ಶನಿವಾರ, ಡಿಸೆಂಬರ್ 14, 2019
23 °C
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಆರೋಪ

ಸಚಿವರ ರಾಜೀನಾಮೆಗೆ ಒತ್ತಾಯ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಸಾರ್ವಜನಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷಸಮಿತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಶಾಲೆಗಳಲ್ಲಿ ಇದೇ 26ರಂದು ಸಂವಿಧಾನ ದಿನ ಆಚರಿಸಬೇಕು ಹಾಗೂ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ ಎನ್ನುವ ವಿಷಯ ಕುರಿತು ಚರ್ಚೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದರು. ಅವರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಾಲಕೃಷ್ಣ ಮಾತನಾಡಿ,‘ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎನ್ನುವುದಾದರೆ ರಚಿಸಿದವರಾರು ಎನ್ನುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ಬಹಿರಂಗ ಪಡಿಸಬೇಕು. ಇಲ್ಲವಾದಲ್ಲಿ ಸುತ್ತೋಲೆ ಹೊರಡಿಸಿದ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನಕ್ಕೆ ಬಾರದೆ ಸುತ್ತೋಲೆ ಹೊರಡಿಸಲು ಸಾಧ್ಯವಿರುವುದಿಲ್ಲ. ಅಚಾತುರ್ಯದ ಹೊಣೆ ಹೊತ್ತು ಅವರು ರಾಜೀನಾಮೆ ನಿಡಬೇಕು’ ಎಂದು ಒತ್ತಾಯಿಸಿದರು.

ಸಮಿತಿ ಸಂಘಟನಾ ಸಂಚಾಲಕ ರವೀಂದ್ರ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನ ಹಾಗೂ ದಲಿತ ವಿರೋಧಿಯಾಗಿ ವರ್ತಿಸುತ್ತಿವೆ. ಆದರೂ ಮತದಾರರು ಅವರಿಗೆ ಮತ ನೀಡುತ್ತಿರುವುದು ವಿಷಾಧನೀಯ. ಈ ಬಗ್ಗೆ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, ‘ಉಪವಿಭಾಗಾಧಿಕಾರಿ ನಾಗರಾಜ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಜಿಲ್ಲೆಗೆ ಅವರು ಇತ್ತೀಚೆಗೆ ವರ್ಗಾವಣೆಯಾಗಿದ್ದರು. ಅಧಿಕಾರ ವಹಿಸಿಕೊಂಡ ಒಂಭತ್ತು ದಿನಗಳಲ್ಲಿಯೇ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಹೆಜ್ಜೆ ಇಟ್ಟಿದ್ದರು. ರೈತರು, ಬಡವರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಅವರನ್ನು ಮತ್ತೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಗೌಸ್ ಮೊಹಿಯುದ್ದೀನ್ ಮಾತನಾಡಿ, ‘ತಾಲ್ಲೂಕಿನ ಸತ್ತಿಹಳ್ಳಿ, ಮಾಚಗೊಂಡನಹಳ್ಳಿ, ಬಾಳೆಹಳ್ಳಿ ಗ್ರಾಮದ 8 ಮಂದಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವುದನ್ನು ಉಪವಿಭಾಗಾಧಿಕಾರಿ ನಾಗರಾಜ್ ಪತ್ತೆ ಹಚ್ಚಿದ್ದರು. ಮಂಜೂರಾತಿಯನ್ನು ವಜಾಗೊಳಿಸಿದ್ದರು. ಅದರಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು’ ಎಂದರು.

ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ಯೋಗೀಶ್, ಶಿವಣ್ಣ, ಬಸವರಾಜು, ಸತೀಶ್, ಶೈಲಾ, ಬಾಬು, ರೈತ ಸಂಘದ ಚಂದ್ರೇಗೌಡ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನಿಲಗುಳಿ ಪದ್ಮನಾಭ್, ಟಿ.ಎಲ್.ಗಣೇಶ್, ಕೃಷ್ಣಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)