ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ ಘಟಕ: ಕೊರತೆ ಸರಮಾಲೆ

ಸಿಬ್ಬಂದಿ, ಪರಿಕರ, ಗುಣಮಟ್ಟದ ಔಷಧ ಕೊರತೆ
Last Updated 17 ಅಕ್ಟೋಬರ್ 2022, 5:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳದೆ ವಿಧಿ ಇಲ್ಲ. ಇಲ್ಲಿ ಗುಣಮಟ್ಟದ ಪರಿಕರ, ಔಷಧ ಇಲ್ಲ, ಗೋಳು ಕೇಳುವವರು ಇಲ್ಲ...’

ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿ ದಾಖಲಾಗಿದ್ದ ರೋಗಿ ಬಿಳೇಕಲ್ಲಹಳ್ಳಿಯ ಜ್ಞಾನೇಶ್‌ ನೋವಿನ ನುಡಿಗಳು ಇವು. ‘14 ವರ್ಷಗಳಿಂದ ಡಯಾಲಿಸಿಸ್‌ನೊಂದಿಗೆ ಬದುಕು ಸಾಗಿದೆ. ವಾರದಲ್ಲಿ ಮೂರು ಬಾರಿ ಮಾಡಿಸಬೇಕು. ಒಂದು ಬಾರಿ ಡಯಾಲಿಸಿಸ್‌ ನಾಲ್ಕು ಗಂಟೆ ಹಿಡಿಯುತ್ತದೆ. ಈ ಘಟಕದಲ್ಲಿ ಸ್ವಚ್ಛತೆ ಸಮಸ್ಯೆಯೂ ಇದೆ. ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ರೋಗಿಗಳು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. ಘಟಕದಲ್ಲಿನ ಬಹಳಷ್ಟು ಕೊರತೆಗಳು ಇವೆ ಎಂಬುದು ರೋಗಿಗಳು ದೂರು.

ಕೊಲ್ಕತ್ತಾದ ’ಸಂಜೀವಾಣಿ’ ಸಂಸ್ಥೆ ಈ ಘಟಕ ನಿರ್ವಹಿಸುತ್ತಿದೆ. ಘಟಕದಲ್ಲಿ ಯಂತ್ರಗಳ ನಿರ್ವಹಣೆ ಕೊರತೆ ಮೊದಲಾದ ಸಮಸ್ಯೆಗಳು ಇವೆ.

ಘಟಕದಲ್ಲಿ ಕುಡಿಯುವ ನೀರು ಪೂರೈಕೆ ಹಂತ್ರ ಹಾಳಾಗಿದೆ. ಘಟಕ ಇರುವ ಕಟ್ಟಡದ (ಹೊರಗೋಡೆ) ಸಿಮೆಂಟ್‌ ಐದಾರು ಕಡೆ ಕಿತ್ತಿದೆ. ಘಟಕದ ಮೂರು ಹಾಸಿಗೆಗಳು ಇವೆ. ಆದರೆ, ಒಳಗೆ ಸ್ವಚ್ಛತೆ ಸಮಸ್ಯೆ ಇದೆ.ಘಟಕದಲ್ಲಿ 11 ಸಿಬ್ಬಂದಿ ಇದ್ದಾರೆ. ಭವಿಷ್ಯ ನಿಧಿ (ಪಿಎಫ್‌), ಆರೋಗ್ಯ ವಿಮೆ (ಇಎಸ್ಐ) ಸೌಲಭ್ಯ ಕಲ್ಪಿಸಿಲ್ಲ, ವೇತನ ಹೆಚ್ಚಿಸಿಲ್ಲ, ತಡವಾಗಿ ಪಾವತಿಸುತ್ತಾರೆ ಎಂದು ಸಿಬ್ಬಂದಿ ದೂರುತ್ತಾರೆ.

ಯಂತ್ರ ‘ಸರ್ವಿಸ್‌’ ಸಮಸ್ಯೆ; ಕ್ಷಮತೆ ಕ್ಷೀಣ

ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಕೆಲವು ತೊಂದರೆಗಳಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ.

ತಾಲ್ಲೂಕಿನಲ್ಲಿ ಇದೊಂದೇ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇದೆ. ಘಟಕ ಆರಂಭವಾಗಿ ಐದು ವರ್ಷಗಳಾಗಿವೆ. ಎರಡು ‘ಡಯಲೈಸರ್‌’ ಯಂತ್ರಗಳು ಇವೆ. ಡಯಾಲಿಸಿಸ್‌’ಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಘಟಕದಲ್ಲಿ ಯಂತ್ರಗಳನ್ನು ಒಂದೂವರೆ ವರ್ಷದಿಂದ ಸರ್ವಿಸ್‌ ಮಾಡಿಸಿಲ್ಲ. ಯಂತ್ರದ ‘ಅಲಾರಂ’ ವ್ಯವಸ್ಥೆ ಸರಿ ಇಲ್ಲ. ಡಯಾಲಿಸಿಸ್‌ ಬಳಸುವ ‘ಟಿಡಿಎಸ್’( ಟೋಟಲ್ ಡಿಸಾಲ್ವೆಡ್ ಸಾಲ್ವೆಂಟ್ಸ್) ನೀರು ಸಮರ್ಪಕ ಪೂರೈಕೆ ಇಲ್ಲ ಎಂಬ ದೂರುಗಳು ಇವೆ.

ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕವು ಬಡವರಿಗೆ ಅನುಕೂಲಕರವಾಗಿದೆ. ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಿ ಉತ್ತಮ ಸೇವೆ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಹಾಳಾದ ಯಂತ್ರ; ದುರಸ್ತಿಗೆ ಮೀನಮೇಷ

ಕೊಪ್ಪ: ಪಟ್ಟಣದ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿನ ‘ಡಯಾಲಿಸಿಸ್’ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರೋಗಿಗಳು ‘ಡಯಾಲಿಸಿಸ್’ಗಾಗಿ ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯ ಇದೆ.

ಆಸ್ಪತ್ರೆ ವತಿಯಿಂದ ಘಟಕಕ್ಕೆ ಸ್ಥಳಾವಕಾಶ, ನೀರು, ವಿದ್ಯುತ್ ಕಲ್ಪಿಸಲಾಗಿದೆ. ‘ಎಸ್ಕಾಗ್‌ ಸಂಜೀವಾಣಿ’(Eskag Sanjeevani) ಸಂಸ್ಥೆ ನಿರ್ವಹಿಸುತ್ತಿದೆ. 12 ಮಂದಿ ರೋಗಿಗಳು ಇದ್ದಾರೆ.

ಘಟಕದಲ್ಲಿ ಎರಡು ಯಂತ್ರಗಳು ಇವೆ. ಈ ಪೈಕಿ ಒಂದು ಹಾಳಾಗಿ ತಿಂಗಳಾಗಿದೆ. ಇನ್ನೊಂದು ಯಂತ್ರವೂ ಹಳೆಯದಾಗಿದ್ದು, ಸೆನ್ಸಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸಲ್ಲ. ರೋಗಿಗಳು ಘಟಕದ ಸಿಬ್ಬಂದಿ ಜತೆ ಗಲಾಟೆ ಮಾಡುತ್ತಾರೆ. ಸಮಸ್ಯೆ ಕುರಿತು ಸಂಬಂಧಪಟ್ಟವರ ಗಮನ ಸೆಳೆದರೂ ಈವರೆಗೆ ಪರಿಹರಿಸಿಲ್ಲ.

‘ಡಿ’ ಗ್ರೂಪ್‌ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೆ ಭವಿಷ್ಯ ನಿಧಿ (ಪಿಎಫ್), ಇಎಸ್ಐ ಸಿಗುತ್ತಿಲ್ಲ, ವೇತನ ಹೆಚ್ಚಳ ಬೇಡಿಕೆಗೆ ಸ್ಪಂದಿಸಿಲ್ಲ ಎಂಬ ದೂರುಗಳು ಇವೆ.

ರೋಗಿಗಳ ಪರದಾಟ

ಮೂಡಿಗೆರೆ: ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾದ ಸ್ಥಿತಿ ಇದೆ.

ಘಟಕ ಆರಂಭವಾಗಿ ನಾಲ್ಕು ವರ್ಷವಾಗಿದೆ. ಘಟಕದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಘಟಕದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ.

ಈ ಹಿಂದೆ ಘಟಕವನ್ನು ಸರ್ಕಾರದಿಂದ ನಿರ್ವಹಣೆವಾಗ ಉಪಕರಣ, ಎಲ್ಲವನ್ನು ಸರ್ಕಾರ ಪೂರೈಸುತ್ತಿತ್ತು. ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ ಬಳಿಕ ರೋಗಿಗಳು ಹೊರಗಡೆಯಿಂದ ಕೆಲವು ಪರಿಕರ (ಒಂದು ಬಾರಿಗೆ ₹ 800 ) ಖರೀದಿಸಿ ಕೊಡಬೇಕಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕೆಲವು ಪರಿಕರಗಳನ್ನು ಸಂಸ್ಥೆಯು ಪೂರೈಕೆ ಮಾಡುತ್ತಿದೆ. ಈಗಲೂ ಕೆಲ ಪರಿಕರಗಳನ್ನು ಹೊರಗಡೆಯಿಂದ ಖರೀದಿಸಿ ತಂದುಕೊಡುತ್ತೇವೆ, ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೋಗಿಗಳು ದೂರುತ್ತಾರೆ.

ಸಿಬ್ಬಂದಿ, ಪರಿಕರ ಕೊರತೆ

ತರೀಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿನ ನಾಲ್ಕು ಯಂತ್ರಗಳಲ್ಲಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆಗೆ ಸಮಸ್ಯೆಯಾಗಿದೆ.

ಒಂದು ಯಂತ್ರ ಸ್ಥಗಿತವಾಗಿ ವರ್ಷವಾಗಿದೆ. ಮತ್ತೊಂದು ತಾತ್ಕಲಿಕವಾಗಿ ಸ್ಥಗಿತವಾಗಿದೆ.

ನಿತ್ಯ 15 ರೋಗಿಗಳು ಕಾಯುವಂತಾಗಿದೆ. ಗುಣಮಟ್ಟದ ಔಷಧಿಗಳು, ಎಚ್‌ ಬಿ ಇಂಜೆಕ್ಷನ್‌, ಸುರಕ್ಷಾ ಪರಿಕರ (ಕೈಗವುಸು... ), ಕೈ ತೊಳೆಯುವ ದ್ರಾವಣ

ಪೂರೈಕೆ ಕೊರತೆ ಇದೆ. ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಈ ಘಟಕಕ್ಕೆ ತರೀಕೆರೆ ತಾಲ್ಲೂಕು ಮಾತ್ರವಲ್ಲ ಅರಸೀಕೆರೆ, ಕಡೂರು, ಅಜ್ಜಂಪುರ ತಾಲ್ಲೂಕಗಳಿಂದಲೂ ರೋಗಿಗಳು ಬರುತ್ತಾರೆ.

ಸಿಬ್ಬಂದಿ ಕೊರತೆ: ಎಸ್ಕಾನ್‌ ಸಂಜೀವಾಣಿ ಸಂಸ್ಥೆಯು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ ನಂತರ ದಿನಗೂಲಿ ನೌಕರರ ವೇತನವನ್ನು ಇಳಿಕೆ ಮಾಡಿದ್ದು, ಕೆಲವರು ಕೆಲಸ ತೊರೆದಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ.

ಘಟಕದಲ್ಲಿ ಸಿಬ್ಬಂದಿ ಕೊರತೆ ಇದೆ. ಇಬ್ಬರು ಸ್ಟಾಫ್‌ ನರ್ಸ್‌, ಒಬ್ಬರು ಟೆಕ್ನಿಷಿಯನ್‌ ಸಹಿತ ಐವರು ಸಿಬ್ಬಂದಿ ಇದ್ದಾರೆ. ಪಿಎಫ್, ಇಇಸ್‌ಐ ಸೌಲಭ್ಯ ಇಲ್ಲ ಎಂದು ಸಿಬ್ಬಂದಿ ದೂರು.

ಡಯಾಲಿಸ್‌ ಘಟಕದ ಸಮಸ್ಯೆಗಳನ್ನು ಶಾಸಕ ಹಾಗೂ ಎಸ್ಕಾನ್‌ ಸಂಜೀವಾಣಿ ಸಂಸ್ಥೆ ಗಮನಕ್ಕೆ ತರಲಾಗಿದೆ. ಪರಿಹಾರಕ್ಕೆ ಕ್ರಮ ವಹಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಮೂಲಸೌಲಭ್ಯ ಕೊರತೆ

ನರಸಿಂಹರಾಜಪುರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕವು ಹಲವು ಮೂಲ ಸೌಲಭ್ಯ, ಸಿಬ್ಬಂದಿ ಕೊರತೆಯಿಂದ ಸೊರಗಿದೆ.

ಈ ಹಿಂದೆ ಬಿಆರ್‌ಎಸ್‌ಏಜೆನ್ಸಿ ಘಟಕದ ನಿರ್ವಹಿಸುವಾಗ ಎರಡು ಯಂತ್ರಗಳಿದ್ದವು. ಈ ಪೈಕಿ ಒಂದು ಹಾಳಾಗಿತ್ತು. ಈಗ ಸಂಜೀವಾಣಿ ಸಂಸ್ಥೆಗೆ ನಿರ್ವಹಣೆ ವಹಿಸಲಾಗಿದೆ. ಜೊಯ್‌ಅಲುಕಾಸ್ ಕಂಪನಿ ಒಂದು ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಎರಡು ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. 12 ರೋಗಿಗಳು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಾರೆ. ಈ ಪೈಕಿ ಮೂವರು ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ.

ದಿನಗೂಲಿಯಡಿ ಇಬ್ಬರು ತಂತ್ರಜ್ಞರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ‘ಡಿ’ ಗ್ರೂಪ್‌ ಒಬ್ಬರು ನೌಕರ ಮಾತ್ರ ಇದ್ದಾರೆ.

‘ತಂತ್ರಜ್ಞರಿಗೆ ₹ 18ಸಾವಿರ ಸಂಬಳ ನೀಡುವುದಾಗಿ ತಿಳಿಸಿದ್ದ ಸರ್ಕಾರ ₹ 14ಸಾವಿರ ಪಾವತಿಸುತ್ತಿದೆ. ಇಎಸ್‌ಐ, ಪಿಎಫ್ ಸೌಲಭ್ಯವೂ ಇಲ್ಲ’ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

‘ಔಷಧಿ ಗುಣಮಟ್ಟದ ಔಷಧ ಪೂರೈಸುತ್ತಿಲ್ಲ. ಹೀಗಾಗಿ, ರಕ್ತ ಹೆಪ್ಪುಗಟ್ಟುತ್ತದೆ. ರೋಗಿಗಳ ರಕ್ತ ಹೆಚ್ಚು ನಷ್ಟವಾಗುತ್ತದೆ. ಹಾಳಾಗಿರುವ ಒಂದು ಯಂತ್ರವನ್ನು ಈವರೆಗೆ ದುರಸ್ತಿಪಡಿಸಿಲ್ಲ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

‘ಘಟಕದವರು ಇಂಡೆಂಟ್‌ ಹಾಕಿದ ಕೆಲ ಔಷಧಿಗಳು ಪೂರೈಕೆಯಾಗಲ್ಲ. ‘ಹೆಪಾರಿಸ್’ ಔಷಧಿ ಕೊರತೆ ಇದೆ. ಕೆಲವೊಮ್ಮೆ ರೋಗಿಗಳೇ ಔಷಧಿ ತೆಗೆದುಕೊಂಡು ಹೋಗಬೇಕು. ‘ಡಿ’ ಗ್ರೂಪ್‌ ನೌಕರರ ಕೊರತೆ ಇದೆ. ರೋಗಿ ಕಡೆಯುವರು ಗಾಲಿಕುರ್ಚಿಯಲ್ಲಿ ರೋಗಿಯನ್ನು ಕರೆದೊಯ್ಯಬೇಕಾದ ಸ್ಥಿತಿ ಇದೆ’ ಎಂದು ರೋಗಿಯೊಬ್ಬರ ಪುತ್ರ ಪುತ್ರ ಎಲ್ದೋ ಹೇಳುತ್ತಾರೆ.

ಶೃಂಗೇರಿ: ಡಯಾಲಿಸಿಸ್‌ ಘಟಕ ಇಲ್ಲ

ಶೃಂಗೇರಿ: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಇಲ್ಲ. ರೋಗಿಗಳು ಪಕ್ಕದ ಜಿಲ್ಲೆ, ತಾಲ್ಲೂಕು, ಖಾಸಗಿ ಆಸ್ಪತ್ರೆ ಅವಲಂಬಿಸುವಂತಾಗಿದೆ.

ರೋಗಿಗಳು ಡಯಾಲಿಸಿಸ್‌ಗಾಗಿ ಚಿಕ್ಕಮಗಳೂರು, ಮಣಿಪಾಲ, ಮಂಗಳೂರು, ಶಿವಮೊಗ್ಗಕ್ಕೆ ಹೋಗಬೇಕಾದ ಸ್ಥಿತಿ ಇದೆ. 30 ಹಾಸಿಗೆ ಸೌಲಭ್ಯದ ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆಗಳೇ ಜಾಸ್ತಿ ಇವೆ.

ಹೊಸ ತಾಲ್ಲೂಕುಗಳಾದ ಕಳಸ ಅಜ್ಜಂಪುರದಲ್ಲಿ ಡಯಾಲಿಸಿಸ್‌ ಘಟಕಗಳು ಇಲ್ಲ.

(ತಂಡ: ಬಾಲು ಮಚ್ಚೇರಿ, ಎಚ್‌.ಎಂ.ರಾಜಶೇಖರಯ್ಯ, ಕೆ.ವಿ.ನಾಗರಾಜ್‌, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್‌.ರಾಘವೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT