ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಮಕ್ಕಳಿರುವ ಶಾಲೆ ವಿಲೀನ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ದ್ವಿತೀಯ ಪಿಯು ಪರೀಕ್ಷೆ ವೀಕ್ಷಣೆ
Last Updated 22 ಏಪ್ರಿಲ್ 2022, 16:18 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಉರ್ದು ಶಾಲೆಗಳನ್ನು ಮುಚ್ಚುವ ಚಿಂತನೆ ಸರ್ಕಾರದ ಮುಂದಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನ ಮಾಡುತ್ತೇವೆ. ಉರ್ದು, ಕನ್ನಡ, ಇಂಗ್ಲಿಷ್‌, ತಮಿಳು, ಮರಾಠಿ ಈ ಯಾವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ವಿಲೀನ ಮಾಡುವ ಚಿಂತನೆ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ದ್ವಿತೀಯ ಪಿಯು ಪರೀಕ್ಷಾ ಕೇಂದ್ರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲೆಗಳನ್ನು ವಿಲೀನ ಮಾಡಿ ಮಾದರಿ ಶಾಲೆ ಮಾಡುವ ಯೋಚನೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಶಿಕ್ಷಣ ಇಲಾಖೆಗೆ ನಿರ್ಧಾರ ಕೈಗೊಳ್ಳಲುಬಿಡಬೇಕು. ರಾಜಕೀಯ ಹಸ್ತಕ್ಷೇಪ ಇರಬಾರದು. ಆಗ ಎಲ್ಲವೂ ಸರಿಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷಾರ್ಥಿಗಳು 6ಲಕ್ಷಕ್ಕೂ ಹೆಚ್ಚು ಇದ್ದಾರೆ. ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ಮಾಡಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ’ ಎಂದರು.

‘ಪರೀಕ್ಷೆಗೆ ಎಷ್ಟು ಮಂದಿ ಗೈರಾಗಿದ್ದಾರೆ. ಯಾವ ಕಾರಣಕ್ಕೆ ಗೈರಾಗಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ’ ಎಂದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು ಹಾಜರಾದವರ ಪೈಕಿ ಬಾಹ್ಯ ಅಭ್ಯರ್ಥಿಗಳು ಹೆಚ್ಚು. ಕೋವಿಡ್‌ ಕಾರಣಕ್ಕೆ ಪರೀಕ್ಷೆ ರದ್ದಾಗಬಹುದು ಎಂದು ನಿರೀಕ್ಷೆ ಇಟ್ಟುಕೊಂಟು ತಯಾರಿ ಮಾಡದವರು ಪರೀಕ್ಷೆಗೆ ಗೈರಾಗಿದ್ದಾರೆ’ ಎಂದು ಉತ್ತರಿಸಿದರು.

3324 ಮಂದಿ ಪರೀಕ್ಷೆಗೆ ಹಾಜರು: ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರ ಶುರುವಾಗಿದ್ದು, ಸುಗುಮವಾಗಿ ನಡೆಯಿತು. ಮೊದಲ ದಿನ ‘ವ್ಯವಹಾರ ಅಧ್ಯಯನ’, ‘ತರ್ಕ ಶಾಸ್ತ್ರ’ ವಿಷಯ ಪರೀಕ್ಷೆಗಳು ನಡೆದವು. 3481 ಪರೀಕ್ಷಾರ್ಥಿಗಳ ಪೈಕಿ 157 ಮಂದಿ ಗೈರು ಹಾಜರಾಗಿದ್ದರು.

3324 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಿತು.

‘ಕೋವಿಡ್‌ ತಲ್ಲಣದಿಂದ ಹಿಂದಿನ ವರ್ಷ ಪರೀಕ್ಷೆ ನಡೆದಿರಲಿಲ್ಲ. ಈ ವರ್ಷ ಪರೀಕ್ಷೆ ಇದೆ. ಚೆನ್ನಾಗಿ ತಯಾರಿ ಮಾಡಿದ್ದೇನೆ. ಚೆನ್ನಾಗಿ ಬರೆಯುತ್ತೇನೆ’ ಎಂದು ಪರೀಕ್ಷಾರ್ಥಿ ವಿ.ಆರ್‌. ದಿವ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಪರೀಕ್ಷೆ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಡಿಡಿಪಿಯು ಪುಟ್ಟನಾಯ್ಕ ತಿಳಿಸಿದರು.

ಕೇಂದ್ರಗಳಿಗೆ ಪೊಲೀಸರು ನಿಯೋಜಿಸಲಾಗಿತ್ತು. ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯ ಝೆರಾಕ್ಸ್‌ ಕೇಂದ್ರಗಳನ್ನು ಮುಚ್ಚಿಸಲಾಗಿತ್ತು.

ಪಿಯುಸಿ ಪರೀಕ್ಷೆ : 7 ಮಂದಿ ಗೈರು
ನರಸಿಂಹರಾಜಪುರ:
ಶುಕ್ರವಾರದಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ವ್ಯವಹಾರ ಅಧ್ಯಯನ ಪರೀಕ್ಷೆಯಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 7 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಒಟ್ಟು 165 ವಿದ್ಯಾರ್ಥಿಗಳು ಪರೀಕ್ಷೆ ಹೆಸರು ನೋಂದಣಿ ಮಾಡಿಕೊಂಡಿದ್ದರು. 158 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT