ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿ– ಶೋಭಾ ಸಾಧನೆ ಶೂನ್ಯ: ಟೀಕೆ

Last Updated 2 ಮೇ 2019, 16:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸಂಸದೆ ಶೋಭಾ ಕರಂದ್ಲಾಜೆ ಅವರು ಐದು ವರ್ಷ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿಲ್ಲ. ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ಈಗ ಮತಯಾಚನೆಯಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಿ.ಗಾಯತ್ರಿಶಾಂತೇಗೌಡ ಇಲ್ಲಿ ಬುಧವಾರ ಕುಟುಕಿದರು.

‘ಮೋದಿ ಹೆಸರಿನಲ್ಲಿ ಮತಯಾಚಿಸುವವರು ವಾರಣಾಸಿಯಲ್ಲಿ ಪ್ರಚಾರ ಮಾಡಲಿ, ಮೋದಿ ಸ್ಪರ್ಧಿಸುವುದು ಅಲ್ಲಿ. ಈ ಕ್ಷೇತ್ರದಲ್ಲಿ ಮತಯಾಚಿಸುವಾಗ ತಮ್ಮ ಸಾಧನೆಗಳನ್ನು ಶೋಭಾ ಹೇಳಬೇಕು. ಅವರ ಸಾಧನೆ ಶೂನ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮೂದಲಿಸಿದರು.

‘ಚಿಕ್ಕಮಗಳೂರಿನಲ್ಲಿ ಮಿನಿವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಯೋಜನೆಗೆ ಅನುದಾನ ಒದಗಿಸಿ ಕಾರ್ಯಗತಗೊಳಿಸುವಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಛೇಡಿಸಿದರು.

‘ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಶೋಭಾ ಅವರು ಐದು ವರ್ಷಗಳಲ್ಲಿ ಒಮ್ಮೆಯೂ ಸಂಘಸಂಸ್ಥೆಗಳು, ಮುಖಂಡರು, ಜನರೊಂದಿಗೆ ಚರ್ಚಿಸಿಲ್ಲ. ಒಟ್ಟಾರೆಯಾಗಿ ಕ್ಷೇತ್ರವನ್ನು ಕಡೆಗಣಿಸಿದ್ದಾರೆ’ ಎಂದರು.

‘ಕಾಫಿ, ಅಡಿಕೆ, ತೆಂಗು ಇತರ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ–ಸಂಕಷ್ಟಗಳಿಗೆ ಶೋಭಾ ಸ್ಪಂದಿಸಿಲ್ಲ. ಸಂಸತ್ತಿನಲ್ಲೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಬಿಜೆಪಿಯವರೇ ‘ಗೋ ಬ್ಯಾಕ್‌ ಶೋಭಾ’ ಎಂದು ಹೇಳಿದ್ದರು’ ಎಂದು ಟೀಕಿಸಿದರು.

ಚಿಕ್ಕಮಗಳೂರು– ಬೇಲೂರು–ಸಕಲೇಶಪುರ ರೈಲು ಮಾರ್ಗ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದ್ದು, ಈ ಯೋಜನೆ ಕಾರ್ಯಗತ ನಿಟ್ಟಿನಲ್ಲಿ ಗಮನಹರಿಸಿಲ್ಲ. ಕುದುರೆಮುಖದಲ್ಲಿ ಕಬ್ಬಿಣ ಅದಿರು (ಐಒಸಿಎಲ್‌) ಕಂಪೆನಿ ಇದ್ದ ಸ್ಥಳದಲ್ಲಿ ಕಮಾಂಡೊ ತರಬೇತಿ ಕೇಂದ್ರ ಅಥವಾ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಅವಕಾಶ ಇತ್ತು. ಈ ನಿಟ್ಟಿನಲ್ಲಿಯೂ ಶೋಭಾ ಗಮನಹರಿಸಿಲ್ಲ’ ಎಂದು ದೂಷಿಸಿದರು.

‘ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯನ್ನು ದತ್ತು ಪಡೆದಿದ್ದರು. ಈ ಗ್ರಾಮ ದತ್ತು ಪಡೆಯುವ ಮುನ್ನ ಹೇಗಿತ್ತೋ ಹಾಗೆಯೇ ಇದೆ. ಗ್ರಾಮವನ್ನು ಅಭಿವೃದ್ಧಿ ಮಾಡಿಲ್ಲ’ ಎಂದು ದೂರಿದರು.

‘ಕಡುಬಡವರಿಗೆ ತಿಂಗಳಿಗೆ ₹ 6,000 ನೆರವು ನೀಡಲಾಗುವುದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳು, ಈಗಿನ ಮೈತ್ರಿ ಸರ್ಕಾರದ ಯೋಜನೆಗಳು ಇವೆಲ್ಲವು ಮೈತ್ರಿ ಅಭ್ಯರ್ಥಿಗೆ ಪೂರಕವಾಗಿವೆ. ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಕ್ಷೇತ್ರದ ಮತದಾರರು ಕೈಹಿಡಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶೋಭಾ ಅವರಿಗೆ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಬಹಳಷ್ಟು ಅವಕಾಶ ಇದ್ದವು. ಆದರೆ, ಅವರು ಗಮನಹರಿಸಲಿಲ್ಲ’ ಎಂದು ಮುಖಂಡ ಕೆ.ಮಹಮ್ಮದ್‌ ದೂಷಿಸಿದರು.

ಮುಖಂಡರಾದ ಎಂ.ಸಿ.ಶಿವಾನಂದಸ್ವಾಮಿ, ಮಂಜೇಗೌಡ, ಪ್ರಕಾಶ್‌, ರವೀಶ್‌ಕ್ಯಾತನಬೀಡು, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT