ಬ್ಯಾಂಕಿಂಗ್ ಸೇವೆ ದೊರೆಯದೇ ಗ್ರಾಹಕರ ಪರದಾಟ

7
ತಾಂತ್ರಿಕ ದೋಷದಿಂದ ಎಸ್ ಬಿ ಐ ಶಾಖೆ ವ್ಯವಹಾರ ಸ್ಥಗಿತ

ಬ್ಯಾಂಕಿಂಗ್ ಸೇವೆ ದೊರೆಯದೇ ಗ್ರಾಹಕರ ಪರದಾಟ

Published:
Updated:
Deccan Herald

‌ಅಜ್ಜಂಪುರ: ಪಟ್ಟಣದ ಎಸ್ ಬಿ ಐ ಶಾಖೆ ತಾಂತ್ರಿಕ ದೋಷದಿಂದ ಕಳೆದೆರಡು ದಿನಗಳಿಂದ ವ್ಯವಹಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಗ್ರಾಹಕರು ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಪರದಾಡುವಂತಾಗಿದೆ.

ತಾಂತ್ರಿಕ ದೋಷದಿಂದಾಗಿ ಶಾಖೆಗೆ ಹೊಂದಿಕೊಂಡಿರುವ ಎಟಿಎಂ ಕೂಡಾ ಕಾರ್ಯ ನಿರ್ವಹಿಸಲಿಲ್ಲ. ತಾಂತ್ರಿಕ ದೋಷದಿಂದಾಗಿ ಶಾಖೆ ತನ್ನ ಎಲ್ಲಾ ರೀತಿಯ ಸೇವೆಯನ್ನೂ ಸ್ಥಗಿತಗೊಳಿಸಿತ್ತು.

ತಿಂಗಳ ಆರಂಭದ ಸಮಯದಲ್ಲಿಯೇ ಶಾಖೆಯಲ್ಲಿ ಸೇವೆ ಸ್ಥಗಿತಗೊಂಡಿದ್ದರಿಂದ ಪಿಂಚಣಿ ಪಡೆಯಲು ಬಂದ ನಿವೃತ್ತ ನೌಕರರು, ತಿಂಗಳ ವೇತನ ಪಡೆಯಲು ಬಂದಿದ್ದ ನೌಕರರು, ಮಾಶಾಸನ ಪಡೆಯಲು ಬಂದಿದ್ದ ಹಿರಿಯ ನಾಗರಿಕರು, ಪಿಂಚಣಿದಾರರು ನಗದು ದೊರೆಯದೇ ಬರಿಗೈಲಿ ಹಿಂತಿರುಗಿದರು.

‘ಖಾತೆಯಲ್ಲಿನ ನಗದು ಪಡೆಯಲು ಮಂಗಳವಾರ ಬ್ಯಾಂಕ್‌ಗೆ ಬಂದಿದ್ದೆ. ತಾಂತ್ರಿಕ ದೋಷವಿದ್ದು, ನಾಳೆ ಬನ್ನಿ ಎಂದು ಸಿಬ್ಬಂದಿ ತಿಳಿಸಿದ್ದರು. ಆಗಾಗಿ ಬುಧವಾರ ಬಂದರೂ ಸಮಸ್ಯೆ ಪರಿಹಾರವಾಗಿಲ್ಲ. ಶಾಖೆಯಲ್ಲಿ ಸಿಬ್ಬಂದಿಯೂ ಕಾಣುತ್ತಿಲ್ಲ. ಯಾವಾಗ ಸಮಸ್ಯೆ ಪರಿಹಾರವಾಗುತ್ತದೆ, ಎಂದು ವ್ಯವಹಾರ ಆರಂಭಗೊಳ್ಳಲಿದೆ ಎಂಬ ಬಗ್ಗೆ ತಿಳಿಸುವವರೂ ಯಾರೂ ಇಲ್ಲ’ ಎಂದು ನಿವೃತ್ತ ಶಿಕ್ಷಕ ಎಚ್.ಸಿ. ಕುಮಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಸಂಜೆ 4ರ ನಂತರ ತಾಂತ್ರಿಕ ದೋಷಕ್ಕೆ ಒಳಗಾಗಿ ಕಂಪ್ಯೂಟರ್‌ಗಳು ಕಾರ್ಯ ಸ್ಥಗಿತಗೊಳಿಸಿವೆ. ಇಂಟರ್‌ನೆಟ್ ಸಮಸ್ಯೆ ಕಾರಣ ಎಂಬ ಕಾರಣಕ್ಕೆ ಚಿಕ್ಕಮಗಳೂರಿನ ಬಿಎಸ್ಎನ್ಎಲ್ ಕೇಂದ್ರದಿಂದ ನೆಟ್ ಸೌಲಭ್ಯಕ್ಕಾಗಿ ಬಳಸುವ ಮೋಡಮ್‌ಗಳನ್ನು ತಂದು ಅಳವಡಿಸಲಾಯಿತಾದರೂ, ಕಂಪ್ಯೂಟರ್ ದುರಸ್ಥಿಗೊಳ್ಳಲಿಲ್ಲ. ಬುಧವಾರ ಶಿವಮೊಗ್ಗದಿಂದ ತಾಂತ್ರಿಕ ಪರಿಣಿತರು ಬಂದು ಕಂಪ್ಯೂಟರ್ ಸರಿಪಡಿಸುವ ಕಾರ್ಯದಲ್ಲಿ ತೊಡಗಿದರೂ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.

ಸೋಮವಾರ ಸಂಜೆ ಬ್ಯಾಂಕ್ ಮೇಲೆ ಹಾದುಹೋಗಿದ್ದ ವಿದ್ಯುತ್ ವೈರ್ ತುಂಡಾಗಿ ಬಿದ್ದಿದ್ದು ಹಾಗೂ ಶಾಖೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ಟ್ರಾನ್ಸ್ ಫಾರಂ ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗಿದ್ದರಿಂದ ಶಾಖೆಯಲ್ಲಿನ ಉಪಕರಣಗಳಿಗೆ ಹಾನಿ ಆಗಿರಬಹುದು ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕೂಡಲೇ ಹಿರಿಯ ಅಧಿಕಾರಿಗಳು ಶಾಖೆಯಲ್ಲಿ ಪದೇ ಪದೇ ಉಂಟಾಗುತ್ತಿರುವ ಉಪಕರಣಗಳ ದೋಷ ಸರಿಪಡಿಸಲು ಹಾಗೂ ಶಾಖೆ, ಶೀಘ್ರ ಬ್ಯಾಂಕಿಂಗ್ ಸೇವೆ ಆರಂಬಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !