ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಕಲ್ದೊಡ್ಡಿ ಬಡಾವಣೆಯಲ್ಲಿ ತೀರದ ನೀರಿನ ದಾಹ

ತಿಂಗಳಿಗೊಮ್ಮೆ ಕೊಳಾಯಿ ನೀರು, ಒಂದೆರೆಡು ರಸ್ತೆಗೆ ಟ್ಯಾಂಕರ್ ನೀರು ಸೀಮಿತ
Last Updated 26 ಜನವರಿ 2019, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕಲ್ದೊಡ್ಡಿ ಬಡಾವಣೆಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. 15 ವರ್ಷಗಳಿಂದ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ನಗರಸಭೆ ವತಿಯಿಂದ ತಿಂಗಳಿಗೊಮ್ಮೆ ಕೊಳಾಯಿ ನೀರು ಬಿಡುತ್ತಿದ್ದು, ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರು ಒಂದೆರೆಡು ರಸ್ತೆಗೆ ಸೀಮಿತವಾಗಿದೆ. ಬಡಾವಣೆ ಸಮೀಪದ ರಾಮೇಶ್ವರ ಕೆರೆಯನ್ನು ಕೆಲವರು ಬೆಳಗಿನ ನಿತ್ಯಕರ್ಮಗಳಿಗೆ, ವಾಹನ ತೊಳೆಯಲು ಬಳಸುತ್ತಾರೆ. ಅದೇ ನೀರಿನಲ್ಲಿ ನಿವಾಸಿಗಳು ಅನಿವಾರ್ಯವಾಗಿ ಬಟ್ಟೆ, ಪಾತ್ರೆ ತೊಳೆಯುತ್ತಾರೆ.

ಬಡಾವಣೆಯ ಕೆಲ ಸ್ಥಿತಿವಂತ ನಿವಾಸಿಗಳು ಕುಡಿಯುವ ನೀರಿಗಾಗಿ ಖಾಸಗಿ ಟ್ಯಾಂಕರ್ ಮೊರೆ ಹೋಗುತ್ತಾರೆ. ಬಡವರು ನಗರಸಭೆಯಿಂದ ಸರಬರಾಜಾಗುವ ನೀರನ್ನು ಡ್ರಮ್‌ಗಳಲ್ಲಿ ಶೇಖರಿಸಿಡಲು ಚಾತಕ ಪಕ್ಷಿಗಳಂತೆ ಕಾಯುತ್ತಾರೆ.

‘ಬಡಾವಣೆಗೆ ಒಂದೂವರೆ ತಿಂಗಳಿಗೊಮ್ಮೆ ಯಗಚಿ ನೀರು ಬಿಡುತ್ತಾರೆ. ಆ ನೀರು ದಿನಬಳಕೆಗೆ ಸಾಕಾಗುವುದಿಲ್ಲ. ಡೆಂಗಿ ಕಾರಕ ಲಾರ್ವಾಗಳು ಬೆಳೆಯುತ್ತವೆ ಎಂದು ಮನೆಗಳ ಡ್ರಮ್‌ಗಳಲ್ಲಿ ಶೇಖರಿಸಿಟ್ಟಿದ್ದ ನೀರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಚೆಲ್ಲುತ್ತಾರೆ’ ಎಂದು ನಿವಾಸಿ ಯಶೋಧ ದೂರಿದರು.

ನಗರಸಭೆ ವತಿಯಿಂದ ಈಚೆಗೆ ಬಡಾವಣೆಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಆದರೆ ಅದರ ನೀರು ದಿಣ್ಣೆಯಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ಹತ್ತುತ್ತಿಲ್ಲ. ಕೊಳವೆ ಬಾವಿ ಸಮೀಪದ ನೀರಿನ ಟ್ಯಾಂಕ್‌ಗಳು ಚರಂಡಿಗಳಿಗೆ ಹೊಂದಿಕೊಂಡಿವೆ. ಚರಂಡಿಗಳಲ್ಲಿ ಕೊಳಚೆ ನೀರು ತುಂಬಿರುತ್ತದೆ. ಅದರಲ್ಲಿನ ಹುಳುಗಳು ಪೈಪುಗಳ ಮೂಲಕ ನೀರಿನ ಟ್ಯಾಂಕ್ ಸೇರುತ್ತಿವೆ. ಅದೇ ನೀರನ್ನು ನಿವಾಸಿಗಳು ಬಳಸುವ ಸ್ಥಿತಿ ಇದೆ.

‘ಇಂದಿರಾಗಾಂದಿ ಬಡಾವಣೆ, ಕಲ್ದೊಡ್ಡಿ, ವಾಜಪೇಯಿ ಬಡಾವಣೆಗಳಿಗೆ ನಗರಸಭೆ ವತಿಯಿಂದ ನಿತ್ಯ 4 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ಮನೆಗೆ ಒಂದು ಬ್ಯಾರೆಲ್ ನೀರು ನೀಡಲಾಗುತ್ತದೆ. ಒಂದು ಟ್ಯಾಂಕರ್ ನೀರು ಒಂದು ರಸ್ತೆಗೆ ಸಾಲುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನಗರಸಭೆ ಅಧ್ಯಕ್ಷರು, ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಗರಸಭೆ ಸದಸ್ಯೆ ಸುರೇಖಾಸಂಪತ್‌ರಾಜ್ ದೂರಿದರು.

‘ನಗರಸಭೆಗೆ ನೀರಿನ ತೆರಿಗೆ ಪಾವತಿಸುತ್ತೇವೆ. ಆದರೆ ಅವರು ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವುದಿಲ್ಲ. ಬಡಾವಣೆಯ ಕೆಲ ರಸ್ತೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ ಈವರೆಗೂ ಕೆರೆಬೀದಿ ರಸ್ತೆಗೆ ನಗರಸಭೆ ನೀರಿನ ಟ್ಯಾಂಕರ್ ಬಂದಿಲ್ಲ’ ಎಂದು ನಿವಾಸಿ ಕಮಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT