ಕಳಸ: ದೇವರಗುಡ್ಡ, ಬಿಳುಗೋಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಬೇಕು ಎಂದು ಒತ್ತಾಯಿಸಿ ಅಲ್ಲಿನ ಗ್ರಾಮಸ್ಥರು ಶುಕ್ರವಾರ ಗ್ರಾಮದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ವಾರ ಗ್ರಾಮ ಪಂಚಾಯಿತಿ ವತಿಯಿಂದ ಈ ರಸ್ತೆಗೆ ಮಣ್ಣು ಸುರಿದು ದುರಸ್ತಿ ಕಾರ್ಯ ನಡೆಸಲಾಗಿತ್ತು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದರು. ಆದರೆ, ಕಾಂಕ್ರೀಟ್ ಕಾಮಗಾರಿ ನಡೆಸದ ಕಾರಣ, ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ರಸ್ತೆಯಲ್ಲಿ ಜಮಾಯಿಸಿದರು.ಈ ರಸ್ತೆಗೆ ಹಿಂದಿನ ಶಾಸಕರು ₹75 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಕಾಂಕ್ರೀಟ್ ಹಾಕುವ ಬದಲು ರಸ್ತೆಗೆ ಮಣ್ಣು ಸುರಿದಿದ್ದಾರೆ.ಈಗ ರಸ್ತೆ ಬಳಕೆಗೆ ಯೋಗ್ಯವಾಗಿಲ್ಲ. ವಿದ್ಯಾರ್ಥಿಗಳು ಮತ್ತು ವೃದ್ಧರಿಗೆ ತೊಂದರೆ ಆಗಿದೆ ಎಂದು ದೂರಿದರು.
ಈ ರಸ್ತೆಗೆ ಮಂಜೂರಾದ ಕಾಂಕ್ರೀಟ್ ಕಾಮಗಾರಿ ಬೇರೆಡೆಗೆ ವರ್ಗಾಯಿಸುವ ಹುನ್ನಾರ ನಡೆದಿದೆ. ನಾವು ಸತತ ಧರಣಿ ನಡೆಸುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಕಳಸ ಠಾಣಾಧಿಕಾರಿ ನಿತ್ಯಾನಂದ, ‘ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುತ್ತೇನೆ. ಧರಣಿ ಕೈಬಿಡಿ ಎಂದು ಮನವೊಲಿಸುವ ಯತ್ನ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಮತ್ತು ಸದಸ್ಯ ಕಾರ್ತಿಕ್ ಶಾಸ್ತ್ರಿ ಕೂಡ ಸ್ಥಳಕ್ಕೆ ಬಂದರು. ಈ ರಸ್ತೆಗೆ ಮಂಜೂರಾಗಿರುವ ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡದಂತೆ ಶಾಸಕರಿಗೆ ಮನವಿ ಮಾಡುತ್ತೇವೆ. ಕೂಡಲೇ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟವರ ಮೇಲೆ ಒತ್ತಡ ತರುತ್ತೇವೆ ಎಂದರು. ಆನಂತರ ಸ್ಥಳೀಯರು ಧರಣಿ ಕೈಬಿಟ್ಟರು.
ಗ್ರಾಮಸ್ಥರಾದ ಅಶೋಕ್, ರಾಘವೇಂದ್ರ, ವಿನ್ಸಿ, ಸೌಜನ್ಯಾ, ಗಣೇಶ್, ರಜಿನಿ, ಕವಿತಾ, ಸುಶೀಲಾ, ಅಭಿಷೇಕ್, ಬೆಳ್ಳಯ್ಯ, ಭರತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.