ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ತಪ್ಪು ವ್ಯಾಖ್ಯಾನ ಸಲ್ಲದು: ಪ್ರೊ.ಪುಟ್ಟಯ್ಯ

Last Updated 21 ಜುಲೈ 2018, 14:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮೀಸಲಾತಿ ಪದದ ತಪ್ಪು ವ್ಯಾಖ್ಯಾನಕ್ಕೆ ಒಳಗಾಗಿದೆ. ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮಾತ್ರ ಪಡೆಯುತ್ತಿಲ್ಲ, ಇತರ ಸಮುದಾಯದವರು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಚಾರಸಂಕಿರಣದಲ್ಲಿ ‘ಪ್ರಸಕ್ತ ಸಂದರ್ಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರಸ್ತುತತೆ’ ಕುರಿತು ಮಾತನಾಡಿದರು.

‘ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಇದೆ. ಪ್ರತಿ ವರ್ಷ ಮಂಡಿಸುವ ಬಜೆಟ್‌ನಲ್ಲೂ ಇಂತಿಂಥ ಕ್ಷೇತ್ರಕ್ಕೆ ಇಷ್ಟಿಷ್ಟು ಎಂದು ಅನುದಾನ ಮೀಸಲಿಡಲಾಗುತ್ತದೆ. ಇದು ಕೂಡಾ ಮೀಸಲಾತಿ ಅಲ್ಲವೇ? ಇದನ್ನು ಮನವರಿಕೆ ಮಾಡಿಕೊಂಡು ಸಾಮಾಜಿಕ ಅಭಿಪ್ರಾಯವಾಗಿ ಮತ್ತು ರಾಜಕೀಯ ದೃಷ್ಟಿಕೋನವಾಗಿ ಬೆಳೆಸುವ ಅಗತ್ಯ ಇದೆ’ ಎಂದು ಸಲಹೆ ನೀಡಿದರು.

‘ಜಗತ್ತಿನಲ್ಲಿ ಚಾರ್ಲ್ಸ್‌ ಡಾರ್ವಿನ್‌, ಕಾರ್ಲ್‌ ಮಾರ್ಕ್‌್ಸ ಅವರನ್ನು ಬಿಟ್ಟರೆ ಅಂಬೇಡ್ಕರ್‌ ಅವರನ್ನು ಸರಿಗಟ್ಟುವ ವಿದ್ವಾಂಸರು ಮತ್ತೊಬ್ಬರು ಇಲ್ಲ. ಅಂಬೇಡ್ಕರ್‌ ರಚಿಸಿದ ಸಂವಿಧಾನ, ಕಾನೂನಿನ ಲಾಭವನ್ನು ಬಲಾಢ್ಯ ಜಾತಿಯವರೂ ಪಡೆಯುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಆ ಕುಟುಂಬದ ಎಲ್ಲ ಮಕ್ಕಳಿಗೂ ಸೇರಬೇಕು ಎಂಬುದು ಅಂಬೇಡ್ಕರ್‌ ಮಾಡಿದ್ದು. ಇದರಿಂದಾಗಿ ಮಹಿಳೆಯರಿಗೂ ಅಪ್ಪನ ಆಸ್ತಿಯಲ್ಲಿ ಪಾಲು ಪಡೆಯುಲು ಅವಕಾಶವಾಗಿದೆ. ಬಹಳಷ್ಟು ಮಹಿಳೆಯರು, ಹೋರಾಟಗಾರ್ತಿಯರು ಜಾತಿಯ ಕಾರಣಕ್ಕೆ ಅಂಬೇಡ್ಕರ್‌ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಇದು ವೈಚಾರಿಕ ದ್ರೋಹ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾತಿ ಹೆಸರಿನಲ್ಲಿ ಮೇಲು–ಕೀಳು, ದಬ್ಬಾಳಿಕೆ ಮಾಡುವವರನ್ನು ಅಘೋಷಿತ ಮಾನಸಿಕ ರೋಗಿಗಳು ಎಂದು ಅಂಬೇಡ್ಕರ್‌ ಹೇಳಿದ್ದರು. ಅಂಬೇಡ್ಕರ್‌ ಅವರು ಪರಿಶಿಷ್ಟ ಸಮುದಾಯದವರಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿಲ್ಲ. ಸಾಮಾಜಿಕನ್ಯಾಯ ಅವರ ಪರಿಕಲ್ಪನೆಯಾಗಿತ್ತು. ಅಂಬೇಡ್ಕರ್‌ ಅವರನ್ನು ವಿರೋಧಿಸುವುದು, ಮೀಸಲಾತಿಗೆ ಸೀಮಿತಗೊಳಿಸುವುದು ಸರಿಯಲ್ಲ’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರನ್ನು ತಪ್ಪಾಗಿ ನಿರೂಪಣೆ ಮಾಡುವವರೇ ಜಾಸ್ತಿ. ಬಹಳಷ್ಟು ಮಂದಿ ಅಂಬೇಡ್ಕರ್‌ ಜತೆಗೆ ಗಾಂಧೀಜಿ ಅವರನ್ನು ಉಲ್ಲೇಖಿಸುತ್ತಾರೆ. ಗಾಂಧೀಜಿ ಕೈಯಲ್ಲಿ ಹಿಡಿದಿರುವುದು ಭಗವದ್ಗೀತೆ , ಅಂಬೇಡ್ಕರ್‌ ಕೈಯಲ್ಲಿ ಹಿಡಿದಿರುವುದು ಸಂವಿಧಾನ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಭಗವದ್ಗೀತೆ ಮತ್ತು ಸಂವಿಧಾನ ಎರಡೂ ಒಂದೇ ಅಲ್ಲ. ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರನ್ನು ಸಮೀಕರಿಸುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಅಂಬೇಡ್ಕರ್‌ ಅವರು ಬೌದ್ಧ ಧರ್ಮದ ಅನುಯಾಯಿಯಾದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ಮೂಲಮಂತ್ರಗಳು ಬೌದ್ಧಧರ್ಮಕ್ಕೆ ಸೆಳೆದವು. ಬೌದ್ಧ ಧರ್ಮವು ಜೀವನ ಕ್ರಮ ಎಂದು ಅಂಬೇಡ್ಕರ್‌ ಹೇಳಿದ್ದರು’ ಎಂದು ಹೇಳಿದರು.

‘ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರು ತಾವು ಬಂದಿರುವ ಕೇರಿ, ಓಣಿ, ಗುಡಿಸಲಿನ ಹೀನಾಯ ಸ್ಥಿತಿಗಳನ್ನು ಅವಲೋಕಿಸಬೇಕು. ಈ ನೌಕರರು ಮುಂಬಡ್ತಿ, ಹಿಂಬಡ್ತಿ ಬಗ್ಗೆ ಚಿಂತಿಸುವುದರ ಜತೆಗೆ ತಮ್ಮ ಕೇರಿ, ಓಣಿ, ಗುಡಿಸಲಿನ ಕಡೆಗೆ ನೋಡಿ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನಿಡಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ನೌಕರರು ತಮ್ಮ ಕುಟುಂಬದ ಯೋಗಕ್ಷೇಮಕ್ಕೆ ಮಾತ್ರ ಆದ್ಯತೆ ನೀಡದೆ, ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿ ತೋರಬೇಕು. ಸರ್ಕಾರದ ಸವಲತ್ತುಗಳನ್ನು ಸಂಬಂಧಪಟ್ಟ ಸಮುದಾಯವರಿಗೆ ತಲುಪಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರವು ತಳಸಮುದಾಯದವರಿಗೆ ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಂದು ಇಲಾಖೆಯಲ್ಲೂ ಎಸ್‌ಸಿ, ಎಸ್‌ಟಿ ಸಮುದಾಯವರಿಗೆ ಸವಲತ್ತುಗಳು ಇವೆ. ಅವುಗಳ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಜಾತಿಜಾತಿ ನಡುವೆ ವೈಷ್ಯಮ್ಯ ಇರಬಾರದು. ಒಡಕಿನಿಂದಾಗಿ ದಲಿತ ಸಂಘರ್ಷ ಸಮಿತಿ (ದಸಂಸ) ಛಿದ್ರವಾಗಿದೆ. ಒಳಜಗಳದಿಂದಾಗಿ ಸಂಘಟನೆಗಳು ಬಲ ಕಳೆದುಕೊಂಡಿವೆ ಎಂದರು.

ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿಂಬಡ್ತಿ ರದ್ದುಗೊಳಿಸಿ ಹಿಂದಿನ ಯಥಾಸ್ಥಿತಿಯನ್ನು ಕಾಪಾಡಲು ನಿರ್ಣಯಿಸಿ ರಾಷ್ಟ್ರಪತಿ ಅಂಗೀಕರಿಸಿರುವ ಮಸೂದೆಯನ್ನು ಯಥಾವತ್ತಾಗಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ನೀಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಯಿತು.

ಜಿಲ್ಲಾ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎಂ.ಟಿ.ಲೋಕೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT