ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಕಾಂಗ್ರೆಸ್‌ನ ಕಾರ್ಯಕ್ರಮಗಳಿಗೆ ಸೋಲಿಲ್ಲ- ಡಾ.ಕೆ.ಪಿ.ಅಂಶುಮಂತ್

ಕಾಂಗ್ರೆಸ್‌ನ ಸಂಸ್ಥಾಪನಾ ದಿನಾಚರಣೆ
Last Updated 29 ಡಿಸೆಂಬರ್ 2021, 5:33 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿರುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ 137ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನ ಧ್ವನಿ ಜನಸಾಮಾನ್ಯರ ಧ್ವನಿಯಾಗಿದೆ. ಕಾಂಗ್ರೆಸ್‌ನ 70 ವರ್ಷದಲ್ಲಿ ದೇಶದ ಅಭಿವೃದ್ಧಿಗೆ ಜಾರಿಗೆ ತಂದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಪಕ್ಷಕ್ಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲಾಗಿರಬಹುದು. ಆದರೆ, ಪಕ್ಷದ ಕಾರ್ಯಕ್ರಮಗಳಿಗೆ ಸೋಲಿಲ್ಲ. ದೇಶದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿಯ ಸರ್ವಾಧಿಕಾರಿ ಧೋರಣೆ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ’ ಎಂದರು.

ಮುಖಂಡ ಎಲ್ದೋಸ್ ಮಾತನಾಡಿ, ‘ಕಾಂಗ್ರೆಸ್‌ನ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಎಲ್ಲರಿಗೂ ಸಮಾನ ಅವಕಾಶ ನೀಡುವ ಪಕ್ಷವಾಗಿದ್ದು, ಇಂತಹ ಜಾತ್ಯತೀತ ಸಂಘಟನೆ ಯಲ್ಲಿರುವುದಕ್ಕೆ ಕಾರ್ಯಕರ್ತರು ಹೆಮ್ಮೆ ಪಡಬೇಕು’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಉಪಾಧ್ಯಕ್ಷ ಮುಕುಂದ, ಸದಸ್ಯ ಪ್ರಶಾಂತ್ ಶೆಟ್ಟಿ, ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಬಿನು, ಮುಖಂಡ ಈ.ಸಿ.ಜೋಯಿ ಮಾತನಾಡಿದರು.

ಮುಖಂಡರಾದ ಏಲಿಯಾಸ್, ಅಬೂಬಕರ್, ಬೆನ್ನಿ, ಸಾಜು, ಅಂಜುಮ್, ಪ್ರಶಾಂತ್, ಆದರ್ಶ, ಬಿ.ವಿ.ಉಪೇಂದ್ರ, ಮುನವರ್ ಪಾಷ, ಸೈಯದ್ ವಸೀಂ, ಅನಿದ್ ಇದ್ದರು.

‘ಸ್ವಾತಂತ್ರ್ಯ ತಂದ ಪಕ್ಷ’

ಕಡೂರು: ‘ಭಾರತ ಸ್ವತಂತ್ರ ರಾಷ್ಟ್ರ ವಾಗಬೇಕೆಂಬ ಆಶಯದಿಂದ ಪರಕೀಯರ ಆಳ್ವಿಕೆಯ ವಿರುದ್ಧದ ಹೋರಾಟಕ್ಕಾಗಿಯೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಜನ್ಮತಾಳಿತು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜು ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತವೇ ಸಮಾನತೆ. ನೆಹರೂ, ಲಾಲ್‌ ಬಹದ್ದೂರ್ ಶಾಸ್ತ್ರಿ ಕಾಲದಿಂದ ಮನಮೋಹನ್ ಸಿಂಗ್ ತನಕವೂ ಎಲ್ಲರೂ ಸಮಾನತೆಗೆ ಒತ್ತು ನೀಡಿದರು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಸಯ್ಯದ್ ಇಕ್ಬಾಲ್, ಶ್ರೀಕಾಂತ್, ಸೇವಾದಳದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ನಟರಾಜ್, ಕೃಷ್ಣಮೂರ್ತಿ, ಕೆ.ಜಿ.ಶ್ರೀನಿವಾಸ ಮೂರ್ತಿ, ನರಸಿಂಹಪ್ಪ, ವಿನಯ್ ವಳ್ಳು ಇದ್ದರು.

‘ಶೋಷಿತರ ಧ್ವನಿ’

ಮೂಡಿಗೆರೆ: ‘ದೇಶದಲ್ಲಿ ಕಾಂಗ್ರೆಸ್ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹೊಸ್ಕೆರೆ ರಮೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ ಗೌಡ ಮಾತನಾಡಿ, ‘ಬಿಜೆಪಿ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಾಮಾನ್ಯ ಜನರು ಬದುಕು ನಡೆಸಲು ದುಸ್ತರ ಪಡುವಂತಾಗಿದೆ’ ಎಂದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಕ್ರಮ್‍ ಹಾಜಿ, ಕಾಂಗ್ರೆಸ್ ತಾಲ್ಲೂಕು ಮಹಿಳಾ ಅಧ್ಯಕ್ಷೆ ಬಿ.ಕೆ.ಜಯಮ್ಮ, ಪಕ್ಷದ ಪದಾಧಿಕಾರಿಗಳಾದ ಎಂ.ಎಸ್.ಅನಂತ್, ಸಿ.ಬಿ.ಶಂಕರ್, ಸಂಪತ್ ಬಿಳಗುಳ, ಕೆ.ಪಿ. ಶಿವಕುಮಾರ್, ರವಿ ಕುನ್ನಳ್ಳಿ, ಹರೀಶ್, ಮುಗ್ರಹಳ್ಳಿ ಸಂಪತ್, ಉಮರ್ ಬಣಕಲ್, ಶಮಂತ್, ಕಲ್ಪನಾ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT