ಮೂಡಿಗೆರೆ: ಮೂಲ ಸೌಕರ್ಯ ಒದಗಿಸಲು ಸೂಚನೆ

ಮೂಡಿಗೆರೆ: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯ ಮೂಲಕ ಧರ್ಮಸ್ಥಕ್ಕೆ ಪಾದಯಾತ್ರಿಗಳು ತೆರಳುವ ಮಾರ್ಗದಲ್ಲಿ ಸೂಕ್ತ ಮೂಲ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಹೇಳಿದರು.
ಧರ್ಮಸ್ಥಳ ಪಾದಯಾತ್ರಿಗಳಿಗೆ ಸವಲತ್ತು ಕಲ್ಪಿಸುವ ಕುರಿತು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕೊಟ್ಟಿಗೆಹಾರ ಗೆಳೆಯರ ಬಳಗದ ಪದಾಧಿಕಾರಿ ಸಂಜಯ್ ಕೊಟ್ಟಿಗೆಹಾರ ಮಾತನಾಡಿ, ‘ಕಳೆದ ವರ್ಷ ತಾಲ್ಲೂಕಿನ ಗೋಣಿಬೀಡಿನಿಂದ ಚಾರ್ಮಾಡಿ ಘಾಟಿಯವರೆಗೆ ಪ್ಲಾಸ್ಟಿಕ್ ಬಾಟಲಿ ಎಸೆಯುವುದು, ಮಲಮೂತ್ರ ವಿಸರ್ಜನೆ, ಅಲ್ಲಲ್ಲಿ ತೆರೆದಿದ್ದ ಸೇವಾ ಕೇಂದ್ರಗಳಲ್ಲಿ ಉಳಿದ ಆಹಾರ ಪದಾರ್ಥ ಎಲ್ಲೆಂದರಲ್ಲಿ ಎಸೆದಿದ್ದರಿಂದ ರಸ್ತೆಯ ಎರಡೂ ಬದಿ ತ್ಯಾಜ್ಯಗಳ ತಾಣವಾಗಿ ಪರಿಣಮಿಸಿತ್ತು. ಕೆಟ್ಟ ಆಹಾರ ತಿಂದ ಅನೇಕ ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದವು. ಇಂತಹ ಘಟನೆ ಮರುಕಳಿಸದಂತೆ ತಯಾರಿ ನಡೆಸುವುದು ಸೂಕ್ತ’ ಎಂದರು.
ನಂತರ ಮಾತನಾಡಿದ ಜಿ. ಪ್ರಭು ಅವರು, ‘ಗೋಣಿಬೀಡಿನಿಂದ ಚಾರ್ಮಾಡಿ ಘಾಟಿಯವರೆಗೆ ಸ್ವಚ್ಛತೆ ಕಾಪಾಡಲು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ನಿಗಾ ವಹಿಸಬೇಕು. ಅರ್ಧ ಕಿ.ಮೀ .ಗೆ ಒಂದು ಕಸದ ತೊಟ್ಟಿ ಇಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. 2 ಕಿ.ಮೀ.ಗೆ ಒಂದು ಕಸ ವಿಲೇವಾರಿ ವಾಹನ ತಿರುಗಾಡಬೇಕು. ಮಲ ಮೂತ್ರ ವಿಸರ್ಜಿಸಲು ಪ್ರತಿ 5 ಕಿ.ಮೀ. ತಾತ್ಕಾಲಿಕ ಶೌಚಾಲಯ, 6 ಕಡೆ ಆರೋಗ್ಯ ತಪಾಸಣೆ ಶಿಬಿರಗಳನ್ನು ತೆರೆಯಬೇಕು, ಪಾದಯಾತ್ರಿಗಳಿಗೆ ನೀಡುವ ಸೇವಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಬೇಕು. ಪೊಲೀಸ್ ವಾಹನ ನಿರಂತರವಾಗಿ ಗಸ್ತು ತಿರುಗಬೇಕು. ಪಾದಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಡಬೇಕು. ನಿಯಮ ಪಾಲಿಸದ ಪಾದಯಾತ್ರಿಗಳಿಗೆ ದಂಡ ವಿಧಿಸಲು ಕೂಡ ಕ್ರಮ ಕೈಗೊಳ್ಳಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ. ಹರ್ಷಕುಮಾರ್, ಸಹಾಯಕ ನಿರ್ದೇಶಕ ಡಿ.ಡಿ ಪ್ರಕಾಶ್ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾದಯಾತ್ರಿಗಳು ಸಾಗುವ ಮಾರ್ಗದ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.