7
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉಮೇಶ್ ಸೂಚನೆ

ಕೃಷಿ ಅಭಿಯಾನ ಕಾಟಾಚಾರಕ್ಕೆ ನಡೆಯವುದು ಬೇಡ

Published:
Updated:
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಆನಂದನಾಯ್ಕ ಮಾತನಾಡಿದರು

ಕಡೂರು: ಕೃಷಿ ಅಭಿಯಾನದಂತಹ ಮಹತ್ವದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸದಿರುವುದಕ್ಕೆ ಸದಸ್ಯರು ಪಕ್ಷಬೇಧ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉಮೇಶ್ ಮಾತನಾಡಿ, ‘ಗುರುವಾರ ಸಿಂಗಟಗೆರೆಯಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ನಡೆದಿದೆ. ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ ನನಗೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಆಗಲಿಲ್ಲ. ಬೇರೆ ಬೇರೆ ಕಾರ್ಯಕ್ರಮಗಳ ನಿಮಿತ್ತ ಶಾಸಕರೂ ಸಹ ಭಾಗವಹಿಸಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಕ್ರಮಕ್ಕೂ ಮುನ್ನ ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಕಾರ್ಯಕ್ರಮ ನಿಗದಿಪಡಿಸಬೇಕು. ಮಹತ್ವದ ಕಾರ್ಯಕ್ರಮ ಒಂದು ಕಾಟಾಚಾರಕ್ಕೆ ನಡೆಯುವುದು ಬೇಡ’ ಎಂದು ಕೃಷಿ ಇಲಾಖೆ ಪ್ರಭಾರ ನಿರ್ದೇಶಕ ಚಂದ್ರು ಅವರಿಗೆ ಸೂಚಿಸಿದರು.

ಶುಕ್ರವಾರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯ ಆನಂದನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆಯವರು ಮತ್ತು ಅಡುಗೆ ಸಹಾಯಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದು ಸರಿಯಲ್ಲ. ಇದರಿಂದಾಗಿ ಅವರಿಗೆ ಜೀವನ ನಡೆಯುವುದು ಕಷ್ಟವಾಗಿದೆ. ಸರ್ಕಾರದ ನಿಯಮಾವಳಿಯನ್ನು ಪಾಲಿಸುವುದು ಅನಿವಾರ್ಯವಾದರೂ ಕೂಡ ಮಾನವೀಯ ನೆಲೆಯಲ್ಲಿ ಅವರ ಜೀವನಕ್ಕೆ ದಾರಿಮಾಡಿಕೊಡುವ ಕುರಿತು ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ನಾಗವಲ್ಲಿ, ‘ಒಟ್ಟು 107 ಅಡುಗೆಯವರು ಮತ್ತು ಅಡುಗೆ ಸಹಾಯಕರು ಹೊರಸಂಪನ್ಮೂಲ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಆ ಸ್ಥಾನಗಳಿಗೆ ಸರ್ಕಾರ ನೇರ ನೇರಕಾತಿ ಮಾಡಿದೆ. ಹಾಗಾಗಿ ಅನಿವಾರ್ಯವಾಗಿ 57 ಜನರನ್ನು ಕೈಬಿಡಲಾಗಿದೆ. ಅವಕಾಶವಿದ್ದ ಕಡೆಗಳಲ್ಲಿ ಸೀನಿಯಾರಿಟಿ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬೆಳೆ ವಿಮೆ ಕಟ್ಟಿದ್ದರೂ ಬಹಳಷ್ಟು ಜನರಿಗೆ ವಿಮೆ ಪರಿಹಾರ ಬಂದಿಲ್ಲ. ಕಳೆದ 5 ವರ್ಷಗಳ ಬೆಳೆ ಸಮೀಕ್ಷೆ ಆಧಾರದಲ್ಲಿ ವಿಮೆ ನೀಡುವ ಪದ್ಧತಿ ಇದೆ ಎ‍ಂಬ ವಿಚಾರವನ್ನು ಕೃಷಿ ಅಧಿಕಾರಿಗಳು ಮೊದಲೇ ರೈತರಿಗೆ ತಿಳಿಸಬೇಕು. ಖಾಸಗಿ ಕಂಪನಿಯೊಂದು ವಿಮೆ ಪ್ರೀಮಿಯಂ ಕಟ್ಟಿಸಿಕೊಳ್ಳುತ್ತಿದೆ. ನಂತರ ರೈತರಿಗೆ ಪರಿಹಾರ ನೀಡದೆ ಮೋಸ ಮಾಡುತ್ತದೆ. ಇದು ರೈತರಿಗೆ ಆಗುತ್ತಿರುವ ಅನ್ಯಾಯ’ ಎಂದು ಸದಸ್ಯರಾದ ಆನಂದನಾಯ್ಕ, ಅಕ್ಷಯ್ ಕುಮಾರ್‌, ಸಂತೋಷ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಭೆ ಸೂಚಿಸಿತು.

ಕುಡಿಯುವ ನೀರಿನ ಸಮಸ್ಯೆ, ವಿವಿಧ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಉಪಾಧ್ಯಕ್ಷ ಪ್ರಸನ್ನ, ಕಾರ್ಯನಿರ್ವಹಣಾಧಿಕಾರಿ ಡಾ.ದೇವರಾಜನಾಯ್ಕ, ವ್ಯವಸ್ಥಾಪಕ ವಿಜಯ್ ಕುಮಾರ್‌ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !