ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ನಕಲಿ; ದೂರು ದಾಖಲಿಸಲು ನಿರ್ಧಾರ- ಕೆ.ಎಂ.ಸಂತೋಷ್‌

ನಿತೇಶ್‌ ಜತೆಗಿದ್ದ ಸಹಚರರು ಕಾಂಗ್ರೆಸ್‌ನವರಲ್ಲ: ಸಂತೋಷ್‌
Last Updated 26 ಜುಲೈ 2022, 5:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ವ್ಯಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿರುವ ಆಡಿಯೋ ನಕಲಿ. ಅದಕ್ಕೂ ನನಗೂ ಸಂಬಂಧ ಇಲ್ಲ’ ಎಂದು ಕಾಂಗ್ರೆಸ್‌ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಎಂ.ಸಂತೋಷ್‌ ಇಲ್ಲಿ ಸೋಮವಾರ ಪ್ರತಿಪಾದಿಸಿದರು.

‘ದುರುದ್ದೇಶದಿಂದ ಯಾರೋ ನಕಲಿ ಆಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಕೆಲವರು ನನ್ನನ್ನು ‘ಬ್ಲ್ಯಾಕ್‌ ಮೇಲ್‌’ ಮಾಡಲು ಮುಂದಾಗಿದ್ದಾರೆ. ಅವರ ತಂತ್ರಕ್ಕೆ ಮಣಿಯುವುದಿಲ್ಲ’ ಎಂದು ಉತ್ತರಿಸಿದರು.

‘ಕಾಂಗ್ರೆಸ್‌ ಜಿಲ್ಲಾ ಘಟಕದ ಕಚೇರಿಯಲ್ಲಿ ಇದೇ 22ರಂದು ಏರ್ಪಾಡಾಗಿದ್ದ ಸಭೆಯಲ್ಲಿ ನಿತೇಶ್‌ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದಾರೆ. ಯುವ ಕಾಂಗ್ರೆಸ್‌ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ನಿತೇಶ್‌ನನ್ನು ಪಕ್ಷದ ರಾಜ್ಯ ಘಟಕದವರು ಅಮಾನತು ಮಾಡಿದ್ದಾರೆ. ನಿತೇಶ್‌ನ ಜತೆ ಇದ್ದ ಸಹಚರರು ಯಾರೂ ಕಾಂಗ್ರೆಸ್‌ ಯುವ ಘಟಕದ ಸದಸ್ಯರಲ್ಲ. ಹಲ್ಲೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದರು.

‘ಈ ಹಿಂದೆ ಎರಡು ಬಾರಿ ಸಣ್ಣಪುಟ್ಟ ಮನಸ್ತಾಪಗಳು ಆಗಿದ್ದವು. ಪಕ್ಷದ ಮುಖಂಡರಿಗೆ ತಿಳಿಸಿ ಪರಿಹರಿಸಿಕೊಳ್ಳಲಾಗಿತ್ತು’ ಎಂದು ಉತ್ತರಿಸಿದರು.

ರಾಜ್ಯ ಯುವ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷೆ ಭವ್ಯಾ ಮಾತನಾಡಿ, ‘ನಿತೇಶ್‌ ಅವರು ಪಕ್ಷದಲ್ಲಿ ಸಕ್ರಿಯವಾಗಿ ಇರಲಿಲ್ಲ. ಹೀಗಾಗಿ ಪಕ್ಷದಿಂದ ಅವರನ್ನು ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವರಿಷ್ಠರು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಯುವ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಪುಷ್ಪಲತಾ, ಸಿದ್ಧೇಶ್‌, ಚೈತ್ರಾ, ಪ್ರಸನ್ನ ಇದ್ದರು.

ಆಡಿಯೊ ವೈರಲ್‌: ಸ್ಥಳೀಯ ಸಂಸ್ಥೆ ಚುನಾವಣೆಯೊಂದರಲ್ಲಿ ಸ್ಪರ್ಧಿಸಲು ಒಬ್ಬರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ಸಂತೋಷ್‌ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೊವೊಂದು ವೈರಲ್‌ ಆಗಿದೆ. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆ ಸಂದರ್ಭದ ಆಡಿಯೊ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT