ಔಷಧಿ ಸಿಂಪಡಣೆಗೆ ಅಡ್ಡಿ , ಕಾಫಿ ಫಸಲಿಗೆ ಹಾನಿ

7
ಕಳಸ: ಕೃಷಿಕರಲ್ಲಿ ಸತತ ಮಳೆ ತಂದ ಆತಂಕ

ಔಷಧಿ ಸಿಂಪಡಣೆಗೆ ಅಡ್ಡಿ , ಕಾಫಿ ಫಸಲಿಗೆ ಹಾನಿ

Published:
Updated:
ಕಳಸ ಸಮೀಪದ ಕಾಫಿ ಮತ್ತು ಅಡಿಕೆ ತೋಟವೊಂದರಲ್ಲಿ ಸತತ ಮಳೆಯಿಂದಾಗಿ ಕಾಫಿ ಗಿಡದ ಬುಡದಲ್ಲಿ ನೀರು ನಿಂತಿರುವ ದೃಶ್ಯ.

ಕಳಸ: ‘ನಿಮ್ ತ್ವಾಟದಲ್ಲಿ ಕಾಫಿ ಕಾಯಿ ಉದುರ್ತಾ ಇದೆಯಾ?’, ‘ಅಡಿಕೆಗೆ ಔಷಧಿ ಹೊಡೆದಿದ್ರಾ?...’ – ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವ ಹೊತ್ತಿನಲ್ಲಿ ಹೋಬಳಿಯ ಕಾಫಿ, ಅಡಿಕೆ ಬೆಳೆಗಾರರು ಇತರೆ ಬೆಳೆಗಾರನ್ನು ಕಂಡೊಡನೆ ಕೇಳುತ್ತಿರುವ ಸಾಮಾನ್ಯ ಪ್ರಶ್ನೆ ಇದು.

ಸತತ ಮಳೆಗೆ ಸಿಲುಕಿದ ಕಾಫಿ ಫಸಲು ನೆಲಕ್ಕೆ ಉದುರುತ್ತಿರುವ ಈ ಸಂದರ್ಭದಲ್ಲಿ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಜತೆಗೆ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಔಷಧಿ ಸಿಂಪಡಿಸಲೂ ಮಳೆ ಅವಕಾಶ ನೀಡದಿರುವುದು ಬೆಳೆಗಾರರ ಚಿಂತೆಯನ್ನು ದುಪ್ಪಟ್ಟು ಮಾಡಿದೆ.

ಕಳೆದ ವರ್ಷ ಕಾಫಿ ಫಸಲು ಕಡಿಮೆ ಪ್ರಮಾಣದಲ್ಲಿ ಇತ್ತು. ಈ ವರ್ಷ ಗಿಡಗಳು ಆರೋಗ್ಯಪೂರ್ಣವಾಗಿದ್ದರಿಂದ ಬಹುತೇಕ ತೋಟಗಳಲ್ಲಿ ಉತ್ತಮ ಪ್ರಮಾಣದಲ್ಲಿ ಕಾಫಿ ಕಾಯಿ ಕಟ್ಟಿತ್ತು. ಬಂಪರ್ ಫಸಲಿನ ಕನಸಿನಲ್ಲಿ ಬೆಳೆಗಾರರು ಇದ್ದಾಗಲೇ ಮಳೆ ಆ ಕನಸನ್ನು ಭಗ್ನವಾಗಿಸುತ್ತಿದೆ. ಜೂನ್ 8ರಿಂದ ಆರಂಭವಾದ ಮಳೆ ಬಹುತೇಕ ಪ್ರತಿದಿನವೂ ಸುರಿಯತ್ತಿದ್ದು 22 ದಿನದಲ್ಲಿ 42 ಇಂಚು ಪ್ರಮಾಣ ದಾಖಲಿಸಿದೆ. ಜೂನ್‍ನಲ್ಲಿ ಒಟ್ಟು 43 ಇಂಚು (1,100 ಮಿ.ಮೀ.) ಮಳೆ ಸುರಿದಿದೆ. ಇದರಿಂದ ಕಾಫಿ ತೋಟದ ಮಣ್ಣಿನಲ್ಲಿ ಶೀತ ಹೆಚ್ಚಾಗಿದೆ. ಬೇರುಗಳಿಗೆ ಉಸಿರಾಡಲು ಅವಕಾಶ ಆಗದ ಪರಿಣಾಮವಾಗಿ ಕಾಫಿ ಫಸಲು ಉದುರಲು ಆರಂಭಿಸಿದೆ.

ಕಾಫಿ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಕಾಫಿ ತೋಟದ ಕೆಲಸಕ್ಕೆ ಎಲ್ಲೆಡೆ ನಿರ್ಲಕ್ಷ್ಯ ಕಂಡುಬರುತ್ತಿದೆ. ಆದರೆ ತೋಟದ ಬಗ್ಗೆ ಮಳೆಗಾಲದಲ್ಲಿ ಅಸಡ್ಡೆ ತೋರಿದರೆ ಫಸಲು ಕೊಯ್ಯುವ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬ ಎಚ್ಚರಿಕೆ ಮಾತನ್ನು ಹಿರಿಯ ಬೆಳೆಗಾರರು ಹೇಳುತ್ತಾರೆ.

ಇನ್ನು ಹೋಬಳಿಯ ಬೆಳೆಗಾರರನ್ನು ಆಧರಿಸುತ್ತಿರುವ ಅಡಿಕೆ ಫಸಲಿಗೆ ಕೊಳೆನಿಯಂತ್ರಕ ಔಷಧಿ ಸಿಂಪಡಿಸಲು ಮಳೆ ವಿರಾಮ ನೀಡಿಲ್ಲ. ಇದು ಬೆಳೆಗಾರರ ದೊಡ್ಡ ಸಂಕಟ ಆಗಿದೆ.

‘ಯಾವಾಗಲೂ ಜೂನ್ ತಿಂಗಳಲ್ಲಿ 25 ಇಂಚು ಮಳೆ ಆದ ಮೇಲೆ 4-5 ದಿನ ಹೊಳವು ಆಗ್ತಿತ್ತು. ಈ ವರ್ಷ ಔಷಧಿ ಹೊಡಿಯಕ್ಕೆ ಪುರುಸೊತ್ತೇ ಕೊಡದೆ ಮಳೆ ಸುರೀತಾ ಇದೆ’ ಎಂದು ಬೆಳೆಗಾರ ಹೆಬ್ಳೂರು ಧರಣೇಂದ್ರ ಹೇಳುತ್ತಾರೆ.

ಕಳೆದ ಎರಡು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಔಷಧಿಯ ಎರಡು ಸಿಂಪಡಣೆಯು ಅಡಿಕೆಗೆ ಸಾಕಾಗಿತ್ತು. ಆದರೆ ಈ ವರ್ಷ ಜೂನ್ ಮೊದಲ ವಾರದಲ್ಲಿ ಬೋರ್ಡೋ ದ್ರಾವಣ ಸಿಂಪಡಿಸಿದವರು ಮತ್ತು ಮೇ ಕೊನೆಯ ಅವಧಿಯಲ್ಲಿ ಬಯೋಫೈಟ್ ಸಿಂಪಡಿಸಿದವರೂ ಈಗ ಔಷಧಿಯ ವಾಯಿದೆ ಮುಗಿಯಿತು ಎಂದು ಚಿಂತಿತರಾಗಿದ್ದಾರೆ. ಈ ಬಾರಿ ಮೂರು ಔಷಧಿ ಬೇಕೇ ಬೇಕು ಎಂಬಂತಾಗಿದೆ.

ಮಳೆ ವಿರಾಮ ನೀಡಿದ ಕೂಡಲೇ ಔಷಧಿ ಹೊಡೆಯಬೇಕು ಎಂಬ ಯೋಜನೆ ಎಲ್ಲ ಬೆಳೆಗಾರರದ್ದೂ ಆಗಿದೆ. ಆದರೆ ಮರ ಹತ್ತಿ ಔಷಧಿ ಹೊಡೆಯುವವರ ಸಂಖ್ಯೆ ಕಡಿಮೆಯೇ ಆಗಿರುವುದರಿಂದ ಆ ಕೆಲಸ ನಿಗದಿತ ಸಮಯಕ್ಕೆ ಮುಗಿಯುವುದು ಅನುಮಾನವೇ ಆಗಿದೆ. ಕಳೆದ ಎರಡು ವರ್ಷಗಳ ಮಳೆ ಕೊರತೆಗೆ ಮಲೆನಾಡಿನ ಕೃಷಿಕರು ಹಿಗ್ಗಿ ಒಗ್ಗಿಕೊಂಡಿದ್ದರು. ಆದರೆ ಈ ಬಾರಿ ಮಳೆರಾಯ ತನ್ನ ಎಂದಿನ ವರಸೆ ತೋರಿದ್ದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ.

ಬೆಳೆ ಉಳಿಸಿಕೊಳ್ಳಲು ಕಸರತ್ತು

‘ಕಳೆದ 2 ವರ್ಷದ ಮಳೆಗಾಲದ ಹವಾಮಾನ ಕಾಫಿ- ಅಡಿಕೆಗೆ ಚೆನ್ನಾಗಿತ್ತು. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಕಾಫಿ ಉದುರುವಿಕೆ ಹೆಚ್ಚಾಗಿದೆ’ ಎಂದು ಮಕ್ಕಿಮನೆಯ ಬೆಳೆಗಾರ ಕೃಷ್ಣಮೂರ್ತಿ ಹೆಬ್ಬಾರ್ ಹೇಳುತ್ತಾರೆ. ಕಾಫಿ ಉದುರುವಿಕೆ ನಿಯಂತ್ರಿಸಲು ಅವರು ಗಿಡಗಳ ಬುಡದಲ್ಲಿ ಇದ್ದ ಕಸ ಮತ್ತು ತರಗನ್ನು ಮೂರು ಅಡಿಯಷ್ಟು ಅಗಲಕ್ಕೆ ಬಿಡಿಸಿ ರಾಶಿ ಮಾಡಿಸಿದ್ದಾರೆ.

ಕಾಯಿಕೊಳೆ ನಿಯಂತ್ರಣಕ್ಕೆ ಜಾಣತನವೇ ಮದ್ದು

ಕಾಫಿ ಕಾಯಿಕೊಳೆ ರೋಗವನ್ನು ನಿಯಂತ್ರಿಸಲು ಕೆಲವು ಅಭ್ಯಾಸಗಳನ್ನು ತೋಟದಲ್ಲಿ ಮಾಡಬೇಕಾಗುತ್ತದೆ. ಗಿಡದ ನೆತ್ತಿಯ ಮೇಲೆ ಇರುವ ಅಡ್ಡರೆಕ್ಕೆ ಮತ್ತು ಚಿಗುರನ್ನು ತೆಗೆದು ಗಿಡದ ಒಳಗೆ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು. ಕಾಫಿ ಗಿಡವನ್ನು ಆವರಿಸಿರುವ ಸದೆ (ಕಳೆಗಿಡ) ನಿವಾರಿಸಿ ಗಿಡದ ರೆಕ್ಕೆಯ ಕೆಳಗಿನಿಂದಲೂ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು. ಗಿಡದ ಬುಡದಲ್ಲಿ ಎಲ್ಲ ಕಸವನ್ನು ರಾಶಿ ಮಾಡಿ ಕಾಫಿ ಗಿಡದ ಬೇರಿಗೆ ಗಾಳಿಯಾಡಲು ಅವಕಾಶ ಮಾಡಿಕೊಡಬೇಕು. ಮಳೆಯ ಆರ್ಭಟ ಕಡಿಮೆಯಾದ ಮೇಲೆ ಕಾಫಿ ಗಿಡಗಳಿಗೆ ಎಕರೆಗೆ ಒಂದು ಮೂಟೆಯಂತೆ ಯೂರಿಯಾ ನೀಡಬೇಕು ಎಂಬುದು ಕಾಫಿ ಮಂಡಳಿಯ ಶಿಫಾರಸು. ಯೂರಿಯಾ ಜತೆಗೆ ಎಕೆರೆಗೆ ಒಂದು ಮೂಟೆ ಪೊಟ್ಯಾಷ್ ಕೂಡ ನೀಡಿದರೆ ಕಾಯಿ ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಕೆಲ ಅನುಭವಿ ಬೆಳೆಗಾರರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !