ಅಕ್ರಮವಾಗಿ ಹೋಂಸ್ಟೇ, ರೆಸಾರ್ಟ್‌ ನಿರ್ಮಾಣ; ಕಡಿವಾಣಕ್ಕೆ ಒತ್ತಾಯ

7

ಅಕ್ರಮವಾಗಿ ಹೋಂಸ್ಟೇ, ರೆಸಾರ್ಟ್‌ ನಿರ್ಮಾಣ; ಕಡಿವಾಣಕ್ಕೆ ಒತ್ತಾಯ

Published:
Updated:
ಗಿರಿಶ್ರೇಣಿಯ ಕವಿಕಲ್ಗಂಡಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್, ಹೋಂ ಸ್ಟೇಗಳು ಅಕ್ರಮವಾಗಿ ತಲೆ ಎತ್ತುತ್ತಿದ್ದು, ಕಡಿವಾಣ ಹಾಕಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್, ಪರಿಸರಾಸಕ್ತ ಎಸ್.ಗಿರಿಜಾಶಂಕರ ಆರೋಪಿಸಿದ್ದಾರೆ.

ಮುಳ್ಳಯ್ಯನಗಿರಿ ತಪ್ಪಲಿನ ಕಾಫಿ ತೋಟಗಳು, ಅನೇಕ ಖಾಸಗಿ ಪ್ರದೇಶಗಳಲ್ಲಿ ರೆಸಾರ್ಟ್‌, ಹೋಂ ಸ್ಟೇಗಳ ನಿರ್ಮಾಣ ನಡೆಯುತ್ತಿದೆ. ಈ ಪೈಕಿ ಹೆಚ್ಚಿನವು ಸರ್ಕಾರದ ನಿಯಮಾನುಸಾರ ಅನುಮತಿ ಪಡೆದಿಲ್ಲ ಎಂಬ ದೂರುಗಳಿವೆ. ಈ ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ರೆಸಾರ್ಟ್, ಹೋಂ ಸ್ಟೇಗಳು ತಲೆಎತ್ತಿದರೆ ಈ ಪ್ರದೇಶಗಳ ಸೂಕ್ಷ್ಮತೆಗೆ ಧಕ್ಕೆಯಾಗುವ ಅಪಾಯ ಇದೆ.

ಈ ಪ್ರದೇಶಗಳು ವನ್ಯಜೀವಿಗಳ ಚಲನವಲನದ ತಾಣಗಳಾಗಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಳ ಹಾಗೂ ವಾಹನ ಓಡಾಟದ ಭರಾಟೆ ಈ ಪ್ರದೇಶಗಳ ಶಾಂತತೆಗೆ ಧಕ್ಕೆ ಉಂಟಾಗುವ ಅಪಾಯವೂ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಿಯಮಾನುಸಾರ ನಿರ್ದಿಷ್ಟ ರೂಪರೇಷೆ, ಕೊಠಡಿ ಸಂಖ್ಯೆ ಮಿತಿ ಮೊದಲಾದವನ್ನ ಪಾಲಿಸದೆ, ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗುತ್ತಿದೆ. ನೈಸರ್ಗಿಕವಾಗಿ ಹುಟ್ಟಿ ಹರಿಯುವ ನೀರಿನ ಮೂಲಗಳಿಗೂ ಇದರಿಂದ ಧಕ್ಕೆಯಾಗವ ಸಂಭವ ಇದೆ. ಗಿರಿಶಿಖರಗಳಲ್ಲಿ ಹುಟ್ಟಿಹರಿಯುವ ಸಣ್ಣಪುಟ್ಟ ಹಳ್ಳಗಳು ಬೆಟ್ಟದ ಬುಡದ ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾಗಿವೆ. ಅಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇಗಳು ಕಾಲಿಟ್ಟರೆ ಈ ಗ್ರಾಮಗಳು ಭವಿಷ್ಯದಲ್ಲಿ ನೀರಿಗಾಗಿ ಹಪಹಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾಮ ಪಂಚಾಯಿತಿಗಳು ಮೌನ ವಹಿಸಿವೆ. ರೆಸಾರ್ಟ್ ಮತ್ತು ಹೋಂಸ್ಟೇಗಳು ಕಟ್ಟಡ ನಿರ್ಮಿಸಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಬೇಕು. ಆದರೆ ಹೋಂಸ್ಟೇ ಹಾಗೂ ರೆಸಾರ್ಟ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಬಹುತೇಕರು ಅನುಮತಿ ಪಡೆದುಕೊಂಡಿಲ್ಲ ಎಂಬ ಆರೋಪ ಇದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರು ಅರಣ್ಯ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಮಾಹಿತಿ ಸಂಗ್ರಹಿಸಬೇಕು. ಅನಧಿಕೃತವಾಗಿ ನಿರ್ಮಾಣ ನಡೆಯುತ್ತಿದ್ದರೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !