗಗಳಲ್ಲಿ ಬಾಳೆಗಿಡಗಳು ನೆಲಕಚ್ಚಿದ್ದು, ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !