ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ಭೂಕಬಳಿಕೆ ಹಣೆಪಟ್ಟಿಗೆ ಮುಕ್ತಿ

ಕಾಫಿ ಬೆಳೆಗಾರರ ಬೃಹತ್‌ ಸಮಾವೇಶದಲ್ಲಿ ಸಚಿವ ಅಶೋಕ್‌ ಭರವಸೆ
Last Updated 29 ಏಪ್ರಿಲ್ 2022, 3:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಒತ್ತುವರಿದಾರ ಬೆಳೆಗಾರರಿಗೆ ಭೂಕಬಳಿಕೆ ಹಣೆಪಟ್ಟಿ ಯಿಂದ ಮುಕ್ತಿ ನೀಡಲು ಕ್ರಮ ವಹಿಸುತ್ತೇನೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಭರವಸೆ ನೀಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌), ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ (ಕೆಪಿಎ), ಯುನೈಟೆಡ್‌ ಪ್ಲಾಂಟರ್ಸ್‌ ಅಸೋಸಿಯೇಷನ್‌ (ಯುಪಿಎಎಸ್‌ಐ) ವತಿಯಿಂದ ನಗರದದಲ್ಲಿ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‌ ‘ಬಹಳ ವರ್ಷಗಳ ಹಿಂದೆ ಸರ್ಕಾರದ ಜಾಗ ಮಟ್ಟ ಮಾಡಿ ಕಾಫಿ ತೋಟ ಮಾಡಿರುವವರಿಗೆ ಒತ್ತುವರಿದಾರರು, ಭೂಕಬಳಿಕೆದಾರರು ಹಣೆಪಟ್ಟಿ ಹಚ್ಚಲಾಗಿದೆ. ಸಂಕಷ್ಟದಲ್ಲಿರುವ ಬೆಳೆಗಾರರ ಈ ಸಮಸ್ಯೆಯನ್ನು ಪರಿಹರಿಸಿ ಅವರ ಹಣೆಪಟ್ಟಿ ಕಳಚಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.

‘ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕಂದಾಯ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ಒತ್ತುವರಿ ಪ್ರಮಾಣ (5 ಎಕರೆ, 10 ಎಕರೆ, 15 ಎಕರೆ...) ಆಧರಿಸಿ ಸ್ಲ್ಯಾಬ್‌ ನಿಗದಿಗೆ ಕ್ರಮ ವಹಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

‘ಒತ್ತುವರಿ ವಿಚಾರಕ್ಕೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಜತೆ ಒಮ್ಮೆ ಚರ್ಚಿಸಲಾಗಿದೆ. ಎಷ್ಟು ವರ್ಷಕ್ಕೆ ಲೀಸ್‌ ನೀಡಬೇಕು ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಒತ್ತುವರಿ ಜಾಗಕ್ಕೆ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲೇ ಆದೇಶ ಪತ್ರ ಸಿಗುವಂತೆ ಮಾಡುತ್ತೇವೆ’ ಎಂದೂ ಭರವಸೆ ನೀಡಿದರು.

‘ಪರಿಭಾವಿತ (ಡೀಮ್ಡ್‌) ಅರಣ್ಯದ ಎಂದು ಗುರುತಿಸಿರುವ ಸುಮಾರು 90 ಸಾವಿರ ಎಕರೆ ವಾಪಸ್‌ ಪಡೆಯಲು ಪ್ರಕ್ರಿಯೆ ನಡೆಸಿದ್ದೇವೆ. ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದೇವೆ. ಈ ಪ್ರದೇಶವನ್ನು ಉಳುಮೆ ಮಾಡುತ್ತಿರುವವರಿಗೆ ನೀಡುವ ಚಿಂತನೆ ಇದೆ’ ಎಂದರು.

‌‌‌ ಮಾಸಾಶನ (ವಿಧವಾ, ಹಿರಿಯ ನಾಗರಿಕ...) ಅರ್ಜಿ ಸಮಸ್ಯೆಗಳ ಪರಿಹಾರಕ್ಕೆ ‘ಸಹಾಯವಾಣಿ’ ಕೊಠಡಿ ಸೌಕರ್ಯಯನ್ನು ಸದ್ಯದಲ್ಲೇ ಜಾರಿಗೊಳಿಸುತ್ತೇವೆ. ಅರ್ಜಿದಾರರು ‘ಆಧಾರ್‌’, ‘ಬ್ಯಾಂಕ್‌ ಖಾತೆ ಸಂಖ್ಯೆ’ ತಿಳಿಸಿದರೆ ಪರಿಶೀಲಿಸುತ್ತೇವೆ. ಸರಿ ಇದ್ದರೆ 72 ಗಂಟೆಗಳಲ್ಲಿ ಮಾಸಾಶನ ತಲುಪಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಒತ್ತುವರಿ ಸಮಸ್ಯೆ ಎಲ್ಲ ಕಡೆ ಇದೆ. ಪರಿಶೀಲಿಸಿ ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಹೇಳಿದರು.

ಕಾಫಿ ಬೆಳೆಗಾರರ 10 ಎಚ್‌.ಪಿ ವರೆಗಿನ ಪಂಪ್‌ಸೆಟ್‌ಗಳ ಹಿಂದಿನ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕು. ಕಾಫಿ ಬೆಳೆಗಾರರ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಶಾಸಕ ಲಿಂಗೇಶ್ ಹೇಳಿದರು.

ಕೆಜಿಎಫ್‌ ಅಧ್ಯಕ್ಷ ಡಾ.ಎಚ್‌.ಟಿ.ಮೋಹನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮುಖಂಡರಾದ ಬಿ.ಎಸ್‌.ಜೈರಾಂ, ಎನ್‌.ರಾಮನಾಥನ್‌, ಕೃಷ್ಣಪ್ಪ, ಜೆಫ್ರಿ ರೆಬೆಲ್ಲೊ, ಟಿ.ರಾಜಶೇಖರ್‌, ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಇದ್ದರು.

ಮಾಸ್ಕ್ ಧರಿಸಿದ ಗಣ್ಯರು: ವೇದಿಕೆಯಲ್ಲಿದ್ದ ಕೆಲವೇ ಮಂದಿ ಮಾಸ್ಕ್‌ ಧರಿಸಿದ್ದರು. ಸಚಿವ ಅಶೋಕ್, ಸಿ.ಟಿ.ರವಿ, ಕುಮಾರಸ್ವಾಮಿ, ಭೋಜೇಗೌಡ, ಟಿ.ಡಿ.ರಾಜೇಗೌಡ ಸಹಿತ ಬಹುತೇಕರು ಧರಿಸಿದಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT