ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ ಗ್ರಾಮ ಪಂಚಾಯಿತಿಗೆ ಕೋರ್ಟ್‌ ನೋಟಿಸ್

ನೀರಿನ ಮೀಟರ್ ಅಳವಡಿಕೆ ವಿಚಾರ: ಕೋರ್ಟ್‌ ಮೊರೆ ಹೋಗಿದ್ದ ನಿವಾಸಿಗಳು
Last Updated 17 ಜೂನ್ 2022, 12:26 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಗ್ರಾಮ ಪಂಚಾಯಿತಿಯು ನೀರಿನ ಬಳಕೆಯನ್ನು ತಿಳಿಯಲು ಮೀಟರ್ ಅಳವಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ನೀಡಿದೆ.

ಜಲಜೀವನ್ ಮಿಷನ್ ಯೋಜನೆಯಲ್ಲಿ ಕಳಸ ಪಟ್ಟಣ ವ್ಯಾಪ್ತಿಯಲ್ಲಿ ಮನೆಗಳಿಗೆ ನೀರಿನ ಮೀಟರ್ ಅಳವಡಿಕೆಯ ಕೆಲಸ ಕಳೆದ 2 ತಿಂಗಳಿಂದ ನಡೆಯುತ್ತಿದೆ. ಬಹುತೇಕ ಕಡೆ ಮೀಟರ್ ಅಳವಡಿಕೆಗೆ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಟ್ಟಣದ ನಿವಾಸಿ ಬಿ.ಜಿನರಾಜಯ್ಯ, ವೆಂಕಟೇಶ್ ಪ್ರಭು, ಕೆ.ಸಿ.ಧರಣೇಂದ್ರ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ’ಕಳಸ ಪಟ್ಟಣಕ್ಕೆ ಹೊನ್ನೆಕಾಡು ಹಳ್ಳದಿಂದ ಬರುವ ಉಚಿತ ನೀರಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆದಿದೆ. ಮೀಟರ್ ಅಳವಡಿಸುವುದಕ್ಕೆ ಶಾಶ್ವತ ತಡೆ ನೀಡಬೇಕು’ ಎಂದು ನ್ಯಾಯಾಲಯವನ್ನು ಕೋರಿದ್ದರು.

ವಾದ ಆಲಿಸಿದ ನ್ಯಾಯಾಲಯ, ಮೀಟರ್ ಅಳವಡಿಸುತ್ತಿರುವ ಬಗ್ಗೆ ಸಮರ್ಪಕ ಉತ್ತರ ನೀಡುವಂತೆ ಕಳಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೋಟಿಸ್ ನೀಡಿದೆ. ಜುಲೈ 7ರ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.

‘ಜಲಜೀವನ್ ಮಿಷನ್ ಯೋಜನೆಯಲ್ಲಿ ₹80 ಲಕ್ಷ ವೆಚ್ಚದಲ್ಲಿ ಕಳಸ ಪಟ್ಟಣ, ಹಿನಾರಿ ಪ್ರದೇಶದ 650 ಮನೆಗಳಿಗೆ ನೀರಿನ ಮೀಟರ್ ಅಳವಡಿಸುವುದು, ಪೈಪ್‍ಲೈನ್ ನಿರ್ಮಾಣ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ.ಈ ಯೋಜನೆಗೆ ಗ್ರಾಮ ಪಂಚಾಯಿತಿಯು ₹12 ಲಕ್ಷ ಪಾವತಿ ಮಾಡಬೇಕಿತ್ತು. ಕಳೆದ ವರ್ಷ ₹10 ಲಕ್ಷ ಪಾವತಿ ಮಾಡಿದ್ದು, ಉಳಿದ ಮೊತ್ತ ಪಾವತಿಸಬೇಕಿದೆ’ ಎಂದು ಮಾಹಿತಿ ನೀಡಿದರು.

ಮೀಟರ್ ಅಳವಡಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಕೆ.ಸಿ.ಧರಣೇಂದ್ರ, ‘ಕಳಸ ಪಟ್ಟಣಕ್ಕೆ ನಮ್ಮ ಊರಿನಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಆದರೂ ಮೀಟರ್ ಅಳವಡಿಸಿ ದರ ವಿಧಿಸುವ ಹುನ್ನಾರ ಏಕೆ. ಒಂದೊಂದು ಮೀಟರ್‌ಗೆ ಸಾವಿರಾರು ರೂಪಾಯಿ ಹಣ ಲಪಟಾಯಿಸುವ ಯೋಜನೆ ಇದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀರಿನ ಮೀಟರ್‌ ಕಂಟ್ರೋಲರ್ ಕಾರಣಕ್ಕೆ ಕೆಲವೆಡೆ ನೀರಿನ ಸಮಸ್ಯೆ ಆಗಿದೆ. ಹೊನ್ನೆಕಾಡು ಯೋಜನೆಯ ಪೈಪ್‍ಲೈನ್ ದುರಸ್ತಿ ಕಾರಣಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿದೆಯೇ ಹೊರತು ಮೀಟರ್ ಅಳವಡಿಕೆ ಕಾರಣ ಅಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT