ಯಗಚಿ ಹೊಳೆಯ ಇಕ್ಕೆಲಗಳಲ್ಲಿ ಸರ್ಕಾರಿ ಜಾಗ ಒತ್ತುವರಿ; ತೆರವಿಗೆ ಒತ್ತಾಯ

7

ಯಗಚಿ ಹೊಳೆಯ ಇಕ್ಕೆಲಗಳಲ್ಲಿ ಸರ್ಕಾರಿ ಜಾಗ ಒತ್ತುವರಿ; ತೆರವಿಗೆ ಒತ್ತಾಯ

Published:
Updated:
Deccan Herald

ಚಿಕ್ಕಮಗಳೂರು: ಅಯ್ಯಪ್ಪ ನಗರ ಬಡಾವಣೆಯಲ್ಲಿ ಯಗಚಿ ಹೊಳೆಯ ಇಕ್ಕೆಲಗಳಲ್ಲಿ ಖಾಸಗಿಯವರು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆಂಬ ದೂರುಗಳಿದ್ದು, ಈ ಜಾಗವನ್ನು ಸರ್ವೆ ಮಾಡಿಸಿ ಒತ್ತುವರಿಯಾಗಿದ್ದರೆ ಖುಲ್ಲಾಗೊಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಸಿ.ಟಿ.ರವಿ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಯಗಚಿ ಹೊಳೆಯು ಅಲ್ಲಂಪುರ, ರಾಮನಹಳ್ಳಿ, ಉಪ್ಪಳ್ಳಿ, ಚಿಕ್ಕಮಗಳೂರು, ತೇಗೂರು ಮಾರ್ಗವಾಗಿ ಹಾದು ಹೋಗುತ್ತದೆ. ನಗರದಲ್ಲಿ ಬಡಾವಣೆ ನಿರ್ಮಾಣ ಹಂತದಲ್ಲಿ ಈ ಹೊಳೆ ಬದಿಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಯಗಚಿ ನದಿ ಸರ್ವೆ ಕಾರ್ಯ ನಡೆಯುತ್ತಿದ್ದು, ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ನಗರದಲ್ಲಿ ಸರ್ಕಾರಿ ಆಸ್ತಿ ಒತ್ತುವರಿ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೆ. ನಗರದ ಮಲ್ಲಂದೂರು ರಸ್ತೆಯ ಪೆಟ್ರೋಲ್‌ ಬಂಕ್‌ ಹಿಂಭಾಗದ ಖರಾಬು ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಪತ್ರ ಬರೆದಿದ್ದೆ. ಆ ಜಾಗವನ್ನು ಸರ್ವೆ ಮಾಡಿ, ಅಲ್ಲಿ 1.3 ಎಕರೆ ಸರ್ಕಾರಿ ಜಾಗ ಇದೆ ಎಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ ನಿರ್ಮಿಸಿಕೊಂಡಿರುವವರನ್ನು ತೆರವುಗೊಳಿಸಿಲ್ಲ. ನಗರದಲ್ಲಿನ ಖರಾಬು ಜಾಗವನ್ನು ಗುರುತಿಸುವ ಮತ್ತು ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮಗಳಿಗೆ ನೀರು ಪೂರೈಸಿದ್ದಕ್ಕೆ ಟ್ಯಾಂಕರ್‌ನವರಿಗೆ ಬಾಡಿಗೆ ಬಾಕಿ ಇನ್ನು ಪಾವತಿಯಾಗಿಲ್ಲ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ₹ 40 ಲಕ್ಷ, ಕಡೂರು ತಾಲ್ಲೂಕಿನಲ್ಲಿ ₹ 2.79 ಕೋಟಿ ಹಾಗೂ ತರೀಕೆರೆ ತಾಲ್ಲೂಕಿನಲ್ಲಿ ₹ 1.14 ಕೋಟಿ ಒಟ್ಟು ₹ 4.34 ಕೋಟಿ ಬಾಕಿ ಇದೆ. ಬಾಕಿ ಪಾವತಿಸಲು ಈವರೆಗೆ ಅನುದಾನ ಬಿಡುಗಡೆ ಮಾಡದಿರುವುದು ದುರದೃಷ್ಟಕರ ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಆಯೋಗದ ಅನುದಾನ ಬಹುತೇಕ ಖರ್ಚಾಗಿದೆ. ಟ್ಯಾಂಕರ್‌ ಬಾಡಿಗೆ ಪಾವತಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಬಾರಿಗಿಂತ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಮೂರು ಮಹಾನಗರ ಪಾಲಿಕೆ ಪೈಕಿ ಒಂದನ್ನು ತೆಕ್ಕೆಗೆ ತೆಗೆದುಕೊಂಡಿದೆ. 12 ನಗರಸಭೆಗಳಲ್ಲಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್ ಎರಡೂ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಪಡೆದಿವೆ. ಕಡಿಮೆ ಸ್ಥಾನ ಲಭಿಸಿದರೂ ತನ್ನ ಬೆನ್ನುತಟ್ಟಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ ಎಂದು ಕುಹಕವಾಡಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಒಟ್ಟಾಗುತ್ತೇವೆ ಎಂದು ಹೇಳುವುದು ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳ ದೌರ್ಬಲ್ಯ. ಈ ದೌರ್ಬಲ್ಯವನ್ನು ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಅಪಹಾಸ್ಯ ಎಂದು ಕುಟುಕಿದರು.

ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್‌, ನೆಟ್ಟೆಕೆರೆಹಳ್ಳಿ ಜಯಣ್ಣ, ರಮೇಶ್‌ ಇದ್ದರು. 

ದಾಖಲೆ ಪರಿಶೀಲನೆಗೆ ನಗರಸಭೆ ಆಯುಕ್ತರಿಗೆ ಸೂಚನೆ

ಅಯ್ಯಪ್ಪನಗರದ ಯಗಚಿ ಹೊಳೆ ಬದಿಯಲ್ಲಿ ಒತ್ತುವರಿ ನಡೆದಿದೆ ಎನ್ನಲಾದ ಪ್ರದೇಶದಲ್ಲಿ ಮನೆಗಳವರ ಮೂಲ ದಾಖಲೆಗಳನ್ನು ಪರಿಶೀಲಿಸುವಂತೆ ನಗರಸಭೆ ಆಯುಕ್ತೆ ಎಂ.ವಿ.ತುಷಾರಮಣಿ ಅವರಿಗೆ ಶಾಸಕ ಸಿ.ಟಿ.ರವಿ ಸೂಚನೆ ನೀಡಿದರು.

ಅಯ್ಯಪ್ಪ ನಗರದಲ್ಲಿ ಯಗಚಿ ಹೊಳೆ ಬದಿಯ ಜಾಗವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ‘ಮಲ್ಲಂದೂರು ರಸ್ತೆಯ ಪೆಟ್ರೋಲ್‌ ಬಂಕ್‌ ಹಿಂಭಾಗದಲ್ಲಿ ಕೆಲವರು ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬ ದೂರುಗಳು ಇವೆ. ಅಯ್ಯಪ್ಪನಗರ ಯಗಚಿ ಹೊಳೆ ಬದಿಯ ಖಾಲಿ ನಿವೇಶನ, ಮನೆಗಳವರ ದಾಖಲೆ ಪರಿಶೀಲಿಸುವಂತೆ ಆಯಕ್ತರಿಗೆ ಸೂಚನೆ ನೀಡಿದ್ದೇನೆ. ಅಕ್ರಮವಾಗಿ ಖಾತೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಬಡಾವಣೆಯ ನಕ್ಷೆಯನ್ನು ಪರಿಶೀಲಿಸಲಾಗುವುದು ಎಂದರು.

15 ದಿನದೊಳಗೆ ದಾಖಲೆ ಪರಿಶೀಲನೆ ನಡೆಯಲಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುತ್ತೇನೆ. ಪರಿಶೀಲನೆಗೆ ತಂಡ ರಚಿಸಬೇಕು ಎಂದು ತಿಳಿಸುತ್ತೇನೆ. ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರುತ್ತೇನೆ ಎಂದು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !