ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಆಶ್ವಾಸನೆ ಈಡೇರಿಸಿಲ್ಲ, ಜನರ ವಿರೋಧಿ ಆಡಳಿತದ ಆರೋಪ
Last Updated 13 ನವೆಂಬರ್ 2019, 11:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದುರಾಡಳಿತ ನಡೆಸುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಎಳೆ ಎಳೆಯಾಗಿ ತಿಳಿಸುವ ನಿಮಿತ್ತ ರಾಜ್ಯದಾಧ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಪ್ರಧಾನಿ ಮೋದಿ ಅವರ ಆರು ವರ್ಷಗಳ ಆಡಳಿತವಾಧಿಯಲ್ಲಿ ದೇಶದ ಆರ್ಥಿಕತೆ ಕುಸಿಯುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಸಣ್ಣ ವ್ಯಾಪಾರಿಗಳು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ದೊಡ್ಡ ಉದ್ಯಮಿಗಳಿಗೆ ಮಾತ್ರ ಅಚ್ಚೆ ದಿನ್ ಬಂದಿದೆ. ಜನಸಾಮಾನ್ಯರ ಬದುಕು ದುಸ್ಥಿರವಾಗಿದೆ ಎಂದರು.

ವಿಧಾನಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಬಡವರ ಬದುಕನ್ನು ಹಸನು ಮಾಡುವುದಾಗಿ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಆಶ್ವಾಸನೆ ನೀಡಿತ್ತು. ಅಧಿಕಾರ ಹಿಡಿದ ನಂತರ ಬಡವರನ್ನು ಮರೆತಿದೆ. ಬಡವರ ಬದುಕನ್ನು ಪಾತಾಳಕ್ಕೆ ತಳ್ಳಿದೆ. ರೈತರಿಗೆ ಕೇಂದ್ರ ಸರ್ಕಾರ ಮಗ್ಗಲ ಮುಳ್ಳಾಗಿ ಪರಣಮಿಸಿದೆ’ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ನೆರೆಯಿಂದ ಜನರು ಸಂಕಷ್ಟ ಸನುಭವಿಸುತ್ತಿದ್ದಾರೆ. ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಗರದ ರಸ್ತೆಗಳು ಗುಂಡಿ, ಹೊಂಡಗಳಿಂದ ಕೂಡಿವೆ. ಈ ಗುಂಡಿಗೆ ಬೈಕಿನಿಂದ ಆಯತಪ್ಪಿ ಬಿದ್ದು ಎಂಜಿನಿರಿಂಗ್ ವಿದ್ಯಾರ್ಥಿ ಇತ್ತೀಚೆಗೆ ಮೃತಪಟ್ಟಿದ್ದಾಳೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡಿಲ್ಲ, ಸಾಂತ್ವಾನ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ದೇಶದ ಜಿಡಿಪಿ ಕುಸಿಯುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಮೋದಿ ಸರ್ಕಾರ ಕಪ್ಪುಹಣವನ್ನು ವಿದೇಶದಿಂದ ತರಲಿಲ್ಲ. ಜನರ ಖಾತೆಗೆ ₹15 ಲಕ್ಷ ಜಮೆ ಮಾಡಲಿಲ್ಲ ಎಂದು ಲೇವಡಿ ಮಾಡಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತರೀಕೆರೆ ಮಾಜಿ ಶಾಸಕ ಜಿ.ಎಸ್.ಶ್ರೀನಿವಾಸ್, ಪಕ್ಷದ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಎ.ಎನ್.ಮಹೇಶ್, ಕೆ.ಮಹಮದ್, ಎಂ.ಸಿ.ಶಿವಾನಂದಸ್ವಾಮಿ, ಸವಿತಾರಮೇಶ್, ಹನೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT