‘ಡ್ರಮ್‌ ಸೀಡರ್‌’ ನಾಟಿ ಪದ್ಧತಿ

7
ಭತ್ತ ಬೇಸಾಯ: ವೆಚ್ಚ ತಗ್ಗಿಸಲೊಂದು ಉಪಾಯ

‘ಡ್ರಮ್‌ ಸೀಡರ್‌’ ನಾಟಿ ಪದ್ಧತಿ

Published:
Updated:
Deccan Herald

ಮೂಡಿಗೆರೆ: ಮಲೆನಾಡಿನಲ್ಲಿ ಮುಂಗಾರು ಮಳೆಯ ಆರ್ಭಟದ ನಡುವೆಯೇ ಭತ್ತದ ಗದ್ದೆಗಿಳಿದಿರುವ ರೈತರು ಸಸಿಮಡಿಗಳ ನಿರ್ಮಾಣ, ಗದ್ದೆ ನಾಟಿಯ ಕಾರ್ಯದಲ್ಲಿ ಬಿಜಿಯಾಗಿದ್ದರೆ, ಮೂಡಿಗೆರೆಯ ಮುತ್ತಿಗೆಪುರ, ಹಳೇಮೂಡಿಗೆರೆ, ಹೆಸ್ಗಲ್ ಮುಂತಾದ ಪ್ರದೇಶದ ರೈತರು ಮಾತ್ರ ಹಳೆ ಸಂಪ್ರದಾಯಿಕ ನಾಟಿಪದ್ಧತಿಗೆ ಮಂಗಳ ಹಾಡಿ ‘ಡ್ರಮ್‌ ಸೀಡರ್‌’ ಎಂಬ ಹೊಸ ನಾಟಿ ಪದ್ಧತಿಯತ್ತ ಮುಖ ಮಾಡಿದ್ದು, ಇಷ್ಟು ಬೇಗ ನಾಟಿ ಕೆಲಸ ಮುಗಿದು ಹೋಯಿತಲ್ಲ ಎಂದು ಮಂದಹಾಸ ಬೀರುತ್ತಿದ್ದಾರೆ.

ಪಟ್ಟಣದ ಹ್ಯಾಂಡ್‌ಪೋಸ್ಟಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಟಿ.ಪಿ. ಭರತ್‌ಕುಮಾರ್‌, ಆರ್‌. ಗಿರೀಶ್‌, ಎಲ್‌. ಶ್ರೀನಿವಾಸ್‌ಪ್ರಸಾದ್‌, ಎಂ.ಯೋಗರಾಜ್‌ ಮುಂತಾದವರು ಮಲೆನಾಡಿಗೆ ಈ ‘ಡ್ರಮ್‌ ಸೀಡರ್‌’ ನಾಟಿ ಪದ್ಧತಿಯನ್ನು ಪರಿಚಯಿಸಿದ್ದು, ಈ ಪದ್ಧತಿಯಲ್ಲಿ ಸಸಿಮಡಿ ನಿರ್ಮಾಣ, ಸಸಿ ಕಿತ್ತು ನಾಟಿ ಮಾಡುವ ಪದ್ಧತಿಗಳಿಲ್ಲದ ಕಾರಣ ಭತ್ತದ ಕೃಷಿಯ ವೆಚ್ಚ ತಗ್ಗಿಸಲು ‘ಡ್ರಮ್‌ ಸೀಡರ್‌’ ನಾಟಿ ಪದ್ಧತಿಯು ನೆರವಾಗುವ ವಿಶ್ವಾಸವಿದೆ ಎಂಬ ಮಾತು ರೈತ ಪಾಳಯದಿಂದ ಕೇಳಿ ಬರುತ್ತಿದೆ.

‘ಡ್ರಮ್‌ ಸೀಡರ್‌’ ನಾಟಿ ಪದ್ಧತಿ: ಮೊಳಕೆಯೊಡೆದ ಭತ್ತವನ್ನು ಕೈ ಯಂತ್ರದ ಮೂಲಕ ನೇರವಾಗಿ ಭಿತ್ತನೆ ಮಾಡುವ ಪದ್ಧತಿಯನ್ನೇ ಡ್ರಮ್‌ ಸೀಡರ್‌ ಪದ್ಧತಿ ಎನ್ನಲಾಗುತ್ತದೆ. ನಾಲ್ಕು ಡ್ರಮ್‌ಗಳನ್ನು ಒಳಗೊಂಡ ಎರಡು ಚಕ್ರದ ಗಾಡಿಯಂತಹ ಯಂತ್ರದೊಳಗೆ ಮೊಳಕೆ ಬಂದ ಭತ್ತಗಳನ್ನು ಹಾಕಿ, ಭತ್ತದ ಗದ್ದೆಯಲ್ಲಿ ಈ ಯಂತ್ರವನ್ನು ಕೈಯಿಂದ ಎಳೆಯುವ ಮೂಲಕ, ನಾಟಿ ಮಾಡುವುದು ಈ ಪದ್ಧತಿಯ ವಿಶೇಷವಾಗಿದೆ. ಈಗಾಗಲೇ ಮಲೆನಾಡಿನ ಅನೇಕ ಕಡೆಗಳಲ್ಲಿ ಈ ಡ್ರಮ್‌ ಸೀಡರ್‌ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಇದನ್ನು ಪರಿಚಯಿಸಿರುವ ಕೃಷಿ ವಿಜ್ಞಾನಿ ಟಿ.ಪಿ. ಭರತ್‌ಕುಮಾರ್‌ ಈ ನಾಟಿ ಪದ್ಧತಿ ಬಗ್ಗೆ ವಿವರಿಸಿದ್ದು ಹೀಗೆ.

‘ಡ್ರಮ್‌ ಸೀಡರ್‌ ಪದ್ಧತಿಯು ತಮಿಳುನಾಡಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಈ ಪದ್ಧತಿಯನ್ನು ಮಲೆನಾಡಿನಲ್ಲೂ ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಈ ಪದ್ಧತಿಯನ್ನು ಅನುಸರಿಸುವ ರೈತರು ಮೊದಲಿಗೆ ತಮ್ಮ ಗದ್ದೆಗಳನ್ನು ನಾಟಿಗಾಗಿ ಸಿದ್ಧ ಮಾಡಿಟ್ಟುಕೊಂಡು, ಗದ್ದೆಯಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆ ಬಸಿಯಬೇಕಾಗುತ್ತದೆ. ಬಳಿಕ ಗದ್ದೆಗೆ ಪೊಟ್ಯಾಷ್‌, ಸಾರಜನಕ ಹಾಗೂ ಪೂರ್ತಿ ರಂಜಕವನ್ನು ಹಾಕಿ ಮಣ್ಣನ್ನು ನಾಟಿಗೆ ಸಿದ್ಧಗೊಳಿಸಿಕೊಳ್ಳಬೇಕು.
ಬಳಿಕ ಪ್ರತಿ ಎಕರೆಗೆ 10 ಕೆ.ಜಿ ಬೀಜದ ಭತ್ತವನ್ನು ತೆಗೆದುಕೊಂಡು 24 ಗಂಟೆಗಳ ಕಾಲ ನೆನೆಸಿಡಬೇಕು. ಪ್ರತಿ 1ಕೆ.ಜಿ. ಬೀಜದ ಭತ್ತಕ್ಕೆ 4 ಗ್ರಾಂ ಕಾರ್ಬೆಂಡೆಜಿಂ ಶಿಲೀಂದ್ರ ನಾಶಕದಿಂದ ಉಪಚರಿಸಿ ಗಾಳಿಯಾಡುವ ಚೀಲದಲ್ಲಿ ಕಟ್ಟಿ, ಬೆಚ್ಚನೆಯ ಜಾಗದಲ್ಲಿಡಬೇಕು. ಚೀಲವು ಒಣಗದಂತೆ ನೀರು ಚಿಮುಕಿಸುತ್ತಿದ್ದರೆ 36 ಗಂಟೆಗಳಲ್ಲಿ ಬೀಜದ ಭತ್ತವೆಲ್ಲವೂ ಸಂಪೂರ್ಣವಾಗಿ ಮೊಳಕೆಯೊಡೆಯುತ್ತದೆ.

ಹೀಗೆ ಮೊಳಕೆಯೊಡೆದ ಬೀಜದ ಭತ್ತವನ್ನು ಡ್ರಮ್‌ ಸೀಡರ್‌ ಯಂತ್ರದಲ್ಲಿರುವ ನಾಲ್ಕು ಡ್ರಮ್‌ಗಳಿಗೆ ಮುಕ್ಕಾಲು ಭಾಗದಷ್ಟು ಸಮನಾಗಿ ತುಂಬಿ, ಭತ್ತವು ಚೆಲ್ಲದಂತೆ ಯಂತ್ರದಲ್ಲಿರುವ ಕೀಲಿಯನ್ನು ಭದ್ರಪಡಿಸಿಕೊಂಡು, ನಾಟಿಗಾಗಿ ಸಿದ್ಧವಾಗಿರುವ ಭತ್ತದ ಗದ್ದೆಯಲ್ಲಿ ಯಂತ್ರವನ್ನು ಎಳೆಯಬೇಕು. ಯಂತ್ರದ ಡ್ರಮ್‌ಗಳಲ್ಲಿರುವ ತೂತುಗಳ ಮೂಲಕ ಮೊಳಕೆಯೊಡೆದ ಭತ್ತವು ಗದ್ದೆಗೆ ನಿಗದಿತ ಪ್ರಮಾಣದಲ್ಲಿ ಬಿದ್ದು ಬಿತ್ತನೆಯಾಗುತ್ತದೆ. ಯಂತ್ರದಲ್ಲಿರುವ ಚಕ್ರದ ಗುರುತಿನಲ್ಲಿಯೇ ಚಲಿಸಿದಾಗ ಇಡೀ ಗದ್ದೆಯು ಒಂದೇ ಪ್ರಮಾಣದಲ್ಲಿ ನಾಟಿಯಾಗುತ್ತದೆ. ಒಂದು ವೇಳೆ ಗದ್ದೆಯು ಇಳಿಜಾರಾಗಿದ್ದರೆ ಅಡ್ಡಲಾಗಿ ಉಳುಮೆ ಮಾಡಲು ಸಾಧ್ಯವಾಗುತ್ತದೆ. ಕೆಲವು ಗದ್ದೆಗಳು ಮೂಲೆಯಿಂದ ಕೂಡಿದ್ದರೆ ಗದ್ದೆಯ ಮಧ್ಯಭಾಗವನ್ನು ಮೇಲಿನಂತೆ ಬಿತ್ತನೆ ಮಾಡಿ, ಉಳಿದ ಭಾಗದಲ್ಲಿ ಯಂತ್ರವನ್ನು ತಿರುಗಿಸಿ ಚಲಿಸಿದರೆ ಇಡೀ ಗದ್ದೆಯ ನಾಟಿ ಮಾಡಬಹುದಾಗಿದೆ.

ಈ ಪದ್ಧತಿಯನ್ನು ಅನುಸರಿಸುವುದರಿಂದ ಸಸಿ ಮಡಿ ನಿರ್ಮಾಣ ವೆಚ್ಚ ಸಂಪೂರ್ಣ ಕಡಿತವಾಗುತ್ತದೆ. ಡ್ರಮ್‌ಸೀಡರ್‌ ಯಂತ್ರದ ತೂತುಗಳ ಮೂಲಕ ನಾಟಿ ಮಾಡುವುದರಿಂದ ನಿಗದಿತ ಅಂತರದಲ್ಲಿ ಬಿತ್ತನೆಯಾಗಿ ಇಳುವರಿ ಹೆಚ್ಚಲು ಸಾಧ್ಯವಾಗುತ್ತದೆ. ಈ ಪದ್ಧತಿಯಲ್ಲಿ ಕಡಿಮೆ ನೀರಿದ್ದರೂ ನಾಟಿ ಮಾಡಲು ಸಾಧ್ಯವಾಗುತ್ತದೆ. ಈ ಪದ್ಧತಿಯಲ್ಲಿ ನಾಟಿ ಮಾಡಲು ಕಡಿಮೆ ಕಾರ್ಮಿಕರು ಸಾಕಾಗುವುದರಿಂದ, ಕಾರ್ಮಿಕರ ಕೊರತೆ ಎದುರಿಸಲು ಈ ಪದ್ಧತಿ ಸೂಕ್ತವಾಗಿದೆ. ಈ ಪದ್ಧತಿಯಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2.5 ಎಕರೆ ಪ್ರದೇಶವನ್ನು ಸುಲಭವಾಗಿ ನಾಟಿ ಮಾಡಬಹುದಾಗಿದೆ. ನಾಟಿಯ ನಂತರ ನಡೆಯುವ ಕಳೆ ಕೀಳುವುದು, ಗೊಬ್ಬರ ಹಾಕುವುದು ಮುಂತಾದ ಕಾರ್ಯಗಳಿಗೂ ಈ ಪದ್ಧತಿ ಅನುಕೂಲವಾಗುವುದಲ್ಲದೇ, ಕಟಾವಿನ ವೇಳೆ ಯಂತ್ರ ಬಳಕೆಗೂ ನೆರವಾಗುತ್ತದೆ. ಈ ಪದ್ಧತಿಯನ್ನು ಅನುಸರಿಸಿದರೆ ಸಂಪ್ರದಾಯಿಕ ಪದ್ಧತಿಗಿಂತ ಶೇ 40 ರಿಂದ ಶೇ 50 ರಷ್ಟು ವೆಚ್ಚ ತಗ್ಗಿಸಲು ಸಾಧ್ಯ’ ಎನ್ನುತ್ತಾರೆ ಕೃಷಿ ವಿಜ್ಞಾನಿ ಟಿ.ಪಿ. ಭರತ್‌ಕುಮಾರ್‌.

ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ

ಭತ್ತದ ಕೃಷಿಯು ನಷ್ಟದ ಕಾರ್ಯವೆಂದು ಭತ್ತದ ಕೃಷಿಯನ್ನೇ ಕೈ ಬಿಡುತ್ತಿರುವ ರೈತರಿಗೆ ಡ್ರಮ್‌ಸೀಡರ್‌ ಪದ್ಧತಿಯು ವರದಾನವಾಗಿದ್ದು, ರೈತ ಕೂಟಗಳು ಒಟ್ಟಾಗಿ ಯಂತ್ರವನ್ನು ಖರೀದಿಸಿ ಉಳುಮೆಗೆ ಮುಂದಾದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ಪಡೆದರೆ ನಷ್ಟದ ಉದ್ಯಮವೆಂಬ ಮನೋಭಾವನೆಯನ್ನು ನಿವಾರಣೆಗೊಳಿಸಲು ಸಾಧ್ಯವಾಗುತ್ತದೆ. ಮಾಹಿತಿ ಅಥವಾ ಪ್ರಾತ್ಯಕ್ಷಿಕೆಗಾಗಿ ಕೃಷಿ ವಿಜ್ಞಾನ ಕೇಂದ್ರ 08263–228198 ಸಂಪರ್ಕಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !