ತರೀಕೆರೆ: ತಾಯಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಒಬ್ಬ ಪುತ್ರಿ ಮೃತಪಟ್ಟಿದ್ದು, ಮೂವರು ಅಪಾಯದಿಂದ ಪಾರಾಗಿದ್ದಾರೆ.
ಪಟ್ಟಣದ ಹುರುಳಿಹಟ್ಟಿ ವಾಸಿಯಾದ ಲಕ್ಷ್ಮಿ ಎಂಬುವವರು ತನ್ನ ಮೂವರು ಹೆಣ್ಣು ಮಕ್ಕಳಾದ ಮೇಘನಾ (12), ಸಿಂಚನಾ ( 10) ಮತ್ತು ಸ್ಫೂರ್ತಿ (8) ಅವರಿಗೆ ಶುಕ್ರವಾರ ರಾತ್ರಿ ನಿದ್ದೆಯ ಮಾತ್ರೆಯನ್ನು ನೀಡಿ, ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಶನಿವಾರ ಬೆಳಿಗ್ಗೆ 8 ಗಂಟೆಯಾದರೂ ಲಕ್ಷ್ಮಿ ಏಳದ ಕಾರಣ ಅತ್ತೆ ಮತ್ತು ನಾದಿನಿಯರು ಎಬ್ಬಿಸಲು ಹೋಗಿದ್ದಾರೆ. ತಾಯಿ ಮತ್ತು ಮಕ್ಕಳು ಪ್ರಜ್ಞಾಹೀನರಾಗಿ ಮಲಗಿದ್ದನ್ನು ಕಂಡು, ತಕ್ಷಣ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಅಸ್ವಸ್ಥಳಾಗಿದ್ದ ಮೇಘನಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾಳೆ. ಲಕ್ಷ್ಮಿ ಹಾಗೂ ಪುತ್ರಿಯರಾದ ಸಿಂಚನಾ, ಸ್ಫೂರ್ತಿ ಚೇತರಿಸಿಕೊಂಡಿದ್ದಾರೆ.
ಲಕ್ಷ್ಮಿ ಅವರ ಪತಿ ಜಯರಾಂ ವರ್ಷದ ಹಿಂದೆ ನಿಧನರಾಗಿದ್ದು, ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೇಘನಾ ಸಾವಿನಿಂದಾಗಿ ಬೀದಿಯಲ್ಲಿ ಮೌನ ಆವರಿಸಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.