ಸೋಮವಾರ, ಏಪ್ರಿಲ್ 6, 2020
19 °C

ಬಾಳೂರು ಹೊರಟ್ಟಿ ಶಾಲೆಗೆ 3 ಕೊಠಡಿ ನಿರ್ಮಾಣಕ್ಕೆ ಶಿಕ್ಷಣ ಸಚಿವ ಸೂಚನೆ

 ‌ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಟೆಂಟ್‌ ಮಳಿಗೆಯಲ್ಲಿ ನಡೆಯುತ್ತಿರುವ ಶಾಲೆಗೆ ಕೂಡಲೇ ಮೂರು ಕೊಠಡಿ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ತಿಳಿಸಿದರು.

ಜಿಲ್ಲೆಗೆ ಖಾಸಗಿ ಕಾರ್ಯಕ್ರಮಕ್ಕೆ ಸೋಮವಾರ ಬಂದಿದ್ದ ಅವರು ಶಾಲೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಾಳೂರು ಹೊರಟ್ಟಿ ಗ್ರಾಮದ ಶಾಲೆ ಮಕ್ಕಳು ಟೆಂಟ್‌ ಜಾಗದಲ್ಲಿ ಓದಲು ಆಗದಿರುವ ವಾತಾವರಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ತಲುಪಿತ್ತು. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳ ಜತೆ ಮಾತನಾಡಿದ್ದೇನೆ. ತರಗತಿ ಎಂದರೆ ಗಾಳಿ, ಬೆಳಕಿನ ವಾತಾವರಣ ಇರಬೇಕು. ಮಳೆ, ಭೂಕುಸಿತದಿಂದ ಈ ಶಾಲೆ ಮಕ್ಕಳು ಆ ವಾತಾವರಣದಿಂದ ವಂಚಿತರಾಗಿದ್ದಾರೆ. ಮೂರು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘1ರಿಂದ 5ನೇ ತರಗತಿವರೆಗಿನ ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವಿದ್ಯಾರ್ಥಿಗಳು ಇದ್ದಾರೆ. ಈ ಗ್ರಾಮಕ್ಕೆ ಒಂದೂವರೆ ಕಿಲೋ ಮೀಟರ್‌ ದೂರದ ಬಾಳೂರಿನಲ್ಲಿ ಒಂದು ಶಾಲೆ ಇದೆ. ಆ ಶಾಲೆಯಲ್ಲಿ 42 ಮಕ್ಕಳು ಇದ್ದಾರೆ. ಮಕ್ಕಳು ಕಡಿಮೆ ಇದ್ದರೆ ಓದುವ ಆಸಕ್ತಿ ಇರಲ್ಲ ಎಂದು ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿ ತೀರ್ಮಾನ ಕೈಗೊಳುತ್ತೇನೆ’ ಎಂದರು. 

ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಕಾರ್ಯಾಗಾರ: ‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗಲ್ಲ ಎಂದು ಕೆಲವು ಕಡೆ ದೂರುಗಳಿವೆ. ಇನ್ನು ಕೆಲವು ಕಡೆ ಶಿಕ್ಷಕರು ಶಾಲೆಗೆ ಬರದೇ ಇರುವುದು ಗಮನಕ್ಕೆ ಬಂದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ತಕ್ಷಣ ರಾಜ್ಯದ ಎಲ್ಲ ಬಿಇಒ, ಡಿಡಿಪಿಐಗಳಿಗೆ ಕಾರ್ಯಾಗಾರ ಏರ್ಪಡಿಸಿ, ಕಡಿವಾಣ ಹಾಕುವ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಉತ್ತರಿಸಿದರು.

‘ಕೆಲವೆಡೆ ಶಿಕ್ಷಕರನ್ನು ವರ್ಗಾವಣೆ ಮಾಡಿದಾಗ ಮಕ್ಕಳು ಬಿಕ್ಕಿಬಿಕ್ಕಿ ಅತ್ತಿರುವುದನ್ನು ಗಮನಿಸಿದ್ದೇನೆ. ಶಿಕ್ಷಕರು ಒಂದು ಶಾಲೆಯಲ್ಲಿ ಎಷ್ಟು ವರ್ಷ ಇರುತ್ತಾರೆ ಎನ್ನುವುದಕ್ಕಿಂತ ಯಾವ ರೀತಿ ಪಾಠ ಮಾಡುತ್ತಾರೆ ಎಂಬುದು ಮುಖ್ಯ. ಇಲಾಖೆ ನೀತಿ ಅನುಸಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಎಲ್ಲ ಶಾಲೆಗಳಲ್ಲಿ ಕನ್ನಡ ಕಲಿಸುವುದು ಕಡ್ಡಾಯ: ‘ಟಿಬೆಟಿಯನ್ನರ ಕ್ಯಾಂಪ್‌ಗಳಲ್ಲಿನ ಶಾಲೆಗಳಲ್ಲಿ ಆರನೇ ತರಗತಿಯಿಂದ ಕನ್ನಡ ಕಲಿಸಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ (ಐಸಿಎಸ್‌ಇ, ಸಿಬಿಎಸ್‌ಇ...) ಒಂದನೇ ತರಗತಿಯಿಂದ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂಬ ಕಾನೂನು ಇದೆ. ಅದನ್ನು ಪಾಲಿಸಬೇಕು ಎಂದು ಅವರಿಗೆ ಲಿಖಿತವಾಗಿಯೂ ತಿಳಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

 ವರದಿ ಪರಿಣಾಮ

‘ಪ್ರಜಾವಾಣಿಯ’ಲ್ಲಿ ಇದೇ 15ರಂದು ‘ಸಚಿವರೇ ದಮ್ಮಯ್ಯ ಇತ್ತ ನೋಡಿ...’ ಶೀರ್ಷಿಕೆಯಡಿ ಬಾಳೂರುಹೊರಟ್ಟಿ ಗ್ರಾಮದ ಟೆಂಟ್‌ ಮಳಿಗೆ ಶಾಲೆ ಸಹಿತ ರಾಜ್ಯದ ವಿವಿಧ ಶಾಲೆಗಳ ದುಃಸ್ಥಿತಿ ಬಗ್ಗೆ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು