ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌: ಗುಡ್ಡಸಾಲಿನ ಸರ್ಪಸುತ್ತಿನ ಹಾದಿ...

7
13ರಿಂದ ಓಟಗಾರರ ಕಲರವ

ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌: ಗುಡ್ಡಸಾಲಿನ ಸರ್ಪಸುತ್ತಿನ ಹಾದಿ...

Published:
Updated:
Deccan Herald

ಚಿಕ್ಕಮಗಳೂರು: ಕಾಫಿಡೇ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ ಶನಿವಾರ ಆರಂಭವಾಗಲಿದ್ದು, ದೇಶ ವಿದೇಶಗಳ ಓಟಗಾರರು ಕಸರತ್ತು ಪ್ರದರ್ಶಿಸಲಿದ್ದಾರೆ.

ಮ್ಯಾರಥಾನ್‌ಗೆ ಕಾಫಿಕಣಿವೆಯ ಗುಡ್ಡಗಾಡಿನ ಸರ್ಪಸುತ್ತು ಹಾದಿ ಸಜ್ಜಾಗಿದೆ. ತರೀಕೆರೆ ತಾಲ್ಲೂಕಿನ ಲಾಲ್‌ಬಾಗ್‌ನಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ಮ್ಯಾರಥಾನ್‌ಗೆ ಚಾಲನೆ ನೀಡುವರು. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ದೇಶವಿದೇಶಗಳ 1,198 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 142 ಮಹಿಳೆಯರು ಇದ್ದಾರೆ. ಬ್ರಿಟನ್‌, ಅಮೆರಿಕ, ಪೊಲೆಂಡ್‌, ಫ್ರಾನ್ಸ್‌, ಮಾಲ್ಡೀವ್ಸ್‌, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಸಿಂಗಪುರ, ಕೊಲಂಬಿಯಾ, ಜಪಾನ್‌, ಮಲೇಷ್ಯಾದ 22 ಓಟಗಾರರು ನೋಂದಾಯಿಸಿಕೊಂಡಿದ್ದಾರೆ.

80 ಕಿ.ಮೀ ಮತ್ತು 110 ಕಿ.ಮೀ ಸ್ಪರ್ಧೆ ಬೆಳಿಗ್ಗೆ 6.30ಕ್ಕೆ ಹಾಗೂ 50 ಕಿ.ಮೀ ಸ್ಪರ್ಧೆ ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದೆ. 50 ಕಿ.ಮೀ ಕ್ರಮಿಸಲು ಗರಿಷ್ಠ 9 ಗಂಟೆ, 80 ಕಿ.ಮೀ ಕ್ರಮಿಸಲು 15 ಗಂಟೆ ಮತ್ತು 110 ಕಿ.ಮೀ ಕ್ರಮಿಸಲು ಗರಿಷ್ಠ 24 ಗಂಟೆ ಸಮಯ ಮಿತಿ ನಿಗದಿಪಡಿಸಲಾಗಿದೆ.

ಲಾಲ್‌ಬಾಗ್‌–ಸಂಪಿಗೆಹಟ್ಟಿ– ಧೂಪದಖಾನ್‌– ರಾಜಗಿರಿ ಮಾರ್ಗ ನಿಗದಿಪಡಿಸಲಾಗಿದೆ. ಕೆರೆ ದಂಡೆಗಳು, ಗುಡ್ಡಗಾಡು ಪ್ರದೇಶ, ಕಲ್ಲುಮಣ್ಣಿನ ದುರ್ಗಮ ತಗ್ಗುದಿಣ್ಣೆಗಳ ಸರ್ಪಸುತ್ತಿನ ಹಾದಿಯಲ್ಲಿ ಸ್ಪರ್ಧಿಗಳು ಓಡುವರು.

50 ಕಿ.ಮೀ ವಿಭಾಗದಲ್ಲಿ 751 ಮಂದಿ (110 ಮಹಿಳೆಯರು), 80 ಕಿ.ಮೀ ವಿಭಾಗದಲ್ಲಿ 182 ಮಂದಿ (17 ಮಹಿಳೆಯರು) ಹಾಗೂ 110 ಕಿ.ಮೀ ವಿಭಾಗದಲ್ಲಿ 265 ಮಂದಿ (15 ಮಹಿಳೆಯರು) ನೋಂದಾಯಿಸಿಕೊಂಡಿದ್ದಾರೆ. ರಕ್ಷಣಾ ಪಡೆ ಮತ್ತು ನೌಕಾ ಪಡೆಯಿಂದ 30 ಮಂದಿ (ತಲಾ 15 ಮಂದಿ) ಇದ್ದಾರೆ. ಕರ್ನಾಟಕದ 385, ತಮಿಳುನಾಡಿನ 315, ಮಹರಾಷ್ಟ್ರದ 89 ಮಂದಿ ಇದ್ದಾರೆ. ಈ ಬಾರಿ 15 ಕ್ಲಬ್‌ಗಳವರು ನೋಂದಾಯಿಸಿಕೊಂಡಿದ್ದಾರೆ. ಚೆನ್ನೈ, ಬೆಂಗಳೂರು ಕ್ಲಬ್‌ಗಳು ಇವೆ.

ಪಶ್ಚಿಮಘಟ್ಟದ ಕಾನನ, ಹಸಿರುಸಿರಿ, ಜೀವ ವೈವಿಧ್ಯ, ಹಳ್ಳಕೊಳ್ಳಗಳ ರಮಣೀಯ ಸೌಂದರ್ಯವನ್ನು ಜಗತ್ತಿನ ವಿವಿಧೆಡೆಗಳ ಸ್ಪರ್ಧಿಗಳು ಕಣ್ತುಂಬಿಕೊಳ್ಳಲಿದ್ದಾರೆ.ಮಾರ್ಗದ ಸುತ್ತಮುತ್ತಲಿನ ಊರುಗಳು ಜನರು, ಮ್ಯಾರಥಾನ್‌ ಆಸಕ್ತರು ಓಟಗಾರರ ಚಮತ್ಕಾರವನ್ನು ವೀಕ್ಷಿಸಲಿದ್ದಾರೆ.

ಸ್ಪರ್ಧಿಗಳಿಗೆ ಕಡೂರು, ಬೀರೂರು, ತರೀಕೆರೆ, ಚಿಕ್ಕಮಗಳೂರು ಇತರೆಡೆಗಳಲ್ಲಿ ಹೋಂಸ್ಟೆ, ರೆಸಾರ್ಟ್‌, ಹೋಟೆಲುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮ್ಯಾರಥಾನ್‌ ನಿಟ್ಟಿನಲ್ಲಿ 250 ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಮಾರ್ಗದಲ್ಲಿ ಆರು ಕಡೆ ವಿಶ್ರಾಂತಿ ತಾಣ ವ್ಯವಸ್ಥೆ ಇದೆ. ನಾಲ್ಕು ಅಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !