ಮಂಗಳವಾರ, ನವೆಂಬರ್ 19, 2019
28 °C
ನಗರದ ರಸ್ತೆಗಳ ದುರಸ್ತಿಗೆ ಒತ್ತಾಯ

ರಸ್ತೆಗೆ ಸಸಿ ನೆಟ್ಟು ಕಾಂಗ್ರೆಸ್ ಪ್ರತಿಭಟನೆ

Published:
Updated:
Prajavani

ಚಿಕ್ಕಮಗಳೂರು: ನಗರದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ಸಸಿ ನೆಟ್ಟು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಕೆ.ಎಂ.ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಎದುರು ಜಮಾಯಿಸಿದ ಕಾರ್ಯಕರ್ತರು, ನಡುರಸ್ತೆಯಲ್ಲಿ ಬಾಳೆಗಿಡ, ಅಲಂಕಾರಿಕ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಚಿಕ್ಕಮಗಳೂರಿನಿಂದ ಮಂಗಳೂರು ತಲುಪಲು ರಾಷ್ಟ್ರೀಯ ಹೆದ್ದಾರಿ 73(ಕೆ.ಎಂ.ರಸ್ತೆ)ನ್ನು ಅವಲಂಭಿಸಬೇಕಾಗಿದೆ. ಶೈಕ್ಷಣಿಕವಾಗಿ, ವ್ಯಾಪಾರ ವಹಿವಾಟಿನ ದೃಷ್ಠಿಯಲ್ಲಿ
ರಾಷ್ಟ್ರೀಯಹೆದ್ದಾರಿ ಪ್ರಮುಖವಾಗಿದೆ. ನಗರದಲ್ಲಿ ಹಾದುಹೋಗುವ ಈ ರಾಷ್ಟ್ರೀಯ ಹೆದ್ದಾರಿ ಪೂರ್ಣ ಹಾಳಾಗಿದೆ. ಆದರೆ ರಸ್ತೆ ಗುಂಡಿ ಮುಚ್ಚಲು ಜಿಲ್ಲಾಡಳಿತ ನಿರ್ಲಕ್ಷ ವಹಿಸಿದೆ ಎಂದು ದೂಷಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಜನರು ಗುಂಡಿ ರಸ್ತೆಗಳಲ್ಲಿಯೇ ಸಂಚರಿಸಿ ಹೈರಾಣಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಅವುಗಳ ದುರಸ್ತಿಗೆ ನಿರಾಸಕ್ತಿ ವಹಿಸಿದ್ದಾರೆ. ರಾಜ್ಯಮಟ್ಟದಲ್ಲಿ ರಾಜಕೀಯ ಹೇಳಿಕೆ ನೀಡುತ್ತಾ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಜಿಲ್ಲೆ ಅನಾಥವಾಗಿದೆ, ಸಚಿವರು ಎಚ್ಚೆತ್ತುಕೊಳ್ಳಬೇಕು. ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಬಡಜನರ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ಚಿಕ್ಕಮಗಳೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಸಿ.ಟಿ.ರವಿ ಆಯ್ಕೆಯಾಗಿದ್ದಾರೆ. ಆದರೆ ಕ್ಷೇತ್ರ ಮಾತ್ರ ಅಭಿವೃದ್ಧಿಯಾಗಿಲ್ಲ. ಅವರ ಬೆಂಬಲಿಗರಿಗೆ ರಸ್ತೆ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ನಗರದಲ್ಲಿ ಒಂದೇ ರಸ್ತೆಗೆ ವರ್ಷದಲ್ಲಿ ಎರಡೆರೆಡು ಬಾರಿ ಡಾಂಬರೀಕರಣ ನಡೆಯುತ್ತದೆ. ಎರಡು ಬಾರಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತದೆ ಎಂದು ವ್ಯಂಗ್ಯವಾಡಿದರು.

ರಸ್ತೆಯಲ್ಲಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನೆ ಶೀಘ್ರ ಮುಗಿಸುವಂತೆ ಪೊಲೀಸರು ತಾಕೀತು ಮಾಡಿದರು. ಈ ನಿಮಿತ್ತ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಪಕ್ಷದ ಮುಖಂಡರಾದ ಡಾ.ಡಿ.ಎಲ್.ವಿಜಯಕುಮಾರ್, ಎಂ.ಸಿ.ಶಿವಾನಂದಸ್ವಾಮಿ, ಕೆ.ಮಹಮದ್, ರೇಖಾ ಹುಲಿಯಪ್ಪಗೌಡ, ಎಚ್.ಪಿ.ಮಂಜೇಗೌಡ, ಎ.ಎನ್.ಮಹೇಶ್, ಶಿವಕುಮಾರ್, ಸಿಲ್ವರ್‌ಸ್ಟರ್ ಇದ್ದರು.

ಪ್ರತಿಕ್ರಿಯಿಸಿ (+)