ಎನ್‍ಡಿಆರ್‌ಎಫ್ ಕಾರ್ಯಾಚರಣೆಯೂ ವಿಫಲ

7

ಎನ್‍ಡಿಆರ್‌ಎಫ್ ಕಾರ್ಯಾಚರಣೆಯೂ ವಿಫಲ

Published:
Updated:
Deccan Herald

ಕಳಸ: 10 ದಿನಗಳ ಹಿಂದೆ ಭದ್ರಾ ನದಿಗೆ ಬಿದ್ದು ಕಾಣೆಯಾಗಿದ್ದ ಮಂಗಳೂರು ಮೂಲದ ಯುವಕನ ಪತ್ತೆಗೆ ಬಂದಿದ್ದ ಎನ್‍ಡಿಆರ್‌ಎಫ್ ತಂಡ ಭಾನುವಾರ ಬರಿಗೈಯಲ್ಲಿ ವಾಪಸ್ ತೆರಳಿತು.

ಜುಲೈ 26ರಂದು ಅಂಬಾತೀರ್ಥದ ಭದ್ರಾ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಮಂಗಳೂರಿನ ತುಂಬೆಯ ಕಿರಣ್ ಕೋಟ್ಯಾನ್ ಅವರ ದೇಹಪತ್ತೆಗೆ 10 ದಿನಗಳಿಂದ ಅತ್ಯಂತ ಪರಿಶ್ರಮದಿಂದ ಹಲವಾರು ಬಗೆಯಲ್ಲಿ ಶೋಧ ನಡೆಸಲಾಗಿತ್ತು. ಪೊಲೀಸರಂತೂ ಕಿರಣ್ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆದರೆ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಮೊರೆ ಹೋಗಲಾಗಿತ್ತು.

ಶನಿವಾರ ಸಂಜೆ ಕಳಸಕ್ಕೆ ಬಂದ 30 ಜನರ ಎನ್‍ಡಿಆರ್‍ಎಫ್ ತಂಡವು ಅಂಬಾತೀರ್ಥದಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಮೂರು ದೋಣಿಗಳು ಮತ್ತು ಅಪಾರ ಸಲಕರಣೆಗಳ ಸಹಾಯದಿಂದ ಆರಂಭಗೊಂಡಿದ್ದ ಶೋಧದ ಬಗ್ಗೆ ವಿಪರೀತ ನಿರೀಕ್ಷೆ ಇತ್ತು.

ಆದರೆ, ಭಾನುವಾರ ಈ ತಂಡ ನಡೆಸಿದ ಕಾರ್ಯಾಚರಣೆಯು ಸ್ಥಳೀಯರನ್ನು ಕೆರಳಿಸಿತು. ‘ನದಿಯಲ್ಲಿ ದೋಣಿಗಳನ್ನು ಬಳಸಿ ಮುಂದಕ್ಕೆ ಸಾಗುತ್ತಿದ್ದ ತಂಡ ನೀರಿನ ಆಳಕ್ಕೆ ಇಳಿಯದೆ ಕಾರ್ಯಾಚರಣೆ ನಡೆಸುತ್ತಿದೆ. ಇವರಿಗಿಂತ ಸ್ಥಳಿಯ ಈಜುಗಾರರೇ ನಿಪುಣರು’ ಎಂದು ಭಾನುವಾರ ಬೆಳಗ್ಗಿನಿಂದಲೇ ದೂರುಗಳು ಕೇಳಿಬಂದವು.

‘ಹಳುವಳ್ಳಿಯವರೆಗೆ ದೋಣಿಯಲ್ಲೇ ಸಾಗಿದ ತಂಡ ನದಿಯ ಮೂಲೆ ಮೂಲೆಗೂ ತಲುಪಲಿಲ್ಲ. ನಾಮಕಾವಸ್ಥೆಗೆ ಕಾರ್ಯಾಚರಣೆ ನಡೆಸಿದ ತಂಡ ನದಿಯಲ್ಲಿ ಕಲ್ಲುಬಂಡೆಗಳು ಇರುವುದರಿಂದ ದೋಣಿಗೆ ಹಾನಿ ಆಗುತ್ತದೆ ಎಂಬ ನೆಪದಿಂದ ತಂಡವು ಸಮರ್ಪಕ ಶೋಧ ನಡೆಸಲಿಲ್ಲ’ ಎಂದು ಕಂದಾಯ ಇಲಾಖೆ ಸಿಬ್ಬಂದಿಯೇ ದೂರುವಂತಾಗಿತ್ತು.

ಸ್ಥಳೀಯರ ಅಸಮಾಧಾನದ ನಂತರ ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಭಾನುವಾರ ಸಂಜೆಯವರೆಗೆ ಶೋಧ ನಡೆಸಿ ಈ ಕಾರ್ಯಾಚರಣೆ ಕೈಬಿಡುವಂತೆ ಸೂಚನೆ ಸಿಕ್ಕಿತು. ಇದರಿಂದಾಗಿ ಕಿರಣ್ ಕೋಟ್ಯಾನ್ ಶವದ ಪತ್ತೆ ಕಾರ್ಯ ಬಹುತೇಕ ಸ್ಥಗಿತಗೊಂಡಂತಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !