ಭಾನುವಾರ, ಸೆಪ್ಟೆಂಬರ್ 25, 2022
29 °C
ಜಿಲ್ಲಾ ಸಮ್ಮೇಳನಲ್ಲಿ ಸಿಪಿಐ ರಾಜ್ಯ ಕಿಸಾನ್‌ ಸಭಾದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಆಕ್ರೋಶ

ಹೇಳಿದ್ದೇನು, ಮಾಡಿದ್ದೇನು; ಉತ್ತರ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ (ಎಲ್‌ಪಿಜಿ), ಬೇಳೆ, ಅಡುಗೆ ಎಣ್ಣೆ ಸಹಿತ ಎಲ್ಲ ಬೆಲೆಗಳು ಏರಿಕೆಯಾಗಿವೆ. ಪ್ರಧಾನಿ ಮೋದಿ ಅವರೇ ನೀವು ಹೇಳಿದ್ದೇನು, ಮಾಡಿದ್ದೇನು, ಉತ್ತರ ಕೊಡಿ ಎಂದು ಜನರು ಕೇಳಬೇಕು’ ಎಂದು ಸಿಪಿಐ ರಾಜ್ಯ ಕಿಸಾನ್‌ ಸಭಾದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹೇಳಿದರು.

ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿ ವತಿಯಿಂದ ಆಜಾದ್‌ ಪಾರ್ಕ್ ವೃತ್ತದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

2014ರಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 60 ಇತ್ತು ಈಗ 100 ದಾಟಿದೆ, ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 400 ಇತ್ತು ಈಗ ₹ 1100ಕ್ಕೆ ಏರಿದೆ. ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿಯುವಾಗ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ (ಎಲ್ಲರೊಂದಿಗೆ ಎಲ್ಲರ ವಿಕಾಸ) ಎಂದು ಹೇಳಿದ್ದರು. ಬೆಲೆ ಏರಿಕೆ ಮುಂತಾದವುಗಳ ಮೂಲಕ ‘ಸಬ್‌ ಕಾ ವಿನಾಶ್‌’ (ಎಲ್ಲರ ನಾಶ) ಕಡೆಗೆ ದೇಶವನ್ನು ಒಯ್ಯುತ್ತಿದ್ದಾರೆ’ ಎಂದು ದೂರಿದರು.

‘ಮೋದಿ ಅವರು ಅದಾನಿ, ಅಂಬಾನಿ ಅವರಂಥ ಶ್ರೀಮಂತರ ವಿಕಾಸದಲ್ಲಿ ತೊಡಗಿದ್ದಾರೆ. ಒಂದು ತಿಂಗಳ ಹಿಂದೆ ಕಾರ್ಪೊರೇಟ್‌ ಕಂಪನಿಗಳ ಸಾಲಮನ್ನಾ ಮಾಡಿದ್ದಾರೆ. ಆದರೆ, ಅಧಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲ’ ಎಂದು ಆಪಾದಿಸಿದರು.

‘ದೇಶದ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿದ್ದಾರೆ. ರೈಲ್ವೆ, ವಿಮಾನಯಾನ, ಬಿಎಸ್‌ಎನ್‌ಎಲ್‌ ಮೊದಲಾದವು ಖಾಸಗಿಯವರ ಪಾಲಾಗುತ್ತಿವೆ. ಸಣ್ಣ ಜಮೀನುಗಳನ್ನು ಕಾರ್ಪೊರೇಟ್‌ನವರಿಗೆ ವಹಿಸಲು ಮುಂದಾಗಿದ್ದಾರೆ’ ಎಂದರು.

‘ಮಧ್ಯಪ್ರದೇಶದಲ್ಲಿ ಮೂತ್ರಾಲಯ ಬಳಕೆಗೂ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಲಾಗಿದೆ. ಮೊಸರು, ಮಜ್ಜಿಗೆ ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿದ್ದಾರೆ. ಪಡಿತರ ವಿತರಣೆಯನ್ನು ಮುಂದಿನ ದಿನಗಳಲ್ಲಿ ಬಂದ್‌ ಮಾಡಲು ತಯಾರಿ ನಡೆಸಿದ್ದಾರೆ’ ಎಂದು ದೂರಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸುಂದರೇಶ್‌ ಮಾತನಾಡಿ, ಬಿಜೆಪಿ ಸರ್ಕಾರದ ಆರ್ಥಿಕ ನೀತಿಯು ಶ್ರೀಮಂತರನ್ನು ಮತ್ತುಷ್ಟು ಶ್ರೀಮಂತರಾಗಿಸುತ್ತಿದೆ. ಬಡವರನ್ನು ಮತ್ತಷ್ಟು ಬಡವರಾಗಿಸುತ್ತಿದೆ. ಉದ್ಯಮಿ ಅದಾನಿ ಅವರು ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಇದಕ್ಕೆ ಸಾಕ್ಷಿ’ ಎಂದರು.

ಸರ್ಕಾರಿ ಆಸ್ಪತ್ರೆಗಳ ಸಬಲೀಕರಣ, ಸರ್ಕಾರಿ ಶಾಲೆ ವ್ಯವಸ್ಥೆ ಉಳಿಸುವುದು, ಬಡವರಿಗೆ ಭೂಮಿ ಹಂಚಿಕೆ ನಿಟ್ಟಿನಲ್ಲಿ ಸಿಪಿಐ ಹೋರಾಟದಲ್ಲಿ ತೊಡಗಿದೆ. ಇದೇ 25ರಿಂದ 27ರವರೆಗೆ ಹಾಸನದಲ್ಲಿ ಪಕ್ಷದ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

‘ಹಗರಣ ತನಿಖೆಗೆ ವಹಿಸಿ’

‘ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮೊದಲಾದ ಹಗರಣಗಳನ್ನು ತನಿಖೆಗೆ ವಹಿಸಬೇಕು’ ಎಂದು ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್‌ ಒತ್ತಾಯಿಸಿದರು.

ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ, ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರ ಕಾಲದ ಎಲ್ಲ ಹಗರಣಗಳನ್ನು ತನಿಖೆಗೆ ವಹಿಸಬೇಕು. ಸತ್ಯ ಬಯಲಿಗೆ ತರಬೇಕು ಎಂದರು.

‘ದೆಹಲಿಯ ರಾಜಪಥದ ಹೆಸರನ್ನು ‘ಕರ್ತವ್ಯ ಪಥ’ ಎಂದು ಮರು ನಾಮಕರಣ ಮಾಡಿದ್ದಾರೆ. ರಾಷ್ಟ್ರಪತಿ ಭವನ, ರಾಜಭವನ ಸಹಿತ ಎಲ್ಲ ಭವನಗಳನ್ನು ಸೇವಕರ ಭವನ ಎಂದು ಬದಲಾಯಿಸಬೇಕು’ ಎಂದು ಆಗ್ರಹಿಸಿದರು

‘ಸಿ.ಟಿ.ರವಿ ಅವರು, ‘ಸಿದ್ದರಾಮಯ್ಯ ಅವರೇ ಮೈಸೂರಲ್ಲಿ ಜನ ನಿಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂದು ಎಲ್ಲವೂ ಗೊತ್ತಿದೆ, ನಮ್ಮ ಬಗ್ಗೆ ನೀವು ಮಾತನಾಡಿದರೆ ನಿಮ್ಮದನ್ನು ಹೇಳುತ್ತೇವೆ’ ಎಂದು ಬ್ಲಾಕ್‌ ಮೇಲ್‌ ಮಾಡಿದ್ದಾರೆ. ಈ ಬ್ಲಾಕ್‌ ಮೇಲ್‌ ರಾಜಕಾರಣವನ್ನು ಎಲ್ಲರೂ ನಿಲ್ಲಿಸಬೇಕು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು