ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ: ಎಚ್ಚರಿಕೆ

7

ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ: ಎಚ್ಚರಿಕೆ

Published:
Updated:
Deccan Herald

ಚಿಕ್ಕಮಗಳೂರು: ಎರಡು ತಿಂಗಳಿನಿಂದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಭಾಗದ ಕಾಫಿ ಬೆಳೆಗಾರರು ಅತಿವೃಷ್ಟಿಗೆ ಸಿಲುಕಿದ್ದಾರೆ. ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಕ್ರಮ ವಹಿಸದಿದ್ದರೆ ಜನಪ್ರತಿನಿಧಿಗಳು ಮತ್ತು ಕಾಫಿ ಮಂಡಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಅಧ್ಯಕ್ಷ ಬಿ.ಎಸ್‌.ಜೈರಾಂ, ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್ ಎಚ್ಚರಿಸಿದ್ದಾರೆ.

ಅತೀವ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಅಡಿಕೆ, ಶುಂಠಿ, ಭತ್ತ, ಏಲಕ್ಕಿ, ಇತರ ಎಲ್ಲ ಬೆಳೆಗಳು ನಾಶವಾಗಿವೆ. ಕಾಫಿ ಗಿಡಗಳೂ ಎಲೆ ಉದುರಿ ಕೊಳೆಯುತ್ತಿವೆ. ಶೇ 80ರಷ್ಟು ಕಾಫಿ ಫಸಲು ನೆಲಕಚ್ಚಿದೆ. ಕಾಳುಮೆಣಸು ಬೆಳೆಯಲ್ಲಿ ಸೊರಗು ರೋಗ ಕಾಣಿಸಿದೆ. ಜೊತೆಗೆ ಮೆಣಸು ಗರಿಗಳು ಉದುರುತ್ತಿವೆ ಎಂದು ತಿಳಿಸಿದ್ದಾರೆ.

ಮೂರು ಜಿಲ್ಲೆಯಿಂದ ಅತಿವೃಷ್ಟಿಗೆ ಸುಮಾರು ₹ 160 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಸ್ಥಳ ಪರಿಶೀಲಿಸಿ ಬೆಳೆಗಾರರು, ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಹಾರ ರೂಪಿಸಬೇಕು. ಇಲ್ಲದಿದ್ದ ಕಾಫಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಒಗ್ಗೂಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

15 ಲಕ್ಷ ಕುಟುಂಬಗಳಿಗೆ ಆಸರೆಯಾಗಿಉವ ಕಾಫಿ ಉಧ್ಯಮಕ್ಕೆ ಪೆಟ್ಟು ಬಿದ್ದರೆ, ಸಮಸ್ಯೆಯಾಗುವುದರಲ್ಲಿ ಸಂದೇಹ ಇಲ್ಲ. 23 ವರ್ಷಗಳ ಹಿಂದೆ ಅರೇಬಿಕಾ ಕಾಫಿ ಬೆಲೆ 50 ಕೆ.ಜಿ.ಗೆ ₹ 8,000 ಇತ್ತು. ಪ್ರಸ್ತುತ ₹ 6,250 ಬೆಲೆ ಇದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಬಗ್ಗ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದ್ದರೂ ಗಮನ ಹರಿಸುತ್ತಿಲ್ಲ. ಕಾಫಿ ಮಂಡಳಿ ನಿಷ್ಕ್ರಿಯವಾಗಿದೆ ಎಂದು ದೂಷಿಸಿದ್ದಾರೆ.

2017-18 ನೇ ಸಾಲಿನಲ್ಲಿ ಕಾಫಿ ರಫ್ತಿನಿಂದ ವಿದೇಶಿ ವಿನಿಮಯ ಬಾಬ್ತಿನಲ್ಲಿ ಕೇಂದ್ರ ಸರ್ಕಾರಕ್ಕೆ 3,882 ಕೋಟಿ ಸಂದಾಯವಾಗಿದೆ.ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಅಂತಾರಾಷ್ಟ್ರೀಯಮಟ್ಟದಲ್ಲಿ ಕಾಫಿ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ಅಧ್ಯಯನ ನಡೆಸಿ, ಬೆಳೆಗಾರರಿಗೆ ಮಾಹಿತಿ ನೀಡಬೇಕು.

ಬೀಜ- ಬೆಳೆಯವರೆಗಿನ ವಿಮೆ ಚಾಲ್ತಿಗೆ ತರಬೇಕು. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ₹ 3 ಲಕ್ಷ ದವರೆಗೆ, ₹ 3 ಲಕ್ಷದಿಂದ 10 ಲಕ್ಷದವರೆಗೆ ಶೇ 3 ಬಡ್ಡಿದರದಲ್ಲಿ ಸಾಲ ಸೌಲಭ್ಯನೀಡಬೇಕು. ಬೆಳೆ ನಾಶವಾಗಿರುವುದರಿಂದ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆಗಾರರು ಪಡೆದಿರುವ ಸಾಲಮನ್ನಾ ಮಾಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !