ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಒಡಲಿಗೆ ಪಲ್ಪರ್ ತ್ಯಾಜ್ಯ

ಕಾಫಿ ಎಸ್ಟೇಟ್‌ ವಿರುದ್ಧ ಆರೋಪ; ನೀರು ಸೇವನೆಯಿಂದ ಕೆಮ್ಮು, ಕಫ ಉಲ್ಬಣ
Last Updated 8 ಫೆಬ್ರುವರಿ 2023, 7:14 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಹೇಮಾವತಿ ನದಿಗೆ ಕಾಫಿ ಪಲ್ಪರ್ ನೀರನ್ನು ಹರಿ ಬಿಡುತ್ತಿದ್ದು, ಹಲವು ಗ್ರಾಮಗಳಲ್ಲಿ ಕೆಮ್ಮು, ಕಫದಂತಹ ರೋಗಗಳು ಉಲ್ಬಣಗೊಂಡಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಉಗಮವಾಗುವ ಹೇಮಾವತಿ ನದಿಯು, ತಾಲ್ಲೂಕಿನಲ್ಲಿ ಬಾಳೂರು, ಬಣಕಲ್, ಕಸಬಾ, ಗೋಣಿಬೀಡು ಹೋಬಳಿಗಳ ಮೂಲಕ ಸಕಲೇಶಪುರ ತಾಲ್ಲೂಕಿನತ್ತ ಹರಿಯುತ್ತದೆ. ಈ ನದಿಗೆ ತಾಲ್ಲೂಕಿನ ಗೋಣೀಬೀಡು ಹೋಬಳಿಯ ಚಕ್ಕುಡುಗೆ, ಹಿರಿಶಿಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಫಿ ಪಲ್ಪರ್ ತ್ಯಾಜ್ಯದ ನೀರನ್ನು ನೇರವಾಗಿ ಹರಿ ಬಿಡುತ್ತಿದ್ದು, ನದಿಯ ಅಕ್ಕಪಕ್ಕದಲ್ಲಿ ಕಾಫಿ ಪಲ್ಪರ್ ವಾಸನೆ ಮೂಗಿಗೆ ಬಡಿಯುತ್ತದೆ. ನದಿಯ ನೀರನ್ನು ಕುಡಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ದೂರು.

‘ಹಿರಿಶಿಗರ ಗ್ರಾಮದಲ್ಲಿ ಖಾಸಗಿ ಕಾಫಿ ಎಸ್ಟೇಟ್‌ ಮಾಲೀಕರು ಹೇಮಾವತಿ ನದಿಗೆ ಸೇರುವ ತೊರೆಗೆ ಕಾಫಿ ಪಲ್ಪರ್ ನೀರನ್ನು ಹರಿ ಬಿಟ್ಟಿದ್ದು, ದಿನದ 24 ಗಂಟೆಯೂ ಕಾಫಿ ಪಲ್ಪರ್ ತ್ಯಾಜ್ಯ ಹರಿಯುತ್ತದೆ. ಈ ತೊರೆಯಿಂದ ಅರ್ಧ ಕಿ.ಮೀ ದೂರದಲ್ಲಿ ಹೇಮಾವತಿ ನದಿಯು ಹರಿಯುತ್ತಿದ್ದು, ತೊರೆಯ ಮೂಲಕ ತ್ಯಾಜ್ಯವು ನೇರವಾಗಿ ಹೇಮಾವತಿ ನದಿಗೆ ಸೇರುತ್ತಿದೆ. ಹಗಲಿನಲ್ಲಿ ಅಲ್ಪ ಪ್ರಮಾಣದಲ್ಲಿ ತ್ಯಾಜ್ಯವನ್ನು ಹರಿಬಿಟ್ಟರೆ, ಇಡೀ ದಿನ ಸಂಗ್ರಹವಾಗುವ ತ್ಯಾಜ್ಯದ ನೀರನ್ನು ರಾತ್ರಿ ವೇಳೆಯಲ್ಲಿ ಹರಿಯ ಬಿಡಲಾಗುತ್ತದೆ. ಕಾಫಿ ಪಲ್ಪರ್ ತ್ಯಾಜ್ಯದಿಂದ ಹೇಮಾವತಿ ನದಿಯಲ್ಲಿ ಮೀನು, ಏಡಿ, ಕಪ್ಪೆಯಂತಹ ಜಲಚರಗಳು ಸಂಪೂರ್ಣವಾಗಿ ನಾಶವಾಗಿವೆ. ಅಳಿದುಳಿದ ಜಲಚರಗಳು ಕೂಡ ಸತ್ತು ತೇಲತೊಡಗಿವೆ. ಈ ನೀರನ್ನು ಕುಡಿಯುತ್ತಿರುವುದರಿಂದ ಕಫ, ಗಂಟಲು ನೋವು, ಕೆಮ್ಮಿನಂತಹ ರೋಗಗಳು ಉಲ್ಬಣವಾಗುತ್ತಿವೆ. ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಕೃಷ್ಣ ಒತ್ತಾಯಿಸಿದ್ದಾರೆ.

ನದಿ ಪಾತ್ರದ ಬಹುತೇಕ ಗ್ರಾಮಗಳಲ್ಲಿ ಕುಡಿಯಲು ಹೇಮಾವತಿ ನದಿ ನೀರನ್ನೇ ಬಳಸುತ್ತಾರೆ. ಅಲ್ಲದೇ ಈಗ ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವ ರಾಜ್ಯದ ನಾನಾ ಭಾಗಗಳ ಭಕ್ತರು ಇದೇ ನದಿ ನೀರನ್ನು ಅಡುಗೆ, ಕುಡಿಯಲು ಬಳಸುವುದರಿಂದ, ನದಿಯ ನೀರು ಕಲುಷಿತವಾಗದಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT