ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತ ಭಕ್ತರಿಂದ ಪಾದುಕೆ ದರ್ಶನ

ಶ್ರೀರಾಮಸೇನೆ ದತ್ತಮಾಲಾ ಅಭಿಯಾನ: ಶೋಭಾಯಾತ್ರೆ
Last Updated 28 ಅಕ್ಟೋಬರ್ 2018, 20:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಜರುಗಿದ 13ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಶೋಭಾಯಾತ್ರೆ ನಡೆಯಿತು.

ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದ ಬಳಿಯಿಂದ ಬೆಳಿಗ್ಗೆ 11 ಗಂಟೆಗೆ ಶೋಭಾಯಾತ್ರೆ ಶುರುವಾಯಿತು. ಹನುಮಂತಪ್ಪ ವೃತ್ತ, ಎಂ.ಜಿ ರಸ್ತೆ ಮೂಲಕ ಹಾದು ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಸಮಾಪನಗೊಂಡಿತು. ಭಕ್ತರು ಗುರುದತ್ತಾತ್ರೇಯರ ಉತ್ಸವಮೂರ್ತಿಯನ್ನು ಅಡ್ಡೆಯಲ್ಲಿ ಹೊತ್ತು ಸಾಗಿದರು.

ಮಾಲಾಧಾರಿಗಳು, ಭಕ್ತರು ಭಜನೆ ಮೂಲಕ ಗುರುದತ್ತಾತ್ರೇಯರ ಜಪ ಮಾಡಿದರು. ಪಟಾಕಿ ಸಿಡಿತ, ದತ್ತಸ್ತೋತ್ರಗಳ ಪಠಣ, ಭಗವಧ್ವಜಗಳ ಹಾರಾಟ ಮೆರವಣಿಗೆಗೆ ರಂಗು ನೀಡಿತ್ತು. ಪೊಲೀಸ್‌ ಸರ್ಪಗಾವಲು ನಿಯೋಜಿಸಲಾಗಿತ್ತು.

ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಧಾರ್ಮಿಕ ಸಭೆ ನಂತರ ಮಾಲಾಧಾರಿಗಳು, ಭಕ್ತರು ಗಿರಿಗೆ ತೆರಳಿದರು. ಮಾಲಾಧಾರಿಗಳು, ನಾಗಸಾಧು, ದತ ಭಕ್ತರು ಇನಾಂ ದತ್ತ (ಐ.ಡಿ) ಪೀಠದ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿರುವ ದತ್ತಾತ್ರೇಯಸ್ವಾಮಿ ಪಾದುಕೆ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.

ದತ್ತಪೀಠದ ಬಳಿಯ ಸಭಾ ಮಂಟಪದಲ್ಲಿ ಸತ್ಯದತ್ತ ವ್ರತ, ಗಣಪತಿಹೋಮ, ಪುರ್ಣಾಹುತಿ ಕೈಂಕರ್ಯ ಜರುಗಿದವು. ಪ್ರವಾಸಿಗರಿಗೆ ಗಿರಿಶ್ರೇಣಿಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ವಿಧಿಸಿತ್ತು.

‘ಶ್ರೀರಾಮಸೇನೆಯಿಂದ ‘ಬೆಳಗಾವಿ ಚಲೋ’ಗೆ ನಿರ್ಣಯ’

ಚಿಕ್ಕಮಗಳೂರು: ‘ದತ್ತಪೀಠ ಮುಕ್ತಿಗಾಗಿ ಸರ್ಕಾರಕ್ಕೆ ಒತ್ತಡ ಹೇರಲು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಕೈಗೊಂಡು, ಅಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಣಯಿಸಲಾಗಿದೆ’ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ದತ್ತಮಾಲಾ ಅಭಿಯಾನದ ಅಂಗವಾಗಿ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ‘ರಾಜ್ಯದ ಎಲ್ಲ ಜಿಲ್ಲೆಗಳಿಂದ ಶ್ರೀರಾಮಸೇನೆ ಕಾರ್ಯಕರ್ತರು ‘ಬೆಳಗಾವಿ ಚಲೋ’ದಲ್ಲಿ ಪಾಲ್ಗೊಳ್ಳುವರು. ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು’ ಎಂದರು.

‘ಬಿಜೆಪಿಗಿಂತ ಹೆಚ್ಚು ಹಿಂದುತ್ವ ತಮ್ಮಲ್ಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈಚೆಗೆ ಹೇಳಿದ್ದಾರೆ. ಹೇಳಿಕೆ ಪರೀಕ್ಷಿಸಲು ಚಲೋ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

‘ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಇತ್ಯರ್ಥ ಮಾದರಿಯಲ್ಲಿ ಪರಿಹರಿಸಿ’

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮಾತನಾಡಿ, ‘ಎಚ್‌.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯ ಈದ್ಗಾ– ಕಿತ್ತೂರು ರಾಣಿ ಚೆನ್ನಮ್ಮ ಮೈದಾನದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದರು. ಅವರ ಪುತ್ರ ಈಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದತ್ತಪೀಠದ ಸಮಸ್ಯೆಯನ್ನು ಅದೇ ರೀತಿ ಪರಿಹರಿಸಬೇಕು’ ಎಂದು ಮನವಿ ಮಾಡಿದರು.

‘ನಾಗೇನಹಳ್ಳಿಯಲ್ಲಿ ಬಾಬಾಬುಡನ್‌ ದರ್ಗಾ ಇದ್ದು ಅದನ್ನು ಮುಸ್ಲಿಮರಿಗೆ ಒಪ್ಪಿಸಿ, ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ವಿವಾದವನ್ನು ಶಾಂತಿ, ಸೌಹಾರ್ದಯುತವಾಗಿ ಬಗೆಹರಿಸಬೇಕು’ ಎಂದರು.

‘ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಹೋರಾಟಕ್ಕೆ ಶ್ರೀರಾಮಸೇನೆ ಬೆಂಬಲ ಇದೆ. ಕೇರಳದಲ್ಲಿ ಕಮ್ಯುನಿಸ್ಟ್‌ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT