ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಪಠ್ಯ ಪುಸ್ತಕ ವಿತರಣೆಗೆ ಆಗ್ರಹ

ಮಲೆನಾಡು ಜನಪರ ಒಕ್ಕೂಟ, ವಿಶ್ವಮಾನವ ಸಂದೇಶ ವೇದಿಕೆ ಆಗ್ರಹ
Last Updated 5 ಜುಲೈ 2022, 5:06 IST
ಅಕ್ಷರ ಗಾತ್ರ

ಕೊಪ್ಪ: ಪರಿಷ್ಕೃತ ಪಠ್ಯ ಪುಸ್ತಕವನ್ನು ಹಿಂಪಡೆದು ಹಳೆಯ ಪಠ್ಯ ಪುಸ್ತಕಗಳನ್ನೇ ಕೊಡಬೇಕು ಎಂದು ಒತ್ತಾಯಿಸಿ ‘ಪಠ್ಯ ಪುಸ್ತಕವೋ… ಪಕ್ಷ ಪುಸ್ತಕವೋ?’ ಎಂಬ ವಿಷಯದ ಬಗ್ಗೆ ಮಲೆನಾಡು ಜನಪರ ಒಕ್ಕೂಟ, ವಿಶ್ವಮಾನವ ಸಂದೇಶ ವೇದಿಕೆ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಏಳು ಪ್ರಮುಖ ನಿರ್ಣಯಗಳನ್ನು ಸ್ವೀಕರಿಸಲಾಯಿತು.

ನಿರ್ಣಯಗಳು: ‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆಸಿದ ಪಠ್ಯ ಪರಿಷ್ಕರಣೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಮಾರಕವಾಗಿದೆ. ಶೈಕ್ಷಣಿಕ ಮೌಲ್ಯಗಳನ್ನು ಗಾಳಿಗೆ ತೂರಿ ಒಂದು ರಾಜಕೀಯ ಸಿದ್ಧಾಂತ ಮತ್ತು ಪಕ್ಷದ ಓಲೈಕೆಗಾಗಿ ಈ ಪರಿಷ್ಕರಣೆ ಮಾಡಲಾಗಿದೆ.

ಬಹುತ್ವ ಸಂಸ್ಕೃತಿಯುನ್ನು ಬಿಂಬಿಸುವ ಪಠ್ಯಗಳನ್ನು ಕಿತ್ತುಹಾಕುವ, ಬದಲಿಸುವ, ತಿರುಚುವ ಕೆಲಸವನ್ನು ಈ ಪಠ್ಯ ಪರಿಷ್ಕರಣಾ ಸಮಿತಿ ಮಾಡಿದೆ. ಒಂದೇ ಸಮುದಾಯದ ಅದರಲ್ಲೂ ಒಂದೇ ರಾಜಕೀಯ ಸಿದ್ಧಾಂತದ ಬೆಂಬಲಿಗರನ್ನು ಪಠ್ಯ ಪರಿಷ್ಕರಣೆಗೆ ಅಪ್ರಜಾತಾಂತ್ರಿಕವಾಗಿ ನೇಮಿಸಲಾಗಿದ್ದು, ಅದರಿಂದಾಗಿ ಪಠ್ಯ ಪರಿಷ್ಕರಣೆಯಲ್ಲಿ ನೂರಾರು ದೋಷಗಳು, ಪೂರ್ವಗ್ರಹಗಳು ತುಂಬಿಕೊಂಡಿವೆ.

ಕುವೆಂಪು, ಬಸವಣ್ಣ, ಅಕ್ಕಮಹಾದೇವಿ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಣಿ ಅಬ್ಬಕ್ಕ ಮೊದಲಾದ ಮಹಾಚೇತನಗಳನ್ನು ಅಪಮಾನಿಸಲಾಗಿದೆ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ನಾರಾಯಣಗುರು, ಶಂಕರಾಚಾರ್ಯರು, ಪೆರಿಯಾರ್, ಕಬೀರರು ಮೊದಲಾದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರನ್ನು ಅಪಮಾನಿಸಲಾಗಿದೆ. ದೇಶದ ಚರಿತ್ರೆಯನ್ನು ರಾಜಕೀಯ ಸಿದ್ಧಾಂತದ ಪೂರ್ವಗ್ರಹಗಳ ಮೂಲಕ ಕಟ್ಟಿಕೊಡಲಾಗಿದೆ.

ಕನ್ನಡ ನಾಡಿನ ಸಮಸ್ತ ಜನರ ಹಿತಕ್ಕೆ ವಿರುದ್ಧವಾಗಿದ್ದು, ಕೆಲವರ ಹಿತಾಸಕ್ತಿಗಾಗಿ ಮಕ್ಕಳ ಬೌದ್ಧಿಕ, ಶೈಕ್ಷಣಿಕ ಬೆಳವಣಿಗೆಗೆ ಮಾರಕವಾದ ರೀತಿಯಲ್ಲಿ ನಡೆಸಲಾಗಿರುವ ಈ ಪರಿಷ್ಕರಣೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಈ ಕೂಡಲೇ ಸರ್ಕಾರ ಪರಿಷ್ಕರಿಸಿ, ವಿತರಿಸಿದ ಪಠ್ಯಗಳನ್ನು ಹಿಂಪಡೆದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹಳೆಯ ಪಠ್ಯಪುಸ್ತಕಗಳನ್ನು ಆದಷ್ಟು ತ್ವರಿತವಾಗಿ ವಿತರಿಸಬೇಕು. ಈ ಬಗ್ಗೆ ಜನಜಾಗೃತಿಯನ್ನು ಸಭೆಗಳ ಮೂಲಕ ಮಲೆನಾಡಿನ ಜನಕ್ಕೆ ಮುಟ್ಟಿಸಬೇಕು’.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರ ಸಾಹಿತಿ ಕವಿರಾಜ್, ಸಾಮಾಜಿಕ ಹೋರಾಟಗಾರ ಹರ್ಷಕುಮಾರ್ ಕುಗ್ವೆ, ಚಿಂತಕ ಎಚ್.ಟಿ.ರಾಜೇಂದ್ರ, ಗೋಕರ್ಣನಾಥ ಟ್ರಸ್ಟ್‌ನ ಟ್ರಸ್ಟಿ ಪದ್ಮರಾಜ್, ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ರೈತ ಸಂಘದ ನವೀನ್ ಕರುವಾನೆ, ಎಚ್.ಎಂ.ಸತೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT